ನವದೆಹಲಿ: ಭಾರತ ಜೂನಿಯರ್ ಮಹಿಳಾ ಹಾಕಿ ತಂಡವು ಐದು ಪಂದ್ಯಗಳ ಸರಣಿಗಾಗಿ ಇದೇ ತಿಂಗಳು ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ.
ವರ್ಷಾಂತ್ಯದಲ್ಲಿ ನಡೆಯಲಿರುವ ಎಫ್‌ಐಎಚ್ ವಿಶ್ವಕಪ್ ಟೂರ್ನಿಗೆ ಮುನ್ನ ಸುಧಾರಿಸಬೇಕಾದ ಕ್ಷೇತ್ರಗಳನ್ನು ಗುರುತಿಸಲು ಈ ಪ್ರವಾಸವು ತಂಡಕ್ಕೆ ನೆರವಾಗಲಿದೆ ಎಂದು ತಂಡದ ಕೋಚ್ ತುಷಾರ್ ಖಾಂಡ್ಕರ್ ಹೇಳಿದ್ದಾರೆ.
ಭಾರತ ತಂಡವು ಸೆ.26ರಿಂದ ಅ.2 ರವರೆಗೆ ಕ್ಯಾನ್ಬೆರಾದ ರಾಷ್ಟ್ರೀಯ ಹಾಕಿ ಕೇಂದ್ರದಲ್ಲಿ ಸರಣಿಯನ್ನು ಆಡಲಿದೆ. ಇದೇ 26, 27 ಮತ್ತು 29 ರಂದು ನಡೆಯುವ ಮೊದಲ ಮೂರು ಪಂದ್ಯಗಳಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ಜೂನಿಯರ್ ತಂಡವನ್ನು ಎದುರಿಸಲಿದೆ. 30 ಮತ್ತು ಅ.2ರಂದು ಆಸ್ಟ್ರೇಲಿಯಾದ ದೇಶಿ ತಂಡ ಕ್ಲಬ್ ಕ್ಯಾನ್‌ಬೆರಾ ಚಿಲ್ ವಿರುದ್ಧ ಆಡಲಿದೆ.
‘ಆಸ್ಟ್ರೇಲಿಯಾ ವಿರುದ್ಧದ ಈ ಸ್ಪರ್ಧಾತ್ಮಕ ಸರಣಿಯು ನಮ್ಮ ಆಟಗಾರರಿಗೆ ಅಮೂಲ್ಯ ಅನುಭವ ದೊರೆಯುತ್ತದೆ. ಜೂನಿಯರ್ ವಿಶ್ವಕಪ್‌ನ ಸವಾಲುಗಳಿಗೆ ತಂಡವನ್ನು ಸಜ್ಜುಗೊಳಿಸಲು ಸಹಾಯವಾಗಲಿದೆ’ ಎಂದು ಖಾಂಡ್ಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ವರ್ಷದ ಡಿಸೆಂಬರ್‌ನಲ್ಲಿ ಚಿಲಿಯ ಸ್ಯಾಂಟಿಯಾಗೊದಲ್ಲಿ ಜೂನಿಯರ್ ಮಹಿಳಾ ಜೂನಿಯರ್ ವಿಶ್ವಕಪ್ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.