ADVERTISEMENT

ಮಹಿಳಾ ಹಾಕಿ: ಭಾರತ ತಂಡಕ್ಕೆ ಕಂಚು

ಮಹಿಳಾ ಹಾಕಿ: 16 ವರ್ಷಗಳ ಬಳಿಕ ಪದಕ ಸಾಧನೆ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2022, 13:57 IST
Last Updated 7 ಆಗಸ್ಟ್ 2022, 13:57 IST
ಪೆನಾಲ್ಟಿ ಶೂಟೌಟ್‌ನಲ್ಲಿ ನ್ಯೂಜಿಲೆಂಡ್‌ ತಂಡವನ್ನು ಮಣಿಸಿ ಕಂಚು ಗೆದ್ದ ಭಾರತದ ಆಟಗಾರ್ತಿಯರು ಸಂಭ್ರಮಿಸಿದರು –ಪಿಟಿಐ ಚಿತ್ರ
ಪೆನಾಲ್ಟಿ ಶೂಟೌಟ್‌ನಲ್ಲಿ ನ್ಯೂಜಿಲೆಂಡ್‌ ತಂಡವನ್ನು ಮಣಿಸಿ ಕಂಚು ಗೆದ್ದ ಭಾರತದ ಆಟಗಾರ್ತಿಯರು ಸಂಭ್ರಮಿಸಿದರು –ಪಿಟಿಐ ಚಿತ್ರ   

ಬರ್ಮಿಂಗ್‌ಹ್ಯಾಮ್ (ಪಿಟಿಐ): ಪೆನಾಲ್ಟಿ ಶೂಟೌಟ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ ಸವಿತಾ ಪೂನಿಯಾ ಅವರು ಕಾಮನ್‌ವೆಲ್ತ್‌ ಕೂಟದ ಮಹಿಳಾ ಹಾಕಿ ಟೂರ್ನಿಯಲ್ಲಿ ಭಾರತ ತಂಡ ಕಂಚಿನ ಪದಕ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಮೂರನೇ ಸ್ಥಾನವನ್ನು ನಿರ್ಣಯಿಸಲು ಭಾನುವಾರ ನಡೆದ ಪಂದ್ಯದಲ್ಲಿ ಭಾರತ 2–1 ರಲ್ಲಿ ನ್ಯೂಜಿಲೆಂಡ್‌ ತಂಡವನ್ನು ಮಣಿಸಿತು. ಕಾಮನ್‌ವೆಲ್ತ್ ಕೂಟದಲ್ಲಿ ಭಾರತ ಮಹಿಳಾ ಹಾಕಿ ತಂಡಕ್ಕೆ 16 ವರ್ಷಗಳ ಬಳಿಕ ಪದಕ ಲಭಿಸಿದೆ.

ನಿಗದಿತ ಅವಧಿ ಕೊನೆಗೊಂಡಾಗ ಎರಡೂ ತಂಡಗಳು 1–1 ರಲ್ಲಿ ಸಮಬಲ ಸಾಧಿಸಿದ್ದವು. ಇದರಿಂದ ಪಂದ್ಯ ಪೆನಾಲ್ಟಿ ಶೂಟೌಟ್‌ಗೆ ಮುನ್ನಡೆಯಿತು.

ADVERTISEMENT

ಪೆನಾಲ್ಟಿ ಶೂಟೌಟ್‌ನ ಮೊದಲ ಅವಕಾಶದಲ್ಲಿ ಮೇಗನ್‌ ಹಲ್ ಅವರು ನ್ಯೂಜಿಲೆಂಡ್‌ಗೆ ಮುನ್ನಡೆ ತಂದಿತ್ತರು. ಆದರೆ ರೋಸ್‌ ಟಿನನ್, ಕೇಟಿ ಡೊವರ್ ಮತ್ತು ಒಲಿವಿಯಾ ಶಾನನ್‌ ಅವರ ಗೋಲು ಗಳಿಸುವ ಪ್ರಯತ್ನವನ್ನು ಸವಿತಾ ಅದ್ಭುತವಾಗಿ ತಡೆದರು.

ಭಾರತದ ಪರ ಸೋನಿಕಾ ಮತ್ತು ನವನೀತ್‌ ಅವರು ಗೋಲು ಗಳಿಸಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.

