ADVERTISEMENT

ಸುಮಿತ್‌ ಕುಮಾರ್‌ ಕೈಚಳಕ

ಹಾಕಿ: ಆಸ್ಟ್ರೇಲಿಯಾ ‘ಎ’ ಎದುರು ಜಯಭೇರಿ ಮೊಳಗಿಸಿದ ಭಾರತ

ಪಿಟಿಐ
Published 10 ಮೇ 2019, 20:00 IST
Last Updated 10 ಮೇ 2019, 20:00 IST
ರೂಪಿಂದರ್‌ ಪಾಲ್‌ ಸಿಂಗ್‌ (ಬಲ ತುದಿ)
ರೂಪಿಂದರ್‌ ಪಾಲ್‌ ಸಿಂಗ್‌ (ಬಲ ತುದಿ)   

ಪರ್ತ್‌: ಯುವ ಸ್ಟ್ರೈಕರ್‌ ಸುಮಿತ್‌ ಕುಮಾರ್‌ ಜೂನಿಯರ್‌ ಮತ್ತು ಅನುಭವಿ ಡ್ರ್ಯಾಗ್‌ಫ್ಲಿಕ್ಕರ್‌ ರೂಪಿಂದರ್‌ ಪಾಲ್‌ ಸಿಂಗ್‌ ಅವರು ಶುಕ್ರವಾರ ಪರ್ತ್ ಕ್ರೀಡಾಂಗಣದಲ್ಲಿ ಮೋಡಿ ಮಾಡಿದರು.

ಇವರ ಕೈಚಳಕದಲ್ಲಿ ಅರಳಿದ ಗೋಲುಗಳ ಬಲದಿಂದ ಭಾರತ ತಂಡವು ಆಸ್ಟ್ರೇಲಿಯಾ ಪ್ರವಾಸದ ಪಂದ್ಯದಲ್ಲಿ ಜಯಭೇರಿ ಮೊಳಗಿಸಿತು.

ಮನಪ್ರೀತ್‌ ಸಿಂಗ್‌ ಬಳಗವು ತನ್ನ ಎರಡನೇ ಹೋರಾಟದಲ್ಲಿ 3–0 ಗೋಲುಗಳಿಂದ ಆಸ್ಟ್ರೇಲಿಯಾ ‘ಎ’ ತಂಡವನ್ನು ಸೋಲಿಸಿತು.

ADVERTISEMENT

ಬುಧವಾರ ನಡೆದಿದ್ದ ಮೊದಲ ಪಂದ್ಯದಲ್ಲಿ ಭಾರತ 2–0 ಗೋಲುಗಳಿಂದ ಥಂಡರ್‌ ಸ್ಟಿಕ್ಸ್‌ ಎದುರು ಗೆದ್ದಿತ್ತು.

ಮೊದಲ ಕ್ವಾರ್ಟರ್‌ನಲ್ಲಿ ಭಾರತ ತಂಡ ಪ್ರಾಬಲ್ಯ ಮೆರೆಯಿತು. ಮನಪ್ರೀತ್‌ ಪಡೆ ಶುರುವಿನಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ತಂಡದ ಈ ತಂತ್ರಕ್ಕೆ ಆರನೇ ನಿಮಿಷದಲ್ಲಿ ಮೊದಲ ಯಶಸ್ಸು ಸಿಕ್ಕಿತು.

ರೂ‍ಪಿಂದರ್‌ ಪಾಲ್‌ ಅವರು ಶಾರ್ಟ್‌ ಕಾರ್ನರ್‌ನಿಂದ ‘ಫ್ಲಿಕ್‌’ ಮಾಡಿದ ಚೆಂಡು ಮಿಂಚಿನ ಗತಿಯಲ್ಲಿ ಸಾಗಿ ಎದುರಾಳಿ ತಂಡದ ಗೋಲುಪೆಟ್ಟಿಗೆಯೊಳಗೆ ಸೇರುತ್ತಿದ್ದಂತೆ ಭಾರತದ ಪಾಳಯದಲ್ಲಿ ಸಂಭ್ರಮ ಗರಿಗೆದರಿತು.

