ADVERTISEMENT

ವಿಶ್ವ ಆರ್ಚರಿ: ಪ್ರಶಸ್ತಿ ಸುತ್ತಿಗೆ ಭಾರತ

2005ರ ನಂತರ ಮೊದಲ ಬಾರಿ ಸಾಧನೆ; ಆತಿಥೇಯ ಹಾಲೆಂಡ್‌ಗೆ ಸೋಲು

ಪಿಟಿಐ
Published 13 ಜೂನ್ 2019, 20:00 IST
Last Updated 13 ಜೂನ್ 2019, 20:00 IST
   

ಡೆನ್‌ ಬಾಷ್‌, ದಿ ನೆದರ್ಲೆಂಡ್ಸ್: ಈಗಾಗಲೇ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸ್ಥಾನ ಖಚಿತಪಡಿಸಿಕೊಂಡಿರುವ ಭಾರತ ಪುರುಷರ ರಿಕರ್ವ್‌ ತಂಡ, ವಿಶ್ವ ಆರ್ಚರಿ ಚಾಂಪಿಯನ್‌ಷಿಪ್‌ನ ಫೈನಲ್‌ ಪ್ರವೇಶಿಸಿದೆ. ಆತಿಥೇಯ ಹಾಲೆಂಡ್‌ ತಂಡವನ್ನು ಗುರುವಾರ ಸೋಲಿಸಿದ ಭಾರತ ತಂಡ, 2005ರ ನಂತರ ಇದೇ ಮೊದಲ ಬಾರಿ ಪ್ರಶಸ್ತಿ ಸುತ್ತು ತಲುಪಿದೆ.

ಮೊದಲ ಪ್ರಶಸ್ತಿಯ ನಿರೀಕ್ಷೆಯಲ್ಲಿರುವ ಭಾರತ, ಭಾನುವಾರ ನಡೆಯುವ ಫೈನಲ್‌ನಲ್ಲಿ ಚೀನಾ ತಂಡವನ್ನು ಎದುರಿಸಲಿದೆ. ಚೀನಾ ಇನ್ನೊಂದು ಸೆಮಿಫೈನಲ್‌ನಲ್ಲಿ ದಕ್ಷಿಣ ಕೊರಿಯಾ ತಂಡವನ್ನು 6–2ರಲ್ಲಿ ಸೋಲಿಸಿತು.

ಭಾರತ ತಂಡದ ಬಿಲ್ಗಾರರು ಬುಧವಾರ ಸೆಮಿಫೈನಲ್‌ಗೆ ಅರ್ಹತೆ ಪಡೆದಾಗಲೇ, ‘ಟೋಕಿಯೊ ಒಲಿಂಪಿಕ್ಸ್‌ಗೆ ಟಿಕೆಟ್‌’ ಖಚಿತಪಡಿಸಿಕೊಂಡಿದ್ದರು. ತರುಣದೀಪ್‌ ರಾಯ್, ಅತನು ದಾಸ್‌ ಮತ್ತು ಪ್ರವೀಣ್‌ ಜಾಧವ್‌ ಅವರನ್ನೊಳಗೊಂಡ ತಂಡ ಹಿನ್ನಡೆಯಿಂದ ಚೇತರಿಸಿಕೊಂಡು 5–4 ರಿಂದ ಪ್ರಬಲ ಹಾಲೆಂಡ್‌ ತಂಡವನ್ನು ಮಣಿಸಿತು. ಈ ಕೂಟದಲ್ಲಿ ಹಾಲೆಂಡ್‌ ಎರಡನೇ ಶ್ರೇಯಾಂಕ ಪಡೆದಿತ್ತು.

ADVERTISEMENT

ಭಾರತ ರಿಕರ್ವ್‌ ತಂಡ, 2005ರಲ್ಲಿ ಮ್ಯಾಡ್ರಿಡ್‌ನಲ್ಲಿ ನಡೆದಿದ್ದ ಚಾಂಪಿಯನ್‌ ಷಿಪ್‌ನಲ್ಲಿ ಕೊನೆಯ ಬಾರಿ ಫೈನಲ್‌ ತಲುಪಿತ್ತು. ಆ ಸಲ ಅಂತಿಮ ಸುತ್ತಿನಲ್ಲಿ ಕೊರಿಯಾ ಎದುರು 232–244 ಅಂತರದಿಂದ ಪರಾಭವಗೊಂಡಿತ್ತು. ತರುಣ್‌ದೀಪ್‌ ರೈ ಆ ಬಾರಿಯೂ ತಂಡದಲ್ಲಿ ಆಡಿದ್ದರು.

ಕಾಂಪೌಂಡ್‌ ಟೀಮ್ ವಿಭಾಗದಲ್ಲಿ ಭಾರತ ಮಹಿಳೆಯರ ತಂಡಕ್ಕೆ ಪದಕದ ಆಸೆ ಜೀವಂತವಾಗಿದೆ. ಶನಿವಾರ ನಡೆಯುವ ಕಂಚಿನ ಪದಕದ ಪ್ಲೇ ಆಫ್‌ ಪಂದ್ಯದಲ್ಲಿ ಟರ್ಕಿ ವಿರುದ್ಧ ಭಾರತ ವನಿತೆಯರು ಆಡಲಿದ್ದಾರೆ.

ಕ್ವಾರ್ಟರ್‌ ಫೈನಲ್‌ನಲ್ಲಿ ಚೀನಾ ತೈಪಿ ವಿರುದ್ಧ 6–0 ಗೋಲುಗಳಿಂದ ಜಯಗಳಿಸಿದ್ದ ಭಾರತ, ಉಪಾಂತ್ಯದಲ್ಲಿ ಹಾಲೆಂಡ್‌ ತಂಡದಿಂದ ಪ್ರಬಲ ಸವಾಲು ಎದುರಿಸಿತು. ಎರಡು ವರ್ಷ ಹಿಂದೆ ಮೆಕ್ಸಿಕೊದಲ್ಲಿ ನಡೆದ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗಳಿಸಿದ್ದ ವಿಶ್ವದ ಎರಡನೇ ನಂಬರ್‌ ಆಟಗಾರ ಸ್ಟೀವ್‌ ವಿಯ್ಲರ್‌ ಹಾಲೆಂಡ್‌ ತಂಡದ ನಾಯಕರಾಗಿದ್ದರು. 2016ರ ರಿಯೊ ಒಲಿಂಪಿಕ್ಸ್ ಸೆಮಿಫೈನಲ್‌ ತಲುಪಿದ್ದ ಸೀಫ್‌ ವಾನ್‌ ಡೆನ್‌ ಬರ್ಗ್‌ ಮತ್ತು 2012ರ ಲಂಡನ್‌ ಒಲಿಂಪಿಕ್ಸ್‌ ಸೆಮಿಫೈನಲ್ ತಲುಪಿದ್ದ ರಿಕ್‌ ಈ ತಂಡದಲ್ಲಿದ್ದರು.

ಚೀನಾ ವಿರುದ್ಧ ಫೈನಲ್‌ ಪಂದ್ಯದ ಬಗ್ಗೆ ಕೇಳಿದಾಗ, ‘ನಾವು ನಮ್ಮಿಂದಾದಷ್ಟು ಉತ್ತಮ ಪ್ರದರ್ಶನ ನೀಡುತ್ತೇವೆ. ನಮಗೆ ಈ ಹಂತಕ್ಕೆ ಬಂದಿರುವುದು ಹೆಮ್ಮೆ ಎನಿಸಿದೆ’ ಎಂದು ಅತನು ದಾಸ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.