ADVERTISEMENT

ಭಾರತದ ಯುವ ಬಾಕ್ಸರ್‌ಗಳ ಮಿಂಚಿನ ಪಂಚ್

ಪಿಟಿಐ
Published 15 ಜುಲೈ 2019, 18:20 IST
Last Updated 15 ಜುಲೈ 2019, 18:20 IST
   

ನವದೆಹಲಿ: ಭಾರತದ ಯುವ ಬಾಕ್ಸರ್‌ಗಳು ಸರ್ಬಿಯಾದಲ್ಲಿ ನಡೆಯುತ್ತಿರುವ ಗೋಲ್ಡನ್ ಗ್ಲೌ ಆಫ್‌ ವೊವೊಡಿನಾ ಅಂತರರಾಷ್ಟ್ರೀಯ ಬಾಕ್ಸಿಂಗ್‌ ಟೂರ್ನಿಯಲ್ಲಿ ಅಮೋಘ ಸಾಧನೆ ಮುಂದುವರಿಸಿದ್ದಾರೆ. ಭಾನುವಾರ ತಡರಾತ್ರಿ ನಡೆದ ಸ್ಪರ್ಧೆಗಳಲ್ಲಿ ಭಾರತದ ಬಾಕ್ಸರ್‌ಗಳು ನಾಲ್ಕು ಬೆಳ್ಳಿ ಮತ್ತು ಒಂದು ಕಂಚಿನ ಪದಕ ಗೆದ್ದುಕೊಂಡರು.

49 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಸೆಲಾಯ್ ಸಾಯ್, 56 ಕೆಜಿ ವಿಭಾಗದಲ್ಲಿ ಕಣಕ್ಕೆ ಇಳಿದ ಬಿಲಾಟ್ಸನ್ ಎಲ್.ಸಿಂಗ್, 60 ಕೆಜಿ ವಿಭಾಗದಲ್ಲಿ ಆಡಿದ ಅಜಯ್ ಕುಮಾರ್ ಮತ್ತು 69 ಕೆಜಿಯ ಸ್ಪರ್ಧಿ ವಿಜಯ್‌ದೀಪ್ ಬೆಳ್ಳಿ ಪದಕಕ್ಕೆ ಮುತ್ತನ್ನಿತ್ತರು.

ಅಂತಿಮ ಹಣಾಹಣಿಯಲ್ಲಿ ಸೆಲಾಯ್‌ ಸಾಯ್‌ 0–5 ಪಾಯಿಂಟ್‌ಗಳಿಂದ ಒಮರ್‌ ಅಮೆಟೊವಿಚ್‌ ಎದುರು ಸೋತರು. ಬಿಲಾಟ್ಸನ್ ಸಿಂಗ್ ರಷ್ಯಾದ ಬೋರಿಸ್ ಕರಿಬಿಯನ್‌ಗೆ ಮಣಿದರು. ಈ ಬೌಟ್ ಕೂಡ ಏಕಪಕ್ಷೀಯವಾಗಿತ್ತು. ಅಜಯ್ ಕುಮಾರ್ ಕೂಡ ಫೈನಲ್‌ನಲ್ಲಿ ನಿರಾಸೆ ಅನುಭವಿಸಿದರು. ಡೀಗೊ ಮಾಮಿಕ್ ಎದುರು ಅವರು 0–5ರಿಂದ ಸೋತರು.

ADVERTISEMENT

ಹೋರಾಡಿದ ವಿಜಯ್‌: ವಿಜಯ್‌ ದೀಪ್ ಚಿನ್ನದ ಪದಕವನ್ನು ಸುಲಭವಾಗಿ ಕೈಚೆಲ್ಲಲಿಲ್ಲ. ಕಜಕಸ್ತಾನದ ಅಜಾಮತ್ ಬೆಕ್ಟಾಸ್‌ ಎದುರಿನ ಬೌಟ್‌ನಲ್ಲಿ ಅವರು 2–3ರಲ್ಲಿ ಸೋತರು.

ಇದಕ್ಕೂ ಮೊದಲು ನಡೆದ ಸೆಮಿಫೈನಲ್‌ನಲ್ಲಿ 91 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಹರ್ಷ ಗಿಲ್ ಅವರು ಟರ್ಕಿಯ ತೊಪಲೊಗ್ಲು ಅಬುಜರ್‌ಗೆ ಮಣಿದರು. ಹೀಗಾಗಿ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.