ಒಲಿಂಪಿಕ್
ನವದೆಹಲಿ: ಭಾರತ ಒಲಿಂಪಿಕ್ ಸಂಸ್ಥೆಯಲ್ಲಿ ದೀರ್ಘಕಾಲದಿಂದ ಇದ್ದ ಅಂತಃಕಲಹ ಕೊನೆಗೊಂಡಿದ್ದು, ಸಿಇಒ ರಘುರಾಮ್ ಅಯ್ಯರ್ ಅವರ ನೇಮಕವನ್ನು ಕಾರ್ಯಕಾರಿ ಮಂಡಳಿ ಗುರುವಾರ ಸ್ಥಿರೀಕರಿಸಿದೆ.
ಉದ್ದೀಪನ ಮದ್ದು ಸೇವನೆ ಪ್ರಮಾಣ ದೇಶದಲ್ಲಿ ಗಮನಾರ್ಹ ಮಟ್ಟದಲ್ಲಿ ಏರುತ್ತಿರುವ ಬಗ್ಗೆ ಐಒಸಿ ಎಚ್ಚರಿಸಿದ ಪರಿಣಾಮ ಇದರ ಕಡಿವಾಣಕ್ಕೆ ಸಮಿತಿಯನ್ನು ನೇಮಿಸಿದೆ.
ಸಂಸ್ಥೆಯ ಅಧ್ಯಕ್ಷೆ ಪಿ.ಟಿ.ಉಷಾ ಅವರು 2024ರ ಜನವರಿಯಲ್ಲಿ ಅಯ್ಯರ್ ಅವರನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಕ ಮಾಡಿದ್ದರು. ಅವರಿಗೆ ತಿಂಗಳಿಗೆ ₹20 ಲಕ್ಷ ಮತ್ತು ಇತರ ಭತ್ಯೆ ನಿಗದಿಗೊಳಿಸಿರುವ ಸಂಬಂಧ ಉಷಾ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರ ನಡುವೆ ಸಂಘರ್ಷ ತಲೆದೋರಿತ್ತು.
ಆದರೆ ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ ಅವರ ಮಧ್ಯಪ್ರವೇಶದ ನಂತರ ಕಗ್ಗಂಟಿಗೆ ಪರಿಹಾರ ದೊರೆಯಿತು.
ಏಳು ಮಂದಿ ಸದಸ್ಯರನ್ನು ಹೊಂದಿರುವ ಉದ್ದೀಪನ ಮದ್ದು ತಡೆ ಸಮಿತಿಗೆ ಡೇವಿಸ್ ಕಪ್ ಮಾಜಿ ಆಟಗಾರ ರೋಹಿತ್ ರಾಜಪಾಲ್ ಅಧ್ಯಕ್ಷರಾಗಿದ್ದಾರೆ. ಬ್ಯಾಡ್ಮಿಂಟನ್ ಆಟಗಾರ್ತಿ ಅಪರ್ಣಾ ಪೊಪಟ್, ಕ್ರೀಡಾ ವೈದ್ಯ ಪಿ.ಎಸ್.ಎಂ. ಚಂದ್ರನ್ ಮತ್ತಿತರರು ಸಮಿತಿಯಲ್ಲಿದ್ದಾರೆ.
ಭಾರತದಲ್ಲಿ ಉದ್ದೀಪನ ಮದ್ದು ಸೇವನೆ ಪಾಸಿಟಿವಿಟಿ ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿದೆ ಎಂದು ಲುಸಾನ್‌ಗೆ ಭೇಟಿ ನೀಡಿದ್ದ ಭಾರತದ ನಿಯೋಗದ ಮುಂದೆ ಐಒಸಿ ಪ್ರಸ್ತಾಪಿಸಿತ್ತು ಎಂದು ಅಯ್ಯರ್ ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಉಷಾ, ಐಒಸಿ ಸದಸ್ಯರು ಈ ವೇಳೆ ಹಾಜರಿದ್ದರು.
ಅಹಮದಾಬಾದಿನಲ್ಲಿ 2036 ಒಲಿಂಪಿಕ್ಸ್ ಆತಿಥ್ಯಕ್ಕೆ ಭಾರತ ಆಸಕ್ತಿ ವಹಿಸಿದ್ದು, ಈ ಹಿನ್ನೆಲೆಯಲ್ಲಿ, ಕ್ರೀಡಾ ಕಾರ್ಯದರ್ಶಿ ಹರಿರಂಜನ್ ರಾವ್, ಉಷಾ, ಗುಜರಾತ್ ಕ್ರೀಡಾ ಸಚಿವ ಹರ್ಷ ಸಾಂಘ್ವಿ ಅವರನ್ನು ಒಳಗೊಂಡ ನಿಯೋಗ ಸ್ವಿಜರ್ಲೆಂಡ್‌ನ ಲುಸಾನ್‌ಗೆ ಭೇಟಿ ನೀಡಿತ್ತು.
ಡೋಪಿಂಗ್‌ಗೆ ಸಂಬಂಧಿಸಿ 5000 ಅಥವಾ ಹೆಚ್ಚು ಮಾದರಿಗಳ ಪರೀಕ್ಷೆ ನಡೆಸಿದ ದೇಶಗಳ, ವಿಶ್ಲೇಷಣೆಯನ್ನು ವಾಡಾ ನಡೆಸಿದ್ದು, ನಿಷೇಧಿತ ಮದ್ದು ಸೇವನೆಗೆ ಸಂಬಂಧಿಸಿ ಭಾರತದಲ್ಲಿ 3.8ರಷ್ಟು ಪಾಸಿಟಿವಿಟಿ ಪ್ರಮಾಣ ಕಂಡುಬಂದಿತ್ತು.
ಸ್ವಾಗತ: ಹೊಸ ಕ್ರೀಡಾಡಳಿತ ಮಸೂದೆಯನ್ನು ಐಒಎ ಸ್ವಾಗತಿಸಿದೆ. ಆರಂಭದಲ್ಲಿ ಇದಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಈ ಮಸೂದೆಯನ್ನು ಕೇಂದ್ರವು ಬುಧವಾರ ಸಂಸತ್ತಿನಲ್ಲಿ ಮಂಡಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.