ADVERTISEMENT

ಪಾರ್ಸಿ ಕಾಲೊನಿಯಿಂದ ಪ್ರಶಸ್ತಿಯ ಮುಡಿಯತ್ತ

ವಿಕ್ರಂ ಕಾಂತಿಕೆರೆ
Published 9 ಡಿಸೆಂಬರ್ 2020, 5:20 IST
Last Updated 9 ಡಿಸೆಂಬರ್ 2020, 5:20 IST
ಜೆಹಾನ್ ದಾರುವಾಲ –ಟ್ವಿಟರ್ ಚಿತ್ರ
ಜೆಹಾನ್ ದಾರುವಾಲ –ಟ್ವಿಟರ್ ಚಿತ್ರ   

ಅದು, 2017ರ ಫೆಬ್ರುವರಿ. ಮ್ಯಾನ್‌ಫೀಲ್ಡ್‌ನಲ್ಲಿ ನಡೆದ ನ್ಯೂಜಿಲೆಂಡ್‌ ಗ್ರ್ಯಾನ್‌ಪ್ರಿಯಲ್ಲಿ ಪ್ರಶಸ್ತಿ ಗೆದ್ದ ಜೆಹಾನ್ ದಾರುವಾಲ, ಮೋಟರ್ ಸ್ಪೋರ್ಟ್‌ನಲ್ಲಿ ಮೊದಲ ಪ್ರಶಸ್ತಿಯ ಸಿಹಿ ಉಂಡರು. ಭಾರತದ ರೇಸರ್ ಒಬ್ಬರು ಗಳಿಸಿದ ಮೊದಲ ಗ್ರ್ಯಾನ್‌ಪ್ರಿ ಪ್ರಶಸ್ತಿಯಾಗಿತ್ತು ಅದು. ಮೂರು ವರ್ಷಗಳ ನಂತರ, ಡಿಸೆಂಬರ್‌ ಆರರಂದು ಜೆಹಾನ್ ಮತ್ತೊಂದು ದಾಖಲೆ ಮಾಡಿದರು. ಬಹರೇನ್‌ನಲ್ಲಿ ನಡೆದ ಸಾಖಿರ್ಗ್ರ್ಯಾನ್‌ಪ್ರಿಯಲ್ಲಿ ಮೊದಲಿಗರಾಗುವ ಮೂಲಕ ಎಫ್‌–2 ರೇಸಿಂಗ್‌ನಲ್ಲಿ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಎಂದೆನಿಸಿಕೊಂಡರು. ಮುಂಬೈನ ಪಾರ್ಸಿ ಸಮುದಾಯದ ಕಾಲೊನಿಯಲ್ಲಿ ಬೆಳೆದ ಜೆಹಾನ್ ವಿಶ್ವಮಟ್ಟದ ಸ್ಪರ್ಧೆಗಳಲ್ಲಿ ದೇಶದ ಕೀರ್ತಿ ಪತಾಕೆ ಹಾರಿಸಿದ್ದರ ಹಿಂದೆ ಅಪಾರ ಶ್ರಮವಿದೆ; ತ್ಯಾಗದ ಕಥೆ ಇದೆ.

ಶಾಲಾ ದಿನಗಳಲ್ಲಿ ಗೆಳೆಯರೆಲ್ಲ ಓದು–ಆಟದಲ್ಲಿ ಮಗ್ನರಾಗಿರುತ್ತಿದ್ದರೆ ಜೆಹಾನ್ ಮನಸ್ಸು ರೇಸಿಂಗ್ ಕಾರುಗಳತ್ತ ಹೊರಳಿತ್ತು. 13ನೇ ವಯಸ್ಸಿನಲ್ಲಿ ಕಾರ್ಟಿಂಗ್ (ಆಟಿಕೆಯಂಥ ಕಾರು) ರೇಸ್‌ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ತೊಡಗಿದ ಅವರು ಏಷ್ಯಾ ಮತ್ತು ಯುರೋಪ್‌ನಲ್ಲಿ ಪ್ರಶಸ್ತಿಗಳನ್ನು ಗೆದ್ದು ಗಮನ ಸೆಳೆದರು.

