ADVERTISEMENT

ಯೂತ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನ

ವೆಟ್‌ಲಿಫ್ಟಿಂಗ್‌ನಲ್ಲಿ ಸಾಧನೆ ಮಾಡಿದ ಮಿಜೋರಾಂನ ಜೆರೆಮೈ ಲಾಲ್‌ರಿನುಂಗಾ

ಪಿಟಿಐ
Published 9 ಅಕ್ಟೋಬರ್ 2018, 19:58 IST
Last Updated 9 ಅಕ್ಟೋಬರ್ 2018, 19:58 IST
ಅರ್ಜೆಂಟೀನಾದಲ್ಲಿ ನಡೆಯುತ್ತಿರುವ ಯೂತ್‌ ಒಲಿಂಪಿಕ್ಸ್‌ನಲ್ಲಿ ಬಾಲಕರ 62 ಕೆ.ಜಿ. ವಿಭಾಗದ ವೆಟ್‌ಲಿಫ್ಟಿಂಗ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಜೆರೆಮೈ ಲಾಲ್‌ರಿನುಂಗಾ  -ರಾಯಿಟರ್ಸ್‌ ಚಿತ್ರ
ಅರ್ಜೆಂಟೀನಾದಲ್ಲಿ ನಡೆಯುತ್ತಿರುವ ಯೂತ್‌ ಒಲಿಂಪಿಕ್ಸ್‌ನಲ್ಲಿ ಬಾಲಕರ 62 ಕೆ.ಜಿ. ವಿಭಾಗದ ವೆಟ್‌ಲಿಫ್ಟಿಂಗ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಜೆರೆಮೈ ಲಾಲ್‌ರಿನುಂಗಾ  -ರಾಯಿಟರ್ಸ್‌ ಚಿತ್ರ   

ಬ್ಯೂನಸ್ ಐರಿಸ್, ಅರ್ಜೆಂಟೀನಾ: ಜೆರೆಮೈ ಲಾಲ್‌ರಿನುಂಗಾ ಅವರು ಯೂತ್ ಒಲಿಂಪಿಕ್ಸ್‌ ಇತಿಹಾಸದಲ್ಲಿ ಭಾರತಕ್ಕೆ ಮೊಟ್ಟಮೊದಲ ಚಿನ್ನದ ಪದಕದ ಕಾಣಿಕೆ ನೀಡಿದರು.

ಮಂಗಳವಾರ ನಡೆದ ಬಾಲಕರ 62 ಕೆ.ಜಿ. ವಿಭಾಗದಲ್ಲಿ ಒಟ್ಟು 274 ಕೆ.ಜಿ. (ಸ್ನ್ಯಾಚ್ 124 ಕೆ.ಜಿ+ಜರ್ಕ್ 150 ಕೆ.ಜಿ) ಭಾರ ಎತ್ತಿದ ಅವರು ಪ್ರಥಮ ಸ್ಥಾನ ಗಳಿಸಿದರು. ಐಜ್ವಾಲ್‌ನ ಜೆರೆಮೈ ಅವರು ಇದೇ 26ರಂದು 16ನೇ ವಸಂತಕ್ಕೆ ಕಾಲಿಡಲಿದ್ದಾರೆ.

ಅವರು ಈಚೆಗೆ ನಡೆದಿದ್ದ ಯೂತ್ ಏಷ್ಯನ್ ಮತ್ತು ಜೂನಿಯರ್ ಏಷ್ಯನ್ ಚಾಂಪಿಯನ್‌ಷಿಪ್‌ಗಳಲ್ಲಿ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದಿದ್ದರು.

ADVERTISEMENT

ಈ ವಿಭಾಗದಲ್ಲಿ ಟರ್ಕಿಯ ಟಾಪ್‌ಟಾಸ್‌ ಕ್ಯಾನರ್ (ಎತ್ತಿದ ಭಾರ; 263 ಕೆ.ಜಿ) ಮತ್ತು ಕೊಲಂಬಿಯಾದ ವಿಲ್ಲಾರ್ ಎಸ್ತಿವೆನ್ ಜೋಸ್ (260 ಕೆ.ಜಿ) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಪಡೆದರು.