ನಿಗದಿತ ಅವಧಿಯ ಆಟದಲ್ಲಿ ಎರಡೂ ತಂಡಗಳು ಸಮಬಲದ ಪೈಪೋಟಿ ನಡೆಸಿದವು. ಮೊದಲ ಕ್ವಾರ್ಟರ್‌ನಲ್ಲಿ ಯಾವುದೇ ಗೋಲುಗಳು ಬರಲಿಲ್ಲ.

ಎರಡನೇ ಕ್ವಾರ್ಟರ್‌ನ ಹೆಚ್ಚಿನ ಅವಧಿಯಲ್ಲಿ ಚೆಂಡಿನ ಮೇಲಿನ ನಿಯಂತ್ರಣ ಭಾರತ ತಂಡ ಕೈಯಲ್ಲಿತ್ತು. ವಿರಾಮಕ್ಕೆ ಒಂದು ನಿಮಿಷ (29ನೇ ನಿ.) ಇದ್ದಾಗ ಸವಿತಾ ಬಳಗ ಮುನ್ನಡೆ ಗಳಿಸಿತು. ನವನೀತ್‌ ಕೌರ್‌ ಅವರು ಹೊಡೆದ ಚೆಂಡನ್ನು ನ್ಯೂಜಿಲೆಂಡ್‌ ಗೋಲ್‌ಕೀಪರ್‌ ತಡೆದರು. ರಿಬೌಂಡ್‌ ಆಗಿ ಬಂದ ಚೆಂಡನ್ನು ರಿವರ್ಸ್‌ ಹಿಟ್‌ ಮೂಲಕ ಸಲೀಮಾ ಟೇಟೆ ಗುರಿ ಸೇರಿಸಿದರು.

ಮುನ್ನಡೆ ಸಾಧಿಸಿದ ಭಾರತ ಕೊನೆಯ ಎರಡು ಅವಧಿಗಳಲ್ಲಿ ರಕ್ಷಣಾತ್ಮಕ ಆಟವಾಡಿತು. ಕೊನೆಯ ಕ್ವಾರ್ಟರ್‌ನಲ್ಲಿ ಮೇಲಿಂದ ಮೇಲೆ ಮೂರು ಪೆನಾಲ್ಟಿ ಕಾರ್ನರ್‌ ಅವಕಾಶಗಳು ಲಭಿಸಿದರೂ, ಗೋಲು ಬರಲಿಲ್ಲ. 52 ನೇ ನಿಮಿಷದಲ್ಲಿ ಗುರ್ಜಿತ್‌ ಕೌರ್‌ ಅವರ ಪ್ರಯತ್ನವನ್ನು ಎದುರಾಳಿ ಗೋಲ್‌ಕೀಪರ್‌ ಗ್ರೇಸ್‌ ಒ‘ಹನ್ಲನ್‌ ತಡೆದರು.

ಪಂದ್ಯ ಕೊನೆಗೊಳ್ಳಲು ಎರಡೂವರೆ ನಿಮಿಷ ಇದ್ದಾಗ ಲಾಲ್‌ರೆಮಿಸಿಯಾಮಿ ಅವರು ಹಳದಿ ಕಾರ್ಡ್‌ ಪಡೆದು ಹೊರ ನಡೆದರು. ಇದರಿಂದ ಭಾರತ 10 ಮಂದಿಯೊಂದಿಗೆ ಆಡಬೇಕಾಯಿತು.

ಕೊನೆಯ ನಿಮಿಷದಲ್ಲಿ ನ್ಯೂಜಿಲೆಂಡ್‌ ಪೆನಾಲ್ಟಿ ಕಾರ್ನರ್‌ ಅವಕಾಶ ಗಿಟ್ಟಿಸಿಕೊಂಡಿತು. ಒಲಿವಿಯಾ ಮೇರಿ ಅವರು ಗೋಲು ಗಳಿಸಿ ಸಮಬಲಕ್ಕೆ ಕಾರಣರಾದರು. ಇದರಿಂದ ಪಂದ್ಯ ಪೆನಾಲ್ಟಿ ಶೂಟೌಟ್‌ಗೆ ಸಾಗಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.