ADVERTISEMENT

ಭಾರತಕ್ಕೆ ಉರುಗ್ವೆ ಎದುರಾಳಿ

ಪಿಟಿಐ
Published 14 ಜೂನ್ 2019, 20:43 IST
Last Updated 14 ಜೂನ್ 2019, 20:43 IST
ಭಾರತ ಮಹಿಳಾ ಹಾಕಿ ತಂಡ
ಭಾರತ ಮಹಿಳಾ ಹಾಕಿ ತಂಡ   

ಹಿರೋಷಿಮಾ: ಉರುಗ್ವೆ ವಿರುದ್ಧ ಆಡುವ ಮೂಲಕ ಎಫ್‌ಐಎಚ್‌ ಮಹಿಳಾ ಸರಣಿಯ ಫೈನಲ್ಸ್‌ನಲ್ಲಿ ಶನಿವಾರ ಭಾರತ ತನ್ನ ಅಭಿಯಾನ ಆರಂಭಿಸಲಿದೆ.

ತಂಡ ಮೊದಲ ಸ್ಥಾನ ಗಳಿಸುವ ವಿಶ್ವಾಸದಲ್ಲಿದೆ. ಈ ಟೂರ್ನಿಯಲ್ಲಿ ಮೊದಲ ಎರಡು ಸ್ಥಾನ ಗಳಿಸಲಿರುವ ತಂಡಗಳು ಈ ವರ್ಷದ ಕೊನೆಯಲ್ಲಿ ನಡೆಯುವ ಟೋಕಿಯೊ ಒಲಿಂಪಿಕ್ಸ್‌ ಅರ್ಹತಾ ಟೂರ್ನಿಯಲ್ಲಿ ಆಡುವ ಅವಕಾಶ ಪಡೆಯಲಿವೆ.

ರಾಣಿ ರಾಂಪಾಲ್‌ ತಂಡದ ನೇತೃತ್ವ ವಹಿಸಿದ್ದಾರೆ. ವಿಶ್ವ 9ನೇ ಕ್ರಮಾಂಕದ ಲ್ಲಿರುವ ಭಾರತ, ತನ್ನ ಮುಂದಿನ ಪಂದ್ಯಗಳಲ್ಲಿ– ಭಾನುವಾರ ಪೋಲೆಂಡ್‌ ವಿರುದ್ಧ ಮತ್ತು ಮಂಗಳವಾರ ಫಿಜಿ ವಿರುದ್ಧ ಆಡಲಿದೆ.

ADVERTISEMENT

‘ನಮ್ಮ ಮುಂದಿರುವ ಒಂದೇ ಯೋಜನೆ 2020ರ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವುದು. ಈ ಸವಾಲಿಗಾಗಿ ಆಟಗಾರ್ತಿಯರನ್ನು ಸಜ್ಜುಗೊಳಿಸಲಾಗಿದೆ’ ಎಂದು ಕೋಚ್‌ ಶ್ಯೋರ್ಡ್‌ಮ್ಯಾರಿಜ್ ಶುಕ್ರವಾರ ಇಲ್ಲಿ ತಿಳಿಸಿದರು.

‘ನಮ್ಮ ತಂಡವೀಗ ಮೊದಲಿಗಿಂತ ಅನುಭವಿ. ಈ ಟೂರ್ನಿಯ ಮಹತ್ವವನ್ನು ಆಟಗಾರ್ತಿಯರೂ ಅರಿತಿದ್ದಾರೆ. ಈ ಟೂರ್ನಿಯಲ್ಲಿ ಗೆದ್ದ ತಂಡ 500 ರ‍್ಯಾಂಕಿಂಗ್‌ ಪಾಯಿಂಟ್‌ಗಳನ್ನೂ ಪಡೆ ಯಲಿದೆ. ಮುಂದಿನ ಅರ್ಹತಾ ಸುತ್ತಿಗೂ ಇದರಿಂದ ಅನುಕೂಲವಾಗಲಿದೆ’ ಎಂದು ಅವರು ಹೇಳಿದರು.

‘ನಾವು ಸ್ಥಳೀಯ ಕ್ಲಬ್‌ ಮತ್ತು ಜಪಾನ್‌ ತಂಡದ ವಿರುದ್ಧ ಎರಡು ಅಭ್ಯಾಸ ಪಂದ್ಯಗಳನ್ನಾಡಿದೆವು. ವಾರಕ್ಕೆ ಮೊದಲೇ ಇಲ್ಲಿಗೆ ಬಂದಿರುವ ಕಾರಣ ತರಬೇತಿಗೂ ಸಮಯ ಸಿಕ್ಕಿದ್ದು, ಪಿಚ್‌ ಅರ್ಥಮಾಡಿಕೊಳ್ಳಲೂ ಅವಕಾಶವಾಗಿದೆ’ ಎಂದರು.

‘ಇಲ್ಲಿನ ಕೆಲವು ತಂಡಗಳ ವಿರುದ್ಧ 2017ರ ವಿಶ್ವ ಲೀಗ್‌ ಎರಡನೇ ಸುತ್ತಿನಲ್ಲಿ ಆಡಿದ್ದೆವು. ಅವರ ಸಾಮರ್ಥ್ಯದ ಬಗ್ಗೆ ತಿಳಿದುಕೊಂಡಿದ್ದೇವೆ’ ಎಂದು ಮ್ಯಾರಿಜ್ ನುಡಿದರು.

ಅಭ್ಯಾಸ ಪಂದ್ಯಗಳಲ್ಲಿ ಭಾರತ 4–1 ರಿಂದ ಸ್ಥಳೀಯ ಕ್ಲಬ್ ವಿರುದ್ಧ, 2–1 ರಿಂದ ಜಪಾನ್‌ ತಂಡದ ವಿರುದ್ಧ ಜಯಗಳಿಸಿತ್ತು. ಜಪಾನ್‌ ಈ ಐಎಚ್‌ಎಫ್‌ ಸಿರೀಸ್‌ನಲ್ಲಿ ಚಿಲಿ, ರಷ್ಯಾ, ಮೆಕ್ಸಿಕೊ ಜೊತೆ ‘ಬಿ’ ಗುಂಪಿನಲ್ಲಿದೆ.

‘ಇಲ್ಲಿನ ಪಿಚ್‌ ವೇಗವಾಗಿದ್ದು, ನಮ್ಮ ಶೈಲಿಗೆ ಹೊಂದುತ್ತಿದೆ’ ಎಂದು ಮ್ಯಾರಿಜ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.