ADVERTISEMENT

ಚೀನಾ ಓಪನ್‌: ಬ್ಯಾಡ್ಮಿಂಟನ್‌ನಲ್ಲಿ ಭಾರತದ ಸವಾಲು ಅಂತ್ಯ

ಪಿ.ವಿ.ಸಿಂಧು, ಕಿದಂಬಿ ಶ್ರೀಕಾಂತ್‌ಗೆ ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಸೋಲು

ಪಿಟಿಐ
Published 21 ಸೆಪ್ಟೆಂಬರ್ 2018, 17:25 IST
Last Updated 21 ಸೆಪ್ಟೆಂಬರ್ 2018, 17:25 IST
ಪಿ.ವಿ.ಸಿಂಧು
ಪಿ.ವಿ.ಸಿಂಧು   

ಚಾಂಗ್ಜು: ಭಾರತದ ಪಿ.ವಿ.ಸಿಂಧು ಮತ್ತು ಕಿದಂಬಿ ಶ್ರೀಕಾಂತ್‌ ಇಲ್ಲಿ ನಡೆಯುತ್ತಿರುವ ಚೀನಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಸೋತು ಹೊರಬಿದ್ದರು.

ಶುಕ್ರವಾರ ನಡೆದ ಮಹಿಳೆಯರ ವಿಭಾಗದ ಪಂದ್ಯದಲ್ಲಿ ಸಿಂಧು ಅವರು ಚೀನಾದ ಚೆನ್ ಯೂಫಿ ವಿರುದ್ಧ 11–21, 21–11, 15–21ರಿಂದ ಸೋತರು. ಪುರುಷರ ವಿಭಾಗದಲ್ಲಿ ಶ್ರೀಕಾಂತ್‌ ಜಪಾನ್‌ನ ಕೆಂಟೊ ಮೊಮೊಟೊ ಅವರಿಗೆ 9–21, 11–21ರಿಂದ ಮಣಿದರು.

ಇವರಿಬ್ಬರ ಸೋಲಿನೊಂದಿಗೆ ಟೂರ್ನಿಯಲ್ಲಿ ಭಾರತದ ಸವಾಲು ಅಂತ್ಯಗೊಂಡಿತು. ಕಳೆದ ವಾರ ಮುಕ್ತಾಯಗೊಂಡ ಜಪಾನ್ ಓಪನ್‌ ಟೂರ್ನಿಯಲ್ಲೂ ಭಾರತ ನಿರಾಸೆ ಅನುಭವಿಸಿತ್ತು.

ADVERTISEMENT

ಈ ಹಿಂದೆ ಆರು ಬಾರಿ ಮುಖಾಮುಖಿಯಾದಾಗ ಚೆನ್ ವಿರುದ್ಧ ಸಿಂಧು ನಾಲ್ಕು ಭಾರಿ ಗೆದ್ದಿದ್ದರು. ಆದರೆ ಶುಕ್ರವಾರ ಉತ್ತಮ ರಣತಂತ್ರಗಳೊಂದಿಗೆ ಕಣಕ್ಕೆ ಇಳಿದಿದ್ದ ಚೆನ್‌ಗೆ ಸಿಂಧು ಮಣಿದರು. ಮೊದಲ ಗೇಮ್‌ನ ಅರಂಭದಲ್ಲೇ 6–3ರ ಮುನ್ನಡೆ ಸಾಧಿಸಿದ ಚೆನ್‌ ನಂತರ ಈ ಅಂತರವನ್ನು 11–5ಕ್ಕೆ ಏರಿಸಿದರು. ವಿರಾಮದ ನಂತರ ಸಿಂಧು ಎರಡು ಪಾಯಿಂಟ್‌ಗಳನ್ನು ಗಳಿಸಿ ಮುನ್ನಡೆಯಲು ಯತ್ನಿಸಿದರು. ಆದರೆ ನಂತರ ಅಮೋಘ ರಿಟರ್ನ್‌ಗಳ ಮೂಲಕ ಮಿಂಚಿದ ಚೆನ್‌ಗೆ ಉತ್ತರ ನೀಡಲು ಸಿಂಧು ವಿಫಲರಾದರು.

ತಿರುಗೇಟು ನೀಡಿದ ಸಿಂಧು: ಎರಡನೇ ಗೇಮ್‌ನಲ್ಲಿ ಸಿಂಧು ರಣತಂತ್ರ ಬದಲಿಸಿದರು. ದೀರ್ಘ ರ‍್ಯಾಲಿ ಮತ್ತು ಪರಿಣಾಮಕಾರಿ ಶಾಟ್‌ಗಳ ಮೂಲಕ ಪಾಯಿಂಟ್‌ಗಳನ್ನು ಗಳಿಸಿದರು. ಹೀಗಾಗಿ ಆರಂಭದಲ್ಲಿ 6–1ರ ಮುನ್ನಡೆ ಸಾಧಿಸಿದರು. ನಂತರ ಸ್ವಯಂ ತಪ್ಪುಗಳ ಮೂಲಕ ಎದುರಾಳಿಗೆ ಪಾಯಿಂಟ್‌ಗಳನ್ನು ಬಿಟ್ಟುಕೊಟ್ಟರು. ಇದರ ಪರಿಣಾಮವಾಗಿ ಚೆನ್‌ ಹಿನ್ನಡೆ 5–6ಕ್ಕೆ ಇಳಿಯಿತು. ನಂತರ ಹಿಡಿತ ಸಾಧಿಸಿದ ಸಿಂಧು ಗೇಮ್‌ ಗೆದ್ದು ಪಂದ್ಯವನ್ನು ಸಮಬಲಗೊಳಿಸಿದರು.

ನಿರ್ಣಾಯಕ ಮೂರನೇ ಗೇಮ್‌ನ ಆರಂಭದಲ್ಲಿ ಇಬ್ಬರೂ ಸಮಬಲದಿಂದ ಕಾದಾಡಿದರು. ಆದರೆ 7–4 ಮತ್ತು14–8ರಿಂದ ಮುನ್ನಡೆದ ನಂತರ ಪ್ರಬಲ ಆಟವಾಡಿದ ಚೆನ್‌ ಅವರು ಗೇಮ್ ತಮ್ಮದಾಗಿಸಿಕೊಂಡು ಪಂದ್ಯವನ್ನೂ ಗೆದ್ದರು.

ಮೊಮೊಟೊಗೆ ಸಾಟಿಯಾಗದ ಶ್ರೀಕಾಂತ್‌: ಕೆಂಟೊ ಮೊಮೊಟೊ ಎದುರು ಈ ಹಿಂದೆ 10 ಪಂದ್ಯಗಳ ಪೈಕಿ ಮೂರನ್ನು ಮಾತ್ರ ಗೆದ್ದಿದ್ದ ಶ್ರೀಕಾಂತ್‌ ಶುಕ್ರವಾರವೂ ನಿರಾಸೆ ಕಂಡರು. ವಿಶ್ವ ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನದಲ್ಲಿರುವ ಮೊಮೊಟೊಗೆ ಸುಲಭವಾಗಿ ಮಣಿದರು. ಆರಂಭದಲ್ಲಿ 1–5ರ ಹಿನ್ನಡೆ ಅನುಭವಿಸಿದ ಶ್ರೀಕಾಂತ್ ನಂತರ ಮೂರು ಪಾಯಿಂಟ್‌ ಗಳಿಸಿ ವಾಪಸಾಗಲು ಶ್ರಮಿಸಿದರು. ಆದರೆ ನಂತರ ಸವಾಲೊಡ್ಡಲು ಸಾಧ್ಯವಾಗದೆ ಸೋತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.