ADVERTISEMENT

ಎರಡನೇ ಕುಸ್ತಿ ಸರಣಿ: ಭಾರತದ ಕುಸ್ತಿಪಟುಗಳಿಗೆ ಸಿಗದ ಅನುಮತಿ?

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2025, 15:51 IST
Last Updated 14 ಫೆಬ್ರುವರಿ 2025, 15:51 IST
   

ನವದೆಹಲಿ: ಅಲ್ಬೇನಿಯಾದಲ್ಲಿ ನಡೆಯಲಿರುವ ಎರಡನೇ ರ‍್ಯಾಂಕಿಂಗ್ ಸರಣಿಯ ಕುಸ್ತಿಯಲ್ಲಿ ಭಾಗವಹಿಸಲಿರುವ ಭಾರತ ತಂಡಕ್ಕೆ ಕೇಂದ್ರ ಕ್ರೀಡಾ ಸಚಿವಾಲಯವು ಅನುಮತಿಯನ್ನು ತಡೆ ಹಿಡಿದಿದೆ. ಇದರಿಂದಾಗಿ ಭಾರತದ ಕುಸ್ತಿಪಟುಗಳು ಈ ಸರಣಿಯನ್ನು ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ. 

ಆದರೆ, ಇದರಲ್ಲಿ ಡಬ್ಲ್ಯುಎಫ್‌ಐ (ಭಾರತ ಕುಸ್ತಿ ಫೆಡರೇಷನ್) ತಪ್ಪಿದೆ ಎಂದು ಕ್ರೀಡಾ ಸಚಿವಾಲಯವು ದೂರಿದೆ. ಕೆಲವು  ಅತ್ಯಗತ್ಯ ಶಿಫಾರಸುಗಳನ್ನು ಮಾಡಿಕೊಡುವಲ್ಲಿ ಡಬ್ಲ್ಯುಎಫ್‌ಐ ವಿಫಲವಾಗಿದೆ ಎಂದೂ ಸಚಿವಾಲಯ ಹೇಳಿದೆ. 

ಸಚಿವಾಲಯ ಮತ್ತು ಡಬ್ಲ್ಯುಎಫ್‌ಐ ನಡುವಿನ ಇಂತಹದೇ ಜಟಾಪಟಿಯಿಂದಾಗಿ ಕ್ರೊವೇಷ್ಯಾದಲ್ಲಿ ನಡೆದಿದ್ದ  ಮೊದಲ ರ‍್ಯಾಂಕಿಂಗ್ ಸರಣಿಯ ಕುಸ್ತಿಯನ್ನೂ ಭಾರತದ ಕುಸ್ತಿಪಟುಗಳು ತ‍ಪ್ಪಿಸಿಕೊಂಡಿದ್ದರು. 

ADVERTISEMENT

2023ರ ಡಿಸೆಂಬರ್‌ನಲ್ಲಿ ಡಬ್ಲ್ಯುಎಫ್‌ಐ ಅನ್ನು ಸಚಿವಾಲಯವು ಅಮಾನತು ಮಾಡಿದೆ. ಆದರೆ ಅಂತರರಾಷ್ಟ್ರೀಯ ಕುಸ್ತಿ ಫೆಡರೇಷನ್‌ನಿಂದ ಡಬ್ಲ್ಯುಎಫ್‌ಐ ಮಾನ್ಯತೆ ಮುಂದುವರಿದಿದೆ. ಫೆಡರೇಷನ್ ಕೊನೆಯ ಕ್ಷಣದಲ್ಲಿ ಭಾರತ ಕ್ರೀಡಾ ಪ್ರಾಧಿಕಾರಕ್ಕೆ (ಎಸ್‌ಎಐ) ಪ್ರಸ್ತಾವ ಸಲ್ಲಿಸಿತ್ತು. 

‘ಡಬ್ಲ್ಯುಎಫ್‌ಐ ಕೊನೆಯ ಕ್ಷಣದಲ್ಲಿ ಪ್ರಸ್ತಾವವನ್ನು ಎಸ್‌ಎಐಗೆ ಸಲ್ಲಿಸಿತ್ತು. ಶಿಫಾರಸು ಮಾಡಿದ ಕುಸ್ತಿಪಟುಗಳ ಹೆಸರುಗಳ ಪಟ್ಟಿಯನ್ನೂ ವಿಳಂಬವಾಗಿ ಕಳಿಸಿತ್ತು. ಆದ್ದರಿಂದ ಅದನ್ನು ಅನುಮೋದಿಸಲು ಸಾಧ್ಯವಾಗಲಿಲ್ಲ’ ಎಂದು ಮೂಲಗಳು ತಿಳಿಸಿವೆ. 

‘ಡಬ್ಲ್ಯುಎಫ್‌ಐ ಯಾವುದೇ ಟ್ರಯಲ್ಸ್‌ ಆಯೋಜಿಸಿಲ್ಲ. ಆದ್ದರಿಂದ  ತಂಡವನ್ನು ಆಯ್ಕೆ ಮಾಡಿದ ಪ್ರಕ್ರಿಯೆಯ ಕುರಿತು ವಿವರಗಳನ್ನು ಒದಗಿಸಬೇಕು. ಅದೂ ಸ್ಪಷ್ಟವಾಗಿಲ್ಲ. ಅಂತರರಾಷ್ಟ್ರೀಯ ಟೂರ್ನಿಗಳಿಗೆ ಹೋಗುವ ಅಥ್ಲೀಟ್‌ಗಳಿಗೆ ಅನುಮೋದನೆ ನೀಡಲು ನಾವು ಸಿದ್ಧ. ಆದರೆ ಪೂರ್ವನಿಗದಿತ ಪ್ರಕ್ರಿಯೆಗಳನ್ನು ಪೂರೈಸುವುದೂ ಕಡ್ಡಾಯ’ ಎಂದೂ ಮೂಲಗಳು ಹೇಳಿವೆ. 

ಎರಡನೇ ರ‍್ಯಾಂಕಿಂಗ್ ಸರಣಿಯು ಇದೇ 26 ರಿಂದ ಮಾರ್ಚ್ 2ರವರೆಗೆ ನಡೆಯಲಿದೆ. ಸಚಿವಾಲಯವು ಇನ್ನೂ ಹಸಿರು ನಿಶಾನೆ ತೋರಿಸಿಲ್ಲ. ಶೀಘ್ರದಲ್ಲಿಯೇ ಅನುಮತಿ ಸಿಗುವ ನಿರೀಕ್ಷೆಯಲ್ಲಿ ಕುಸ್ತಿಪಟುಗಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.