ADVERTISEMENT

ಇಂಡೊನೇಷ್ಯಾ ಮಾಸ್ಟರ್‌ ಬ್ಯಾಡ್ಮಿಂಟನ್‌: ಸುಧಾರಿತ ಆಟದತ್ತ ಸೇನ್‌ ಚಿತ್ತ

ಪಿಟಿಐ
Published 19 ಜನವರಿ 2026, 16:32 IST
Last Updated 19 ಜನವರಿ 2026, 16:32 IST
ಭಾರತದ ಪಿ.ವಿ.ಸಿಂಧು
ಭಾರತದ ಪಿ.ವಿ.ಸಿಂಧು   

ಜಕಾರ್ತ: ತವರಿನ ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿರುವ ಭಾರತದ ಶಟ್ಲರ್‌ಗಳು ಮಂಗಳವಾರ ಆರಂಭವಾಗಲಿರುವ ಇಂಡೊನೇಷ್ಯಾ ಮಾಸ್ಟರ್ಸ್‌ ಸೂಪರ್ 500 ಟೂರ್ನಿಯಲ್ಲಿ ಸುಧಾರಿತ ಆಟದ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ.

ಭಾರತದ ಅಗ್ರಮಾನ್ಯ ಸಿಂಗಲ್ಸ್‌ ಆಟಗಾರ ಲಕ್ಷ್ಯ ಸೇನ್‌ ಅವರು ಟೂರ್ನಿಯಲ್ಲಿ ಏಳನೇ ಶ್ರೇಯಾಂಕ ಪಡೆದಿದ್ದಾರೆ. ಕಳೆದ ವರ್ಷ ಆಸ್ಟ್ರೇಲಿಯಾ ಓಪನ್‌ ಸೂಪರ್‌ 500 ಟೂರ್ನಿಯ ಪ್ರಶಸ್ತಿ ಗೆದ್ದಿರುವ ಅವರು ಇಲ್ಲಿ ಸಿಂಗಪುರದ ಜಿಯಾ ಹೆಂಗ್‌ ಜೇಸನ್‌ ತೇಹ್‌ ವಿರುದ್ಧ ಅಭಿಯಾನ ಆರಂಭಿಸಲಿದ್ದಾರೆ.

ಅನುಭವಿ ಆಟಗಾರ ಎಚ್‌.ಎಸ್‌.ಪ್ರಣಯ್‌ ಅವರು ಮೊದಲ ಸುತ್ತಿನಲ್ಲಿ ಮಲೇಷ್ಯಾದ ಲೀ ಜೀ ಜಿಯಾ ವಿರುದ್ಧ ಕಣಕ್ಕಿಳಿಯಲಿದ್ದಾರೆ. ಕಿದಂಬಿ ಶ್ರೀಕಾಂತ್‌ ಅವರು ಜಪಾನ್‌ನ ಕೊಕಿ ವತಾನಬೆ ವಿರುದ್ಧ; ತರುಣ್‌ ಮನ್ನೆಪಲ್ಲಿ ಅವರು ಜಪಾನ್‌ನ ಮತ್ತೊಬ್ಬ ಆಟಗಾರ ಯೂಶಿ ತನಾಕಾ ವಿರುದ್ಧ ಅಭಿಯಾನ ಆರಂಭಿಸಲಿದ್ದಾರೆ.

ADVERTISEMENT

ಕನ್ನಡಿಗ ಆಯುಷ್‌ ಶೆಟ್ಟಿ ಅವರಿಗೆ ಮೊದಲ ಸುತ್ತಿನಲ್ಲಿ ಕಠಿಣ ಸವಾಲು ಎದುರಾಗಿದೆ. ಅವರು ಮೂರನೇ ಶ್ರೇಯಾಂಕದ ಆಟಗಾರ, ಆತಿಥೇಯ ದೇಶದ ಜೊನಾಥನ್‌ ಕ್ರಿಸ್ಟಿ ವಿರುದ್ಧ ಸೆಣಸಬೇಕಿದೆ. ಕ್ರಿಸ್ಟಿ ಅವರು ಇಂಡಿಯಾ ಓಪನ್‌ ಟೂರ್ನಿಯಲ್ಲಿ ರನ್ನರ್‌ ಅಪ್‌ ಆಗಿದ್ದರು.

ಮಲೇಷ್ಯಾ ಓಪನ್‌ನಲ್ಲಿ ಸೆಮಿಫೈನಲ್‌ ತಲುಪಿದ್ದ ಅನುಭವಿ ಆಟಗಾರ್ತಿ ಪಿ.ವಿ.ಸಿಂಧು ಅವರು ಮೊದಲ ಸುತ್ತಿನಲ್ಲಿ ಜಪಾನ್‌ನ ಮನಾಮಿ ಸುಯಿಝು ಅವರನ್ನು ಎದುರಿಸಲಿದ್ದಾರೆ. ಇಂಡಿಯಾ ಓಪನ್‌ನಲ್ಲಿ ಮೊದಲ ಸುತ್ತಿನಲ್ಲಿಯೇ ನಿರ್ಗಮಿಸಿದ್ದ ಅವರು ಲಯ ಕಂಡುಕೊಳ್ಳುವ ವಿಶ್ವಾಸದಲ್ಲಿದ್ದಾರೆ.

ಭರವಸೆಯ ಆಟಗಾರ್ತಿ ತನ್ವಿ ಶರ್ಮಾ ಅವರು ನಾಲ್ಕನೇ ಶ್ರೇಯಾಂಕದ ಟೊಮೊಕಾ ಮಿಯಾಝಾಕಿ (ಜಪಾನ್‌) ಅವರೊಂದಿಗೆ ಸೆಣಸಲಿದ್ದಾರೆ. ಉದಯೋನ್ಮುಖ ಆಟಗಾರ್ತಿ ಉನ್ನತಿ ಹೂಡಾ ಅವರು ಮೊದಲ ಸುತ್ತಿನಲ್ಲಿ ಅಗ್ರ ಶ್ರೇಯಾಂಕದ ಆಟಗಾರ್ತಿ, ಚೀನಾದ ಚೆನ್‌ ಯೂಫಿ ವಿರುದ್ಧ ಆಡಬೇಕಿದೆ.

ಭಾರತದ ಅಗ್ರಮಾನ್ಯ ಡಬಲ್ಸ್‌ ಜೋಡಿ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ– ಚಿರಾಗ್‌ ಶೆಟ್ಟಿ ಅವರು ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. 

ಭಾರತದ ಲಕ್ಷ್ಯ ಸೇನ್‌