ADVERTISEMENT

ಶೂಟಿಂಗ್‌: ಸ್ಕೀಟ್‌ನಲ್ಲಿ ಚಿನ್ನ ಗೆದ್ದ ಭಾರತದ ಮಹಿಳೆಯರು

ಜೂನಿಯರ್ ವಿಶ್ವ ಚಾಂಪಿಯನ್‌ಷಿಪ್‌: ಪುರುಷರ ತಂಡಕ್ಕೆ ಕಂಚು

ಪಿಟಿಐ
Published 2 ಅಕ್ಟೋಬರ್ 2021, 12:46 IST
Last Updated 2 ಅಕ್ಟೋಬರ್ 2021, 12:46 IST
ಗಣೆಮತ್‌ ಶೆಕೋನ್‌
ಗಣೆಮತ್‌ ಶೆಕೋನ್‌   

ಲಿಮಾ, ಪೆರು: ಜೂನಿಯರ್ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಶೂಟರ್‌ಗಳು ಅದ್ಭುತ ಲಯವನ್ನು ಮುಂದುವರಿಸಿದ್ದಾರೆ. ಇಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನಸ್ಕೀಟ್ ವಿಭಾಗದಲ್ಲಿ ಶುಕ್ರವಾರ ಮಹಿಳಾ ತಂಡವು ಚಿನ್ನಕ್ಕೆ ಗುರಿಯಿಟ್ಟರೆ, ಪುರುಷರ ತಂಡಕ್ಕೆ ಕಂಚು ಒಲಿಯಿತು.

ಅರೀಬಾ ಖಾನ್‌, ರೈಜಾ ಧಿಲ್ಲೋನ್‌ ಮತ್ತು ಗಣೆಮತ್ ಶೆಖೋನ್ ಅವರಿದ್ದ ಭಾರತ ಮಹಿಳಾ ತಂಡವು ಸರಾಸರಿ ಆರು ಸ್ಕೋರ್ ದಾಖಲಿಸಿ ಅಗ್ರಸ್ಥಾನ ಗಳಿಸಿತು. ಫೈನಲ್‌ ಹಣಾಹಣಿಯಲ್ಲಿ ಇಟಲಿಯ ಡೆಮಿಯಾನ ಪಾಲಚಿ, ಸಾರಾ ಬೊಂಗಿಣಿ ಮತ್ತು ಗಿಯಾಡಾ ಲೊಂಗಿ ಅವರನ್ನು ಹಿಂದಿಕ್ಕಿತು.

ಪುರುಷರ ಸ್ಕೀಟ್‌ ವಿಭಾಗದಲ್ಲಿ ಸ್ಪರ್ಧಿಸಿದ್ದ ಭಾರತದ ರಾಜ್‌ವೀರ್‌ ಗಿಲ್‌, ಆಯುಶ್ ರುದ್ರಾರಾಜು ಮತ್ತು ಅಭಯ್‌ ಸಿಂಗ್ ಶೆಖೋನ್‌ ಅವರು ಕಂಚಿನ ಪದಕದ ಸುತ್ತಿನಲ್ಲಿ 6–0ಯಿಂದ ಟರ್ಕಿಯ ಅಲಿ ಕಾನ್‌ ಅರಬಾಚಿ, ಅಹ್ಮತ್‌ ಬರನ್‌ ಮತ್ತು ಮುಹಮ್ಮತ್‌ ಸೆಯುನ್ ಅವರ ಸವಾಲು ಮೀರಿದರು.

ADVERTISEMENT

ಪುರುಷರ ವೈಯಕ್ತಿಕ ಸ್ಕೀಟ್‌ ವಿಭಾಗದಲ್ಲಿ ಸ್ಪರ್ಧೆಯಲ್ಲಿದ್ದ ರಾಜ್‌ವೀರ್‌, ಅಭಯ್ ಸಿಂಗ್ ಮತ್ತು ರುದ್ರಾರಾಜು ಫೈನಲ್ಸ್ ತಲುಪಲು ವಿಫಲರಾದರು.

ಚಾಂಪಿಯನ್‌ಷಿಪ್‌ನಲ್ಲಿ ಸದ್ಯ ಭಾರತವು ಎರಡು ಚಿನ್ನ, ಮೂರು ಬೆಳ್ಳಿ ಮತ್ತು ಎರಡು ಕಂಚು (ಒಟ್ಟು ಏಳು) ಗೆದ್ದು ಪದಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಮೂರು ಚಿನ್ನ ಸೇರಿ ಏಳು ಪದಕಗಳನ್ನು ತನ್ನದಾಗಿಸಿಕೊಂಡಿರುವ ಅಮೆರಿಕ ಮೊದಲ ಸ್ಥಾನದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.