ADVERTISEMENT

ಚೆಸ್‌: ಮೆಂಡೋಕಾ ರನ್ನರ್‌ ಅಪ್‌

ಪಿಟಿಐ
Published 11 ಜುಲೈ 2020, 8:26 IST
Last Updated 11 ಜುಲೈ 2020, 8:26 IST
ಚೆಸ್‌
ಚೆಸ್‌   

ಚೆನ್ನೈ: ಭಾರತದ ಇಂಟರ್‌ನ್ಯಾಷನಲ್‌ ಮಾಸ್ಟರ್‌ ಲಯನ್‌ ಲ್ಯೂಕ್‌ ಮೆಂಡೋಕಾ, ಸರ್ಬಿಯಾದಲ್ಲಿ ನಡೆದ ಪಾರಸಿನ್‌ ಓಪನ್‌ ಚೆಸ್‌ ಟೂರ್ನಿಯಲ್ಲಿ ರನ್ನರ್ ಅಪ್‌ ಆಗಿದ್ದಾರೆ.

ಗೋವಾದ 14 ವರ್ಷ ವಯಸ್ಸಿನ ಆಟಗಾರ, ಒಂಬತ್ತು ಸುತ್ತುಗಳಿಂದ ಒಟ್ಟು ಏಳು ಪಾಯಿಂಟ್ಸ್‌ ಕಲೆಹಾಕಿದರು.

ಭಾರತ ಸರ್ಕಾರವು ಅಂತರರಾಷ್ಟ್ರೀಯ ವಿಮಾನಯಾನದ ಮೇಲೆ ನಿರ್ಬಂಧ ಹೇರಿರುವ ಕಾರಣ ಮೆಂಡೋಕಾ ಹಾಗೂ ಅವರ ತಂದೆ ಲಿಂಡನ್‌ ಅವರು ಮೂರು ತಿಂಗಳುಗಳಿಂದ ಹಂಗರಿಯಲ್ಲಿ ಸಿಲುಕಿಕೊಂಡಿದ್ದಾರೆ.

ADVERTISEMENT

ಜೂನ್‌ನಲ್ಲಿ ನಡೆದಿದ್ದ ಬಾಲಾಟನ್‌ ಚೆಸ್‌ ಉತ್ಸವದಲ್ಲಿ ಪಾಲ್ಗೊಂಡು ಪ್ರಶಸ್ತಿ ಗೆದ್ದಿದ್ದ ಮೆಂಡೋಕಾ ಅವರು ಶನಿವಾರದಿಂದ ಪಾರಸಿನ್‌ನಲ್ಲಿ ನಡೆಯುವ ಜಿಎಂ ರೌಂಡ್‌ ರಾಬಿನ್‌ ಟೂರ್ನಿಯಲ್ಲಿ ಸ್ಪರ್ಧಿಸಲಿದ್ದಾರೆ.

‘ಈ ಟೂರ್ನಿಯಲ್ಲಿ ನನ್ನಿಂದ ಉತ್ತಮ ಸಾಮರ್ಥ್ಯ ಮೂಡಿಬಂದಿದೆ. ಐದು ಪಂದ್ಯಗಳಲ್ಲಿ ಗೆದ್ದಿದ್ದರಿಂದ ತುಂಬಾ ಖುಷಿಯಾಗಿದೆ. ಅಂತಿಮ ಸುತ್ತಿನಲ್ಲಿ ಪರಿಣಾಮಕಾರಿಯಾಗಿ ಆಡಿದ್ದರೆ ಗ್ರ್ಯಾಂಡ್‌ ಮಾಸ್ಟರ್‌ ನಾರ್ಮ್‌ ಗಿಟ್ಟಿಸಿಕೊಳ್ಳಬಹುದಿತ್ತು. ಅದು ಕೈತಪ್ಪಿದ್ದಕ್ಕೆ ಕೊಂಚ ಬೇಸರವೂ ಆಗಿದೆ’ ಎಂದು ಮೆಂಡೋಕಾ ಹೇಳಿದ್ದಾರೆ.

ಮೆಂಡೋಕಾ ಅವರು ಏರೊಫ್ಲಾಟ್‌ ಓಪನ್‌ ಟೂರ್ನಿಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಈ ವರ್ಷದ ಫೆಬ್ರುವರಿಯಲ್ಲಿ ಮಾಸ್ಕೊಗೆ ತೆರಳಿದ್ದರು. ವಿಯೆಟ್ನಾಂನಲ್ಲಿ ನಿಗದಿಯಾಗಿದ್ದ ಟೂರ್ನಿಯೊಂದು ರದ್ದಾಗಿದ್ದರಿಂದ ಅವರು ಬುಡಾಪೆಸ್ಟ್‌ಗೆ ಪ್ರಯಾಣ ಬೆಳೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.