ADVERTISEMENT

ಜೂಲಿಯಸ್‌ ಬಾರ್ ಕಪ್ ಚೆಸ್‌ ಟೂರ್ನಿ: ಸೆಮಿಫೈನಲ್‌ಗೆ ಅರ್ಜುನ್ ಎರಿಗೈಸಿ

ಪ್ರಗ್ನಾನಂದಗೆ ಸೋಲು

ಪಿಟಿಐ
Published 23 ಸೆಪ್ಟೆಂಬರ್ 2022, 10:12 IST
Last Updated 23 ಸೆಪ್ಟೆಂಬರ್ 2022, 10:12 IST
ಅರ್ಜುನ್ ಎರಿಗೈಸಿ– ಟ್ವಿಟರ್ ಚಿತ್ರ
ಅರ್ಜುನ್ ಎರಿಗೈಸಿ– ಟ್ವಿಟರ್ ಚಿತ್ರ   

ನ್ಯೂಯಾರ್ಕ್‌: ಜಯದ ಓಟ ಮುಂದುವರಿಸಿದ ಭಾರತದ ಅರ್ಜುನ್ ಎರಿಗೈಸಿ ಅವರು ಜೂಲಿಯಸ್‌ ಬಾರ್ ಜೆನರೇಷನ್ ಕಪ್ ಚೆಸ್‌ ಟೂರ್ನಿಯ ನಾಲ್ಕರ ಘಟ್ಟಕ್ಕೆ ಲಗ್ಗೆಯಿಟ್ಟರು. ಆದರೆ ಪ್ರಗ್ನಾನಂದ ಟೂರ್ನಿಯಿಂದ ಹೊರಬಿದ್ದರು.

ಆನ್‌ಲೈನ್‌ ಟೂರ್ನಿಯ ಕ್ವಾರ್ಟರ್‌ಫೈನಲ್‌ನಲ್ಲಿ ಅರ್ಜುನ್ ಶುಕ್ರವಾರ ಟೈಬ್ರೇಕ್ ಮೂಲಕ ಅಮೆರಿಕದ ಕ್ರಿಸ್ಟೊಫರ್ ಯೋ ಅವರನ್ನು ಮಣಿಸಿದರು.

19 ವರ್ಷದ ಅರ್ಜುನ್‌ ಮತ್ತು 15ರ ಪ್ರಾಯದ ಯೋ ಮೊದಲ ನಾಲ್ಕು ರ‍್ಯಾಪಿಡ್‌ ಗೇಮ್‌ಗಳಲ್ಲಿ 2–2ರ ಸಮಬಲ ಸಾಧಿಸಿದರು. ಬ್ಲಿಟ್ಜ್‌ ಟೈಬ್ರೇಕರ್‌ನ ಎರಡು ಗೇಮ್‌ಗಳ ಪೈಕಿ ಮೊದಲನೆಯದ್ದರಲ್ಲಿ ಅರ್ಜುನ್ ಗೆಲುವು ಸಾಧಿಸಿದರೆ ಎರಡನೇ ಗೇಮ್‌ಅನ್ನು ಡ್ರಾ ಮಾಡಿಕೊಂಡು ಸೆಮಿಗೆ ಅರ್ಹತೆ ಗಳಿಸಿದರು.

ADVERTISEMENT

ಪ್ರಗ್ನಾನಂದ ಎಂಟರಘಟ್ಟದ ಪಂದ್ಯದಲ್ಲಿ 1–3ರಿಂದ ಜರ್ಮನಿಯ ವಿನ್ಸೆಂಟ್‌ ಕೇಮರ್ ಎದುರು ಸೋತರು.

ವಿಶ್ವ ಚಾಂಪಿಯನ್‌, ನಾರ್ವೆಯ ಮ್ಯಾಗ್ನಸ್‌ ಕಾರ್ಲ್‌ಸನ್ ಕೂಡ ನಾಲ್ಕರ ಘಟ್ಟ ಪ್ರವೇಶಿಸಿದ್ದಾರೆ. ಸೆಮಿಫೈನಲ್‌ನಲ್ಲಿ ಅವರು ವಿನ್ಸೆಂಟ್‌ ಅವರಿಗೆ ಮುಖಾಮುಖಿಯಾಗುವರು.

ಸೆಮಿಫೈನಲ್‌ನ ಮತ್ತೊಂದು ಹಣಾಹಣಿಯಲ್ಲಿ ಅರ್ಜುನ್, ವಿಯೆಟ್ನಾಂನ ಲಿಯೆಮ್‌ ಕ್ವಾಂಗ್‌ ಲೀ ಅವರನ್ನು ಎದುರಿಸುವರು.

ಎಂಟರಘಟ್ಟದ ಪಂದ್ಯಗಳಲ್ಲಿ ಕಾರ್ಲ್‌ಸನ್‌ ಅವರು 3–1ರಿಂದ ಅಮೆರಿಕದ ಲೆವನ್‌ ಅರೋನಿಯನ್ ಎದುರು, ಕ್ವಾಂಗ್‌ ಲೀ 2.5–1.5ರಿಂದ ಅಮೆರಿಕದ ಇನ್ನೋರ್ವ ಆಟಗಾರ ಹಾನ್ಸ್ ನೀಮನ್ ವಿರುದ್ಧ ಗೆದ್ದರು.

ಸೆಮಿಫೈನಲ್‌ಗಳಲ್ಲಿ ಆಟಗಾರರ ನಾಲ್ಕು ಗೇಮ್‌ಗಳ ಎರಡು ಸೆಟ್‌ ಆಟವಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.