ADVERTISEMENT

ಇಂಡೊನೇಷ್ಯಾ ಓಪನ್ ಸೂಪರ್ 1000 ಬ್ಯಾಡ್ಮಿಂಟನ್‌: ಪಿ.ವಿ. ಸಿಂಧುಗೆ ಮತ್ತೆ ನಿರಾಸೆ

ಚಿರಾಗ್‌ ಜೋಡಿಗೂ ಸೋಲು

ಪಿಟಿಐ
Published 27 ನವೆಂಬರ್ 2021, 12:55 IST
Last Updated 27 ನವೆಂಬರ್ 2021, 12:55 IST
ರಚನೊಕ್ ಇಂತನಾನ್ ಆಟದ ಶೈಲಿ– ಎಎಫ್‌ಪಿ ಚಿತ್ರ
ರಚನೊಕ್ ಇಂತನಾನ್ ಆಟದ ಶೈಲಿ– ಎಎಫ್‌ಪಿ ಚಿತ್ರ   

ಬಾಲಿ, ಇಂಡೊನೇಷ್ಯಾ: ಭಾರತದ ಪಿ.ವಿ. ಸಿಂಧು ಮತ್ತು ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ– ಚಿರಾಗ್‌ ಶೆಟ್ಟಿ ಅವರು ಸೋಲನುಭವಿಸುವುದರೊಂದಿಗೆ ಇಂಡೊನೇಷ್ಯಾ ಓಪನ್‌ ಸೂಪರ್ 1000 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಅಭಿಯಾನ ಅಂತ್ಯವಾಗಿದೆ.

ಥಾಯ್ಲೆಂಡ್‌ನ ಮಾಜಿ ವಿಶ್ವ ಚಾಂಪಿಯನ್‌ ರಚನೊಕ್ ಇಂತನಾನ್ ಎದುರಿನ ಮಹಿಳಾ ಸಿಂಗಲ್ಸ್ ಪಂದ್ಯದಲ್ಲಿ ಶನಿವಾರ ಸಿಂಧು 21-15, 9-21, 14-21ರಿಂದ ನಿರಾಸೆ ಅನುಭವಿಸಿದರು.54 ನಿಮಿಷಗಳ ಜಿದ್ದಾಜಿದ್ದಿನ ಪೈಪೋಟಿಯಲ್ಲಿ ಇಂತನಾನ್‌ ಅವರಿಗೆ ಗೆಲುವು ಒಲಿಯಿತು. ವಿಶ್ವ ಚಾಂಪಿಯನ್, ಭಾರತದ ಆಟಗಾರ್ತಿಗೆ ಇದು ಸತತ ಮೂರನೇ ಸೆಮಿಫೈನಲ್‌ ಸೋಲಾಗಿದೆ.

26 ವರ್ಷದ ಸಿಂಧು, ಕಳೆದ ವಾರ ಇಂಡೊನೇಷ್ಯಾ ಮಾಸ್ಟರ್ಸ್‌ ಹಾಗೂ ಅಕ್ಟೋಬರ್‌ನಲ್ಲಿ ನಡೆದ ಫ್ರೆಂಚ್‌ ಓಪನ್ ಟೂರ್ನಿಗಳ ನಾಲ್ಕರಘಟ್ಟದ ಪಂದ್ಯಗಳಲ್ಲಿ ಮುಗ್ಗರಿಸಿದ್ದರು.

ADVERTISEMENT

ಥಾಯ್ಲೆಂಡ್‌ ಆಟಗಾರ್ತಿಯ ಎದುರು ಸಿಂಧು 4–6 ಗೆಲುವಿನ ದಾಖಲೆ ಹೊಂದಿದ್ದರು. ಆದರೆ ಈ ಹಿಂದಿನ ಎರಡು ಮುಖಾಮುಖಿಗಳಲ್ಲಿ ಸೋಲು ಅನುಭವಿಸಿದ್ದರು.

