ADVERTISEMENT

ವಿಜಯ ದಿನಕ್ಕೆ ಮಿಡಿದ ತಾರಾ ಹೃದಯಗಳು: ನಮಗೆ ಗುರಾಣಿ ನೀವು ಸದಾ ಋಣಿ ನಾವು

​ಪ್ರಜಾವಾಣಿ ವಾರ್ತೆ
Published 26 ಜುಲೈ 2020, 19:30 IST
Last Updated 26 ಜುಲೈ 2020, 19:30 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

‘ಶತ್ರುಗಳು ಮತ್ತು ನಮ್ಮ ನಡುವೆ ಗುರಾಣಿಯಾಗಿ ನಿಂತಿರುವವರು ನೀವು. ವೀರಯೋಧರಿಂದಾಗಿಯೇ ದೇಶ ಸುರಕ್ಷಿತ. ನಮ್ಮ ಹೆಮ್ಮೆ ನಮ್ಮ ಸೇನೆ. ವಿಜಯ ದಿನದ ಶುಭಾಶಯಗಳು’–

ಅಥೆನ್ಸ್‌ ಒಲಿಂಪಿಕ್ಸ್‌ನಲ್ಲಿ ಬೆಳ್ಳಿಪದಕ ಜಯಿಸಿದ್ದ ಶೂಟರ್‌, ಸಂಸದ ರಾಜ್ಯವರ್ಧನ್ ಸಿಂಗ್ ಅವರು ಮಾಡಿರುವ ಟ್ವೀಟ್ ಸಂದೇಶ ಇದು.

ಕಾರ್ಗಿಲ್ ಸಮರದಲ್ಲಿ ಪಾಕಿಸ್ತಾನ ಪಡೆಗಳನ್ನು ಹಿಮ್ಮೆಟ್ಟಿಸಿ ಮೆರೆದ ಭಾರತಕ್ಕೆ ಜುಲೈ 26 ವಿಜಯ ದಿವಸ. ಅದಕ್ಕೀಗ 21 ವರ್ಷ. ಇಡೀ ದೇಶವೇ ನಮ್ಮ ಸೇನೆಯ ವೀರಾವೇಷವನ್ನು ಕೊಂಡಾಡುತ್ತಿದೆ. ಹೆಮ್ಮೆಯಿಂದ ಪುಳಕಿತವಾಗುತ್ತಿದೆ. ಎಲ್ಲ ಕ್ಷೇತ್ರದ ದಿಗ್ಗಜರೂ ಗೌರವ ಸಲ್ಲಿಸಿದ್ದಾರೆ. ಕ್ರಿಕೆಟಿಗರು, ಕ್ರೀಡಾ ಪಟುಗಳು ಸಿನಿತಾರೆಯರೂ ಗೌರವ ಸಲ್ಲಿಸಿದ್ದಾರೆ.

ADVERTISEMENT

‘ನಮ್ಮ ರಕ್ಷಣಾ ಪಡೆಗಳ ನಿಸ್ವಾರ್ಥ ನಡೆ, ದೇಶಪ್ರೇಮದ ಅಸಂಖ್ಯಾತ ಕಥೆಗಳು ಸದಾ ಸ್ಫೂರ್ತಿದಾಯಕ. ನಮ್ಮ ಸೇನೆಗಳು ನಮ್ಮ ಹೆಮ್ಮೆ. ಅವರ ಸೇವೆಗೆ ನಾವು ಸದಾ ಋಣಿ. ಕಾರ್ಗಿಲ್‌ನಲ್ಲಿ ಅವರ ಶೌರ್ಯ ಸರ್ವಶ್ರೇಷ್ಠ’ ಎಂದು ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.

