
ಜಕಾರ್ತಾ: ಭಾರತದ ಅಗ್ರ ಷಟ್ಲರ್‌ಗಳಾದ ಪಿ.ವಿ.ಸಿಂಧು ಮತ್ತು ಲಕ್ಷ್ಯ ಸೇನ್ ಅವರು ಇಂಡೊನೇಷ್ಯಾ ಮಾಸ್ಟರ್ಸ್ ಸೂಪರ್ 500 ಟೂರ್ನಿಯಲ್ಲಿ ಕ್ರಮವಾಗಿ ಮಹಿಳೆಯರ ಮತ್ತು ಪುರುಷರ ಸಿಂಗಲ್ಸ್‌ನಲ್ಲಿ ನೇರ ಆಟಗಳ ಸೋಲನುಭವಿಸಿದರು. ಇದರೊಂದಿಗೆ ₹4.60 ಕೋಟಿ ಬಹುಮಾನದ ಟೂರ್ನಿಯಲ್ಲಿ ಭಾರತದ ಸವಾಲು ಬೇಗನೇ ಕ್ವಾರ್ಟರ್‌ಫೈನಲ್ ಹಂತದಲ್ಲೇ ಅಂತ್ಯಗೊಂಡಿತು.
ಎರಡು ಬಾರಿ ಒಲಿಂಪಿಕ್ ಪದಕ ಪಡೆದಿರುವ ಸಿಂಧು ಅವರು ಶುಕ್ರವಾರ ನಡೆದ ಕ್ವಾರ್ಟರ್‌ಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ಆಟಗಾರ್ತಿ ಚೆನ್ ಯು ಫೀ ಅವರಿಗೆ 13–21, 17–21 ರಲ್ಲಿ ಸೋತರು. ಈ ಪಂದ್ಯ 42 ನಿಮಿಷ ನಡೆಯಿತು.
ವಿಶ್ವ ಕ್ರಮಾಂಕದಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಚೀನಾದ ಚೆನ್ ಈ ಮೂಲಕ ಭಾರತದ ಎದುರಾಳಿಯ ವಿರುದ್ಧ ಗೆಲುವಿನ ದಾಖಲೆಯನ್ನು 8–6ಕ್ಕೆ ಹೆಚ್ಚಿಸಿದರು. ಸಿಂಧು ಕೊನೆಯ ಬಾರಿ 2019ರಲ್ಲಿ ಚೆನ್ ಅವರನ್ನು ಸೋಲಿಸಿದ್ದರು.
2021ರ ವಿಶ್ವ ಚಾಂಪಿಯನ್‌ಷಿಪ್ ಕಂಚಿನ ಪದಕ ವಿಜೇತ ಲಕ್ಷ್ಯ ಅವರು ಪುರುಷರ ಸಿಂಗಲ್ಸ್‌ನಲ್ಲಿ 18–21, 20–22 ರಲ್ಲಿ ಥಾಯ್ಲೆಂಡ್‌ನ ಉದಯೋನ್ಮುಖ ಆಟಗಾರ ಪನಿತ್‌ಚಫೊನ್ ತೀರರತ್‌ಸಕುಲ್ ಅವರಿಗೆ ಮಣಿದರು. 21 ವರ್ಷ ವಯಸ್ಸಿನ ತೀರರತ್ ಸಕುಲ್ 46 ನಿಮಿಷಗಳಲ್ಲಿ ಪಂದ್ಯ ಗೆದ್ದರು. ಅವರು ಪ್ರಿಕ್ವಾರ್ಟರ್‌ಫೈನಲ್‌ನಲ್ಲಿ ಪ್ಯಾರಿಸ್ ಒಲಿಂಪಿಕ್ಸ್ (2024) ಕಂಚು ವಿಜೇತ ಲೀ ಝಿ ಜಿಯಾ ಅವರನ್ನು ಹೊರದೂಡಿದ್ದರು.
ಭಾರತದ ಸಿಂಗಲ್ಸ್ ಆಟಗಾರ ಕಿದಂಬಿ ಶ್ರೀಕಾಂತ್ ಮತ್ತು ಆಟಗಾರ್ತಿ ಅನ್ಮೋಲ್ ಖಾರ್ಬ್ ಅವರು ಗುರುವಾರ ಎರಡನೇ ಸುತ್ತಿನಲ್ಲಿ ಸೋಲನುಭವಿಸಿದ್ದರು. ಪುರುಷರ ಡಬಲ್ಸ್‌ನಲ್ಲಿ ಹರಿಹರನ್ ಅಮ್ಸಕರುಣನ್– ಎಂ.ಆರ್.ಅರ್ಜುನ್ ಜೋಡಿ ಸಹ ಪ್ರಿಕ್ವಾರ್ಟರ್‌ಫೈನಲ್‌ನಲ್ಲಿ ಸೋತಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.