ನಂತರ ಪ್ರವಾಸಿ ಪಡೆಯು ಇನ್ನಷ್ಟು ಚುರುಕಾಗಿ ಆಡಿತು. 12ನೇ ನಿಮಿಷದಲ್ಲಿ ಸುಮಿತ್‌ ಮೋಡಿ ಮಾಡಿದರು. ನಾಯಕ ಮನಪ್ರೀತ್‌ ತಮ್ಮತ್ತ ತಳ್ಳಿದ ಚೆಂಡನ್ನು ಅವರು ಕಣ್ಣೆವೆ ಮುಚ್ಚಿ ತೆರೆಯುವುದರೊಳಗೆ ಗುರಿ ಮುಟ್ಟಿಸಿ ತಂಡದ ಖುಷಿಯನ್ನು ಇಮ್ಮಡಿಗೊಳಿಸಿದರು. ಇದರ ಬೆನ್ನಲ್ಲೇ 21 ವರ್ಷ ವಯಸ್ಸಿನ ಸುಮಿತ್‌ ಮತ್ತೊಮ್ಮೆ ಕೈಚಳಕ ತೋರಿದರು. 13ನೇ ನಿಮಿಷದಲ್ಲಿ ಮತ್ತೊಂದು ಗೋಲು ಹೊಡೆದು ಸಂಭ್ರಮಿಸಿದರು.

ಎರಡನೇ ಕ್ವಾರ್ಟರ್‌ನಲ್ಲಿ ಭಾರತ ತಂಡವು ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿತು. ಡಿಫೆಂಡರ್‌ ಹರ್ಮನ್‌ಪ್ರೀತ್‌ ಸಿಂಗ್‌ ಎದುರಾಳಿ ಆಟಗಾರರ ಗೋಲು ಗಳಿಸುವ ಹಲವು ಅವಕಾಶಗಳಿಗೆ ಅಡ್ಡಿಯಾದರು.

ಎರಡನೇ ಕ್ವಾರ್ಟರ್‌ನ ಆಟ ಮುಗಿಯಲು ಕೆಲ ನಿಮಿಷ ಬಾಕಿ ಇದ್ದಾಗ ಆಸ್ಟ್ರೇಲಿಯಾ ‘ಎ’ ತಂಡಕ್ಕೆ ಪೆನಾಲ್ಟಿ ಕಾರ್ನರ್‌ ಲಭಿಸಿತ್ತು. ಈ ಅವಕಾಶದಲ್ಲಿ ಎದುರಾಳಿ ಆಟಗಾರ ಬಾರಿಸಿದ ಚೆಂಡನ್ನು ಭಾರತದ ಗೋಲ್‌ಕೀಪರ್‌ ಕೃಷ್ಣ ಪಾಠಕ್‌ ಅಮೋಘ ರೀತಿಯಲ್ಲಿ ತಡೆದರು.

ದ್ವಿತೀಯಾರ್ಧದಲ್ಲೂ ಭಾರತದ ಆಟ ರಂಗೇರಿತು. ಮನಪ್ರೀತ್‌ ಪಡೆ ಮುನ್ನಡೆ ಹೆಚ್ಚಿಸಿಕೊಳ್ಳಲು ಸತತವಾಗಿ ಪ್ರಯತ್ನಿಸಿತು. ಆದರೆ ಎದುರಾಳಿ ತಂಡದ ರಕ್ಷಣಾ ಕೋಟೆ ಭೇದಿಸಲು ತಂಡದ ಆಟಗಾರರಿಗೆ ಸಾಧ್ಯವಾಗಲಿಲ್ಲ.

ಸಮಬಲ ಸಾಧಿಸುವ ಆಸ್ಟ್ರೇಲಿಯಾ ‘ಎ’ ತಂಡದ ಕನಸೂ ಕೈಗೂಡಲಿಲ್ಲ.

‘ಮೊದಲ ಕ್ವಾರ್ಟರ್‌ನಲ್ಲೇ ಮೂರು ಗೋಲು ಗಳಿಸಿದ್ದರಿಂದ ಆಟಗಾರರು ನಿರಾಳರಾಗಿದ್ದರು. ಎರಡು ಮತ್ತು ಮೂರನೇ ಕ್ವಾರ್ಟರ್‌ಗಳಲ್ಲಿ ಆಸ್ಟ್ರೇಲಿಯಾ ‘ಎ’ ತಂಡ ಪ್ರತಿರೋಧ ಒಡ್ಡಿತು. ಹೀಗಾಗಿ ನಾವು ರಕ್ಷಣೆಗೆ ಹೆಚ್ಚು ಒತ್ತು ನೀಡಿದೆವು. ಸೋಮವಾರ ನಡೆಯುವ ಮೂರನೇ ಪಂದ್ಯದಲ್ಲೂ ಗೆಲ್ಲಬೇಕೆಂಬುದು ನಮ್ಮ ಗುರಿ. ಅದಕ್ಕಾಗಿ ಸೂಕ್ತ ಸಿದ್ಧತೆ ಮಾಡಿಕೊಳ್ಳುತ್ತೇವೆ’ ಎಂದು ಭಾರತ ತಂಡದ ಮುಖ್ಯ ಕೋಚ್‌ ಗ್ರಹಾಂ ರೀಡ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.