ಮೊದಲ ಗೇಮ್‌ ಆರಂಭದಲ್ಲಿ 8–3ರಿಂದ ಮುನ್ನಡೆ ಸಾಧಿಸಿದ್ದ ಸಿಂಧು, ವಿರಾಮದ ವೇಳೆಗೆ 11–10ರಿಂದ ಮುಂದಿದ್ದರು. ಬಳಿಕ ಅದೇ ಲಯದಲ್ಲಿ ಮುಂದುವರಿದು, ಸತತ ಮೂರು ನೇರ ಪಾಯಿಂಟ್‌ಗಳ ನೆರವಿನೊಂದಿಗೆ ಗೇಮ್ ಗೆದ್ದು ಬೀಗಿದರು.

ಎರಡನೇ ಗೇಮ್‌ನಲ್ಲಿ ಇಂತನಾನ್‌ ತಿರುಗೇಟು ನೀಡಿದರು. ವಿರಾಮದ ವೇಳೆಗೆ ಅವರು 11–7ರಿಂದ ಮುನ್ನಡೆಯಲ್ಲಿದ್ದರು. ನಂತರದ 10 ಪಾಯಿಂಟ್ಸ್‌ ಪೈಕಿ ಒಂಬತ್ತನ್ನು ತಮ್ಮದಾಗಿಸಿಕೊಂಡು ಗೇಮ್ ತಮ್ಮದಾಗಿಸಿಕೊಂಡರು. ಮೂರನೇ ಗೇಮ್‌ನಲ್ಲೂ ಛಲದ ಆಟವಾಡಿದ ಥಾಯ್ಲೆಂಡ್‌ ಆಟಗಾರ್ತಿ, ಸಿಂಧು ಎಸಗಿದ ಲೋಪಗಳ ಲಾಭ ಪಡೆದರು. ಆರಂಭದಲ್ಲೇ 11–6ರ ಮುನ್ನಡೆ ಗಳಿಸಿದರು.

‘ಕ್ರಾಸ್‌ಕೋರ್ಟ್‌ ಡ್ರಾಪ್‌‘ಗಳನ್ನು ಹೆಚ್ಚಾಗಿ ಮಾಡಿದರೂ ಬ್ಯಾಕ್‌ಲೈನ್‌ ಹಾಗೂ ನೆಟ್‌ಗಳಲ್ಲಿ ಮಾಡಿದ ತಪ್ಪುಗಳೂ ಸಿಂಧು, ಅವರ ಸೋಲಿಗೆ ಕಾರಣವಾದವು.

ಪುರುಷರ ಡಬಲ್ಸ್ ವಿಭಾಗದಲ್ಲಿ ವಿಶ್ವ ಕ್ರಮಾಂಕದಲ್ಲಿ 11ನೇ ಸ್ಥಾನದಲ್ಲಿರುವ ಸಾತ್ವಿಕ್‌ ಸಾಯಿರಾಜ್ ರಣಕಿರೆಡ್ಡಿ– ಚಿರಾಗ್‌ ಶೆಟ್ಟಿ ಅವರು ನಾಲ್ಕರ ಘಟ್ಟದ ಹಣಾಹಣಿಯಲ್ಲಿ 16-21, 18-21ರಿಂದ ಇಂಡೊನೇಷ್ಯಾದ ಮಾರ್ಕಸ್ ಫೆರ್ನಾಲ್ಡಿ ಗಿಡಿಯೊನ್‌ ಮತ್ತು ಕೆವಿನ್‌ ಸಂಜಯ ಸುಕಮುಲಿಯೊ ಎದುರು ಎಡವಿದರು.

ವಿಶ್ವದ ಅಗ್ರಕ್ರಮಾಂಕದ ಆಟಗಾರರ ಎದುರು ಭಾರತದ ಜೋಡಿಗೆ ಇದು ಸತತ 10ನೇ ಸೋಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.