ಸಚಿನ್ ಜೊತೆಗೆ ಭಾರತ ತಂಡದ ಬ್ಯಾಟಿಂಗ್ ಆರಂಭಿಸುತ್ತಿದ್ದ ‘ನಜಾಫಗಡದ ಸಚಿನ್’ ಎಂದೇ ಖ್ಯಾತರಾದ ವೀರೇಂದ್ರ ಸೆಹ್ವಾಗ್, ‘ಆಪ್‌ ಹೈ ತೋ ಹಮ್ ಹೈ (ನೀವಿದ್ದರಷ್ಟೇ ನಾವು). ನಮ್ಮ ರಕ್ಷಿಸಿದ ಎಲ್ಲ ಹುತಾತ್ಮರಿಗೆ ಹೃದಯಾಂತರಾಳದ ನಮನಗಳು’ ಎಂದಿದ್ದಾರೆ. ಕ್ರಿಕೆಟಿಗ ವಿ.ವಿ.ಎಸ್. ಲಕ್ಷ್ಮಣ್ ‘ಜೈಹಿಂದ್’ ಎಂದು ಗೌರವಿಸಿದ್ದಾರೆ. ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಶೂಟರ್ ಗಗನ್ ನಾರಂಗ್, ಬಾಕ್ಸಿಂಗ್ ಪಟು ಗೌವ್ ಬಿಧುರಿ ಯೋಧರ ತ್ಯಾಗವನ್ನು ಕೊಂಡಾಡಿದ್ದಾರೆ.

ಈ ಸಾಲಿನಲ್ಲಿ ಪ್ರಮುಖ ಸಿನಿತಾರೆಯೂ ಜೊತೆಗೂಡಿದ್ದಾರೆ.

‘ಎಲ್‌ಒಸಿ ಕಾರ್ಗಿಲ್‌’ ಸಿನಿಮಾದಲ್ಲಿ ಕರ್ನಲ್‌ ಬಲವಾನ್‌ಸಿಂಗ್‌ ಪಾತ್ರ ನಿರ್ವಹಿಸಿದ್ದ ಬಾಲಿವುಡ್‌ ನಟ ಅಕ್ಷಯ್‌ ಖನ್ನಾ ‘ಸಿನಿಮಾದಲ್ಲಿ ಈ ಪಾತ್ರ ನಿರ್ವಹಿಸಿದ್ದು ಹೆಮ್ಮೆಯ ಸಂಗತಿ, ಕಾರ್ಗಿಲ್‌ನ ನಿಜವಾದ ಹೀರೊಗಳಿಗೆ ನನ್ನ ಅನಂತ ನಮನಗಳು’ ಎಂದು ಟ್ವೀಟ್ ಮಾಡಿದ್ದಾರೆ. ಸಿನಿಮಾದ ಪೋಸ್ಟರ್‌ ಅನ್ನು ತಮ್ಮ ಟ್ವೀಟ್‌ನೊಂದಿಗೆ ಅಂಟಿಸಿದ್ದಾರೆ. ಬಲವಾನ್‌ ಸಿಂಗ್‌ ಪಂಗಲ್‌ ಅವರು ಮಹಾವೀರ ಚಕ್ರ ಪುರಸ್ಕಾರಕ್ಕೆ ಪಾತ್ರರಾಗಿದ್ದರು.

‘ನಮ್ಮ ಸಶಸ್ತ್ರ ಪಡೆಗಳ ಅದಮ್ಯ ಉತ್ಸಾಹವನ್ನು ಸ್ಮರಿಸಿಕೊಳ್ಳಲು ಇದು ಸುದಿನ. ಕಾರ್ಗಿಲ್‌ ವಿಜಯಕ್ಕೆ ಎರಡು ದಶಕಗಳಾದವು. ಕಾಲದ ವೇಗ ಗೊತ್ತಾಗುವುದೇ ಇಲ್ಲ. ಜೈ ಹಿಂದ್’ ಎಂದು ನಟಿ ಪ್ರಣಿತಾ ಸುಭಾಶ್‌ ಟ್ವೀಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಇದೇ ರೀತಿ ಭಾನುವಾರ ಇಡೀ ದಿನವೂ ಸೆಲಿಬ್ರಿಟಿಗಳ ಸಂದೇಶಗಳ ಮಹಾಪೂರ ಸಾಮಾಜಿಕ ಜಾಲತಾಣಗಳಲ್ಲಿ ಹರಿಯುತ್ತಲೇ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.