ಕೋಚ್ ರೇಮಂಡ್ ಬ್ಯಾನರ್ಜಿ ಅವರ ಕಣ್ಣಿಗೆ ಬಿದ್ದ ನಂತರ ಜೆಹಾನ್ ಅವರ ಮೋಟರ್ ಕ್ರೀಡೆಯ ಬದುಕು ಹೊಸ ದಿಸೆಯತ್ತ ಹೊರಳಿತು. ಕಾರ್ಟಿಂಗ್‌ನಿಂದ ಫಾರ್ಮುಲಾ ವಾಹನ ಚಾಲನೆಗೆ ತೊಡಗಿದ ಅವರು ಅಲ್ಲೂ ಚಾಣಾಕ್ಷತನ ಮೆರೆದರು, ಹೀಗಾಗಿ ನಾಲ್ಕೇ ವರ್ಷಗಳಲ್ಲಿ ಗ್ರ್ಯಾನ್‌ ಪ್ರಿ ಚಾಂಪಿಯನ್‌ ಆದರು.

ADVERTISEMENT

ಖುರ್ಷಿದ್–ಕೈನಸ್ ದಂಪತಿಯ ಪುತ್ರ ಜೆಹಾನ್. ಮಾಹಿಮ್‌ನ ಸ್ಕಾಟಿಷ್ ಶಾಲೆಯಲ್ಲಿ ಓದಿದ ಅವರು 2011ರಿಂದ ಮೋಟರ್ ಕಾರುಗಳ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. 2015ರಲ್ಲಿ ಸ್ಪೋರ್ಟೆಕ್ ಮೋಟರ್ ಸ್ಪೋರ್ಟ್‌ನ ಸಿಂಗಲ್ ಸೀಟರ್ ವಾಹನದಲ್ಲಿ ನಾರ್ದರ್ನ್ ಯುರೋಪಿಯನ್ ಕಪ್‌ ಸ್ಪರ್ಧೆಯಲ್ಲಿ ಐದನೇ ಸ್ಥಾನ ಗಳಿಸಿ ಭರವಸೆ ಮೂಡಿಸಿದರು. ಆ ವರ್ಷ ಇನ್ನೂ ಎರಡು ಸ್ಪರ್ಧೆಗಳಲ್ಲಿ ಪಾಲ್ಗೊಂಡರೂ ಗಮನಾರ್ಹ ಸಾಧನೆ ಮಾಡಲು ಆಗಲಿಲ್ಲ. 2016ರ ಮೊದಲ ಎರಡು ಸ್ಪರ್ಧೆಗಳಲ್ಲೂ ನಿರಾಸೆ ಕಾಡಿತು. ಆದರೆ ಕೊನೆಯ ಸ್ಪರ್ಧೆಯಲ್ಲಿ ಎರಡನೇ ಸ್ಥಾನಕ್ಕೇರಿದರು. ಇದು ಅವರ ಉತ್ಸಾಹವನ್ನು ಇಮ್ಮಡಿಗೊಳಿಸಲು ನೆರವಾಯಿತು.

ಕಾರ್ಲಿನ್ ಮೋಟರ್ ಸ್ಪೋರ್ಟ್‌ ಕಂಪನಿಯ ಪರವಾಗಿ ಕಣಕ್ಕೆ ಇಳಿಯುವ ಜೆಹಾನ್ ಅವರು ರೆಡ್ ಬುಲ್ ಜೂನಿಯರ್ ತಂಡದ ಸದಸ್ಯರಾಗಿದ್ದಾರೆ. ಕಂಪನಿಯೊಂದರ ವ್ಯವಸ್ಥಾಪಕ ನಿರ್ದೇಶಕರಾಗಿರುವ ತಂದೆಯೇ ಆರಂಭಿಕ ಹಂತದಲ್ಲಿ ತಮಗೆ ಆರ್ಥಿಕ ಬೆಂಬಲ ನೀಡಿದ್ದರು ಎಂದು ಜೆಹಾನ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.