ADVERTISEMENT

ಎಂಟರ ಘಟ್ಟಕ್ಕೆ ಕರ್ನಾಟಕ ಪುರುಷರ ತಂಡ

ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್; ಮಹಿಳಾ ತಂಡ ಪ್ರೀ ಕ್ವಾರ್ಟರ್‌ಗೆ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2019, 9:45 IST
Last Updated 26 ಡಿಸೆಂಬರ್ 2019, 9:45 IST
ಕರ್ನಾಟಕದ ಥಾಮಸ್ ಐಸಕ್ ಪಾಯಿಂಟ್ ಗಳಿಸಿದ ಸಂದರ್ಭ
ಕರ್ನಾಟಕದ ಥಾಮಸ್ ಐಸಕ್ ಪಾಯಿಂಟ್ ಗಳಿಸಿದ ಸಂದರ್ಭ   

ಬೆಂಗಳೂರು: ಕರ್ನಾಟಕ ಪುರುಷರ ತಂಡ ಲುಧಿಯಾನದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನ ಕ್ವಾರ್ಟರ್ ಫೈನಲ್‌ ಪ್ರವೇಶಿಸಿದೆ. ಮಹಿಳಾ ತಂಡ ಪ್ರೀ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ ಇರಿಸಿತು.

ಗುರುನಾನಕ್ ದೇವ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ 97–74ರಲ್ಲಿ ಹರಿಯಾಣವನ್ನು ಮಣಿಸಿತು. ಅರವಿಂದ ಆರ್ಮುಗಂ 22 ಪಾಯಿಂಟ್ ಗಳಿಸಿ ಮಿಂಚಿದರೆ ಥಾಮಸ್ ಐಸಕ್ 18, ಅಭಿಷೇಕ್ ಗೌಡ 13, ಜಿತೇಂದ್ರ ಸಿಂಗ್ 12, ಅನಿಲ್ ಕುಮಾರ್ ಮತ್ತು ಕಾರ್ತಿಕೇಯನ್ ತಲಾ 11 ಮತ್ತು ಎಂ.ಹರೀಶ್ 10 ಪಾಯಿಂಟ್ ಗಳಿಸಿ ತಂಡದ ಗೆಲುವಿಗೆ ಉತ್ತಮ ಕಾಣಿಕೆ ನೀಡಿದರು.

ಹರಿಯಾಣಕ್ಕಾಗಿ ಯುವಧೀರ್ ಸಿಂಗ್ 24, ಅಭಿಷೇಕ್ 18, ವಿಕಾಸ್ ಕುಮಾರ್ 14 ಪಾಯಿಂಟ್ ಗಳಿಸಿದರು. ತಮಿಳುನಾಡು, ಪಂಜಾಬ್‌, ಸರ್ವಿಸಸ್‌, ರೈಲ್ವೇಸ್‌ ಮತ್ತು ಉತ್ತರಾಖಂಡ ತಂಡಗಳು ಕೂಡ ಎಂಟರ ಘಟ್ಟಕ್ಕೆ ಲಗ್ಗೆ ಇರಿಸಿದವು.

ADVERTISEMENT

ಕರ್ನಾಟಕ 16ರ ಘಟ್ಟಕ್ಕೆ: ಮಹಿಳೆಯರ ವಿಭಾಗದಲ್ಲಿ ಕರ್ನಾಟಕ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿತು. ಗುಂಪು ಹಂತದ ಕೊನೆಯ ಪಂದ್ಯದಲ್ಲಿ ತಮಿಳುನಾಡು ವಿರುದ್ಧ 68–49ರಲ್ಲಿ ಕರ್ನಾಟಕ ಗೆಲುವು ಸಾಧಿಸಿತು. ತಮಿಳುನಾಡು ಒಂದು ಪಂದ್ಯವನ್ನೂ ಗೆಲ್ಲದೆ ಟೂರ್ನಿಯಿಂದ ಹೊರಬಿದ್ದಿತು. ಲೋಪಮುದ್ರಾ ತಿಮ್ಮಯ್ಯ (18 ಪಾಯಿಂಟ್‌), ವರ್ಷಾ ನಂದಿನಿ (17), ವಿನಯಾ ಜೋಸೆಫ್ (13) ಮತ್ತು ಅನುಷಾ (10) ಕರ್ನಾಟಕದ ಪರ ಮಿಂಚಿದರು. ತಮಿಳುನಾಡು ತಂಡಕ್ಕಾಗಿ ರಾಜೇಶ್ವರಿ 23 ಪಾಯಿಂಟ್ ಕಲೆ ಹಾಕಿದರು.

ರೈಲ್ವೇಸ್ ಮತ್ತು ಕೇರಳ ತಂಡಗಳು ಅಜೇಯವಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದವು. ತೆಲಂಗಾಣ, ದೆಹಲಿ, ಮಧ್ಯಪ್ರದೇಶ ಮತ್ತು ಪಂಜಾಬ್ ಕೂಡ ಎಂಟರ ಘಟ್ಟ ಪ್ರವೇಶಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.