ನವದೆಹಲಿ: ಭಾರತದ ಕ್ರೀಡಾಪಟುಗಳು ಇಟಲಿಯ ಟೂರಿನ್‌ನಲ್ಲಿ ನಡೆಯುತ್ತಿರುವ ಚಳಿಗಾಲದ ವಿಶೇಷ ಒಲಿಂಪಿಕ್ ಕೂಟದಲ್ಲಿ ಮತ್ತೆ 15 ಪದಕಗಳನ್ನು ಕೊರಳಿಗೇರಿಸಿಕೊಂಡಿದ್ದಾರೆ.
ಇದೇ 8ರಿಂದ ಆರಂಭವಾದ ಕೂಟದಲ್ಲಿ ಭಾರತದ ಸ್ಪರ್ಧಿಗಳು ಈ ಮೊದಲು ಒಂಬತ್ತು ಪದಕಗಳನ್ನು ಗೆದ್ದಿದ್ದರು. ಈ ಮೂಲಕ ಪದಕಗಳ ಸಂಖ್ಯೆ 24ಕ್ಕೆ ಏರಿಕೆಯಾಗಿದೆ. ಕ್ರೀಡಾಕೂಟಕ್ಕೆ ಭಾನುವಾರ ತೆರೆಬೀಳಲಿದೆ.
50 ಮೀಟರ್ಸ್ ಓಟದಲ್ಲಿ (ಎಂ–03) ವಾಸು ತಿವಾರಿ ಚಿನ್ನದ ಪದಕ ಗೆದ್ದರು. 50 ಮೀ. ಓಟದ ಎಂ–04 ಮತ್ತು ಎಫ್–02 ವಿಭಾಗಗಳಲ್ಲಿ ಕ್ರಮವಾಗಿ ಜಹಾಂಗೀರ್ ಮತ್ತು ತಾನ್ಯಾ ಬೆಳ್ಳಿ ಪದಕ ಜಯಿಸಿದರು.
200 ಮೀ ಓಟದಲ್ಲಿ (ಎಂಪಿ–12) ಅನಿಲ್ ಕುಮಾರ್ ಚಾಂಪಿಯನ್ ಆದರು. ಎಫ್–12 ವಿಭಾಗದಲ್ಲಿ ಹರ್ಲೀನ್ ಕೌರ್ ಬೆಳ್ಳಿ ಪದಕ ಗೆದ್ದರು. 50 ಮೀ ಓಟದ ಎಫ್–03 ವಿಭಾಗದಲ್ಲಿ ಶಾಲಿನಿ ಚೌಹಾಣ್ ಕಂಚಿನ ಪದಕಕ್ಕೆ ಕೊರಳೊಡ್ಡಿದರು.
ಹಿಮದ ಮೇಲೆ ನಡೆದ ಸ್ಪರ್ಧೆಗಳಲ್ಲೂ ಭಾರತದ ಸ್ಪರ್ಧಿಗಳು ಮಿಂಚು ಹರಿಸಿದರು. ಶಾರ್ಟ್ ಟ್ರ್ಯಾಕ್ ಸ್ಪೀಡ್ ಸ್ಕೇಟಿಂಗ್ ಸ್ಪರ್ಧೆಗಳಲ್ಲಿ (111ಎಂ ಎಫ್–1 ಮತ್ತು 222 ಎಂ ಎಫ್2) ಜಿಯಾರಾ ಪೋರ್ಟರ್ ಕ್ರಮವಾಗಿ ಬೆಳ್ಳಿ ಪದಕ ಗೆದ್ದರು. 500 ಎಂ ಎಂ–3 ವಿಭಾಗ ಮತ್ತು 777ಎಂ ಎಂ–2 ವಿಭಾಗಗಳಲ್ಲಿ ತಾಂಶು ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗಳಿಸಿದರು.
ಆಲ್ಪೈನ್ ಸ್ಕೀಯಿಂಗ್ (ಇಂಟರ್‌ಮೀಡಿಯೆಟ್ ಸೂಪರ್ ಜಿ ಎಂ–04 ಮತ್ತು ಎಂ–05 ವಿಭಾಗ) ಸ್ಪರ್ಧೆಯಲ್ಲಿ ಭಾರತದ ದೀಪಕ್ ಠಾಕೂರ್ ಮತ್ತು ಗಿರಿಧರ್ ಅವರು ಅಸಾಧಾರಣ ಕೌಶಲ ಪ್ರದರ್ಶಿಸಿ ಚಿನ್ನ ಗೆದ್ದರು. ನೊವೈಸ್ ಸೂಪರ್ ಜಿ ಎಂ–01 ವಿಭಾಗದಲ್ಲಿ ಅಭಿಷೇಕ್ ಕುಮಾರ್ ಬೆಳ್ಳಿ ಪದಕ ಜಯಿಸಿದರು. ಇಂಟರ್ ಮಿಡಿಯೆಟ್ ಸೂಪರ್ ಜಿ ಎಫ್–03 ಸ್ಪರ್ಧೆಯಲ್ಲಿ ರಾಧಾದೇವಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.