ಈ ಕೂಟದಲ್ಲಿ ಈಗಾಗಲೇ ಭಾರತವು ನಾಲ್ಕು ಪಖದಗಳನ್ನು ಜಯಿಸಿದೆ. ಅದರಲ್ಲಿ ತುಷಾರ ಮಾನೆ ಮತ್ತು ಮೆಹುಲಿ ಘೋಷ್ ಅವರು ಬೆಳ್ಳಿ ಪದಕ ಜಯಿಸಿದ್ದಾರೆ. ತಂಗಜಾಮ್‌ ತಬಾಬಿ ದೇವಿ ಅವರು ಜೂಡೊದಲ್ಲಿ ಮೊದಲ ಪದಕ ಗೆದ್ದಿದ್ದರು. 2014ರಲ್ಲಿ ಚೀನಾದ ನಾನ್‌ಜಿಂಗ್‌ನಲ್ಲಿ ನಡೆದಿದ್ದ ಕೂಟದಲ್ಲಿ ಭಾರತ ತಂಡವು ಒಂದು ಬೆಳ್ಳಿ ಮತ್ತು ಒಂದು ಕಂಚಿನ ಪದಕ ಗೆದ್ದಿತ್ತು. 2010ರಲ್ಲಿ ಸಿಂಗಪುರದಲ್ಲಿ ನಡೆದಿದ್ದ ಮೊದಲ ಕೂಟದಲ್ಲಿ ಭಾರತವು ಆರು ಬೆಳ್ಳಿ ಮತ್ತು ಎರಡು ಕಂಚಿನ ಪದಕಗಳನ್ನು ಗಳಿಸಿತ್ತು.

ಸ್ನೇಹಾಗೆ ನಿರಾಸೆ: ಬಾಲಕಿಯರ ವಿಭಾಗದ ವೇಟ್‌ಲಿಫ್ಟಿಂಗ್‌ನಲ್ಲಿ ಸ್ನೇಹಾ ಸೊರೇನ್ ಅವರು ನಿರಾಶೆ ಅನುಭವಿಸಿದರು. 48 ಕೆ.ಜಿ. ವಿಭಾಗದಲ್ಲಿ ಅವರು ಐದನೇ ಸ್ಥಾನ ಪಡೆದರು.

ಕನ್ನಡಿಗ ಶ್ರೀಹರಿಗೆ ಆರನೇ ಸ್ಥಾನ: ಬಾಲಕರ ಈಜು ವಿಭಾಗದಲ್ಲಿ ಬೆಂಗಳೂರಿನ ಶ್ರೀಹರಿ ನಟರಾಜ್ ಅವರು ಪದಕ ಜಯಿಸುವಲ್ಲಿ ಯಶಸ್ವಿಯಾಗಲಿಲ್ಲ.

100 ಮೀಟರ್ಸ್ ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ವರು ಆರನೇ ಸ್ಥಾನ ಪಡೆದರು.

ಅರ್ಚನಾ ಕಾಮತ್‌ಗೆ ಜಯ: ಕನ್ನಡದ ಹುಡುಗಿ ಅರ್ಚನಾ ಕಾಮತ್ ಅವರುಟೇಬಲ್ ಟೆನಿಸ್‌ನಲ್ಲಿ ಬಾಲಕಿಯರ ಸಿಂಗಲ್ಸ್‌ನಲ್ಲಿ ಮುನ್ನಡೆ ಸಾಧಿಸಿದರು.

ಅರ್ಚನಾ 4–2 ರಿಂದ ಮಲೇಷ್ಯಾದ ಜೇವನ್ ಚೂಂಗ್ ವಿರುದ್ಧ ಜಯಿಸಿದರು.

ಇನ್ನೊಂದು ಪಂದ್ಯದಲ್ಲಿ; ಮಾನವ್ ಠಕ್ಕರ್ 4–1ರಿಂದ ಸ್ಲೋವಾಕಿಯಾದ ಅಲೆಕ್ಸಾಂಡ್ರಾ ವೋಕ್ ವಿರುದ್ಧ ಗೆದ್ದರು.

ಲಕ್ಷ್ಯ ಸೇನ್‌ಗೆ ಗೆಲುವು: ಉದಯೋನ್ಮುಖ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್ ಬಾಲಕರ ಸಿಂಗಲ್ಸ್‌ನಲ್ಲಿ ಶುಭಾರಂಭ ಮಾಡಿದ್ದಾರೆ.

ಮೊದಲ ಪಂದ್ಯದಲ್ಲಿ ಅವರು 23–21, 21–8ರಿಂದ ಉಕ್ರೇನ್‌ನ ಡೆನೈಲೊ ಬೊಸ್ನಿಯಕ್ ಅವರನ್ನು ಮಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.