ADVERTISEMENT

ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌: ಇಂಡೊನೇಷ್ಯಾಕ್ಕೆ ಚಿನ್ನ, ಚೀನಾಕ್ಕೆ ಬೆಳ್ಳಿ

ಪಿಟಿಐ
Published 16 ಫೆಬ್ರುವರಿ 2025, 14:47 IST
Last Updated 16 ಫೆಬ್ರುವರಿ 2025, 14:47 IST
ಬ್ಯಾಡ್ಮಿಂಟನ್
ಬ್ಯಾಡ್ಮಿಂಟನ್   

ಕ್ವಿಂಗ್‌ದಾವೊ (ಚೀನಾ): ಇಂಡೊನೇಷ್ಯಾ ತಂಡವು ಇಲ್ಲಿ ಭಾನುವಾರ ನಡೆದ ಬ್ಯಾಡ್ಮಿಂಟನ್ ಏಷ್ಯಾ ಮಿಶ್ರ ಟೀಮ್‌ ಚಾಂಪಿಯನ್‌ಷಿಪ್‌ನ ಫೈನಲ್‌ನಲ್ಲಿ 3–1ರಿಂದ ಎರಡು ಬಾರಿಯ ಚಾಂಪಿಯನ್‌ ಚೀನಾ ತಂಡವನ್ನು ಮಣಿಸಿ ಮೊದಲ ಬಾರಿ ಚಿನ್ನದ ಪದಕ ಗೆದ್ದುಕೊಂಡಿತು.

ಆತಿಥೇಯ ಚೀನಾ ಬೆಳ್ಳಿ ಗೆದ್ದರೆ, ಜಪಾನ್‌ ಮತ್ತು ಥಾಯ್ಲೆಂಡ್‌ ತಂಡಗಳು ಕಂಚಿನ ಪದಕ ತಮ್ಮದಾಗಿಸಿಕೊಂಡವು. ಕಳೆದ ಬಾರಿ ಕಂಚು ಗೆದ್ದಿದ್ದ ಭಾರತದ ತಂಡವು ಕ್ವಾರ್ಟರ್‌ ಫೈನಲ್‌ನಲ್ಲಿ 0–3ರಿಂದ ಜಪಾನ್‌ ತಂಡಕ್ಕೆ ಸೋತು ಹೊರಬಿದ್ದಿತ್ತು. 

ಶನಿವಾರ ನಡೆದಿದ್ದ ಸೆಮಿಫೈನಲ್‌ನಲ್ಲಿ ಇಂಡೊನೇಷ್ಯಾ 3–1ರಿಂದ ಥಾಯ್ಲೆಂಡ್‌ ತಂಡವನ್ನು ಮಣಿಸಿ ಮೊದಲ ಬಾರಿ ಫೈನಲ್‌ ಪ್ರವೇಶಿಸಿತ್ತು. ಹಾಲಿ ಚಾಂಪಿಯನ್ ಚೀನಾ 3–2ರಿಂದ ಜಪಾನ್‌ ತಂಡದ ವಿರುದ್ಧ ಗೆದ್ದು ಪ್ರಶಸ್ತಿ ಸುತ್ತು ತಲುಪಿತ್ತು.

ADVERTISEMENT

2017ರಲ್ಲಿ ವಿಯೆಟ್ನಾಂ ನಡೆದಿದ್ದ ಟೂರ್ನಿಯಲ್ಲಿ ಚೀನಾ 3–0ಯಿಂದ ದಕ್ಷಿಣ ಕೊರಿಯಾ ತಂಡವನ್ನು ಫೈನಲ್‌ನಲ್ಲಿ ಮಣಿಸಿ ಮೊದಲ ಬಾರಿ ಚಾಂಪಿಯನ್‌ ಆಗಿತ್ತು. 2023ರಲ್ಲಿ ದುಬೈನಲ್ಲಿ ನಡೆದಿದ್ದ ಟೂರ್ನಿಯಲ್ಲಿ ಚೀನಾ 3–1ರಿಂದ ಮತ್ತೆ ಅದೇ ತಂಡವನ್ನು ಮಣಿಸಿ ಎರಡನೇ ಬಾರಿ ಚಿನ್ನ ಗೆದ್ದಿತ್ತು. ಕೋವಿಡ್‌ ಸಾಂಕ್ರಾಮಿಕದ ಕಾರಣದಿಂದ 2021ರಲ್ಲಿ ಟೂರ್ನಿ ನಡೆದಿರಲಿಲ್ಲ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.