ಬೆಂಗಳೂರು: ತುಷಾರ್ ಸುವೀರ್ ಮತ್ತು ಶೈನಾ ಮಣಿಮುತ್ತು ಅವರು ಭಾನುವಾರ ಇಲ್ಲಿ ನಡೆದ ಕರ್ನಾಟಕ ರಾಜ್ಯ ರ‍್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷ ಮತ್ತು ಮಹಿಳಾ ವಿಭಾಗಗಗಳ ಪ್ರಶಸ್ತಿ ಜಯಿಸಿದರು.
ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ (ಕೆಬಿಎ)ಯಲ್ಲಿ ನಡೆದ ಟೂರ್ನಿಯಲ್ಲಿ ತುಷಾರ್ ಅವರು ಪುರುಷರ ಫೈನಲ್‌ನಲ್ಲಿ 22–20, 21–19ರಿಂದ ಐದನೇ ಶ್ರೇಯಾಂಕದ ನಿಕೋಲಸ್ ರಾಜ್ ವಿರುದ್ಧ ಗೆದ್ದರು. ಮೊದಲ ಗೇಮ್‌ನಲ್ಲಿ ಉಭಯ ಆಟಗಾರರು ಭಾರಿ ಪೈಪೋಟಿ ನಡೆಸಿದರು. ಅದರಿಂದಾಗಿ ಗೇಮ್ ಫಲಿತಾಂಶವು ಟೈಬ್ರೇಕರ್‌ನಲ್ಲಿ ಹೊರಹೊಮ್ಮಿತು.
ಬೆಂಗಳೂರು ಗ್ರಾಮಾಂತರ ವಿಭಾಗದ ಆಟಗಾರ ತುಷಾರ್ ಎರಡನೇ ಗೇಮ್‌ನಲ್ಲಿ ಚುರುಕಾಗಿ ಆಡಿದರು. 21–19ರಿಂದ ನಿಕೋಲಸ್ ಪೈಪೋಟಿಯನ್ನು ಮೀರಿ ನಿಂತರು.
ಮಹಿಳೆಯರ ವಿಭಾಗದ ಫೈನಲ್ ರೋಚಕವಾಗಿತ್ತು. ಶೈನಾ ಮಣಿಮುತ್ತು 15-21, 27-25, 21-15 ರಿಂದ ಅಶ್ವತಿ ವರ್ಗೀಸ್ ವಿರುದ್ಧ ಗೆದ್ದರು.
ಮಹಿಳೆಯರ ಡಬಲ್ಸ್‌ನಲ್ಲಿ ಅಶ್ವಿನಿ ಭಟ್–ಶಿಖಾ ಗೌತಮ್ 21–10, 21–8ರಿಂದ ಗ್ಲೋರಿಯಾ ಅಠಾವಳೆ ಮತ್ತು ಪ್ರೇರಣಾ ಎನ್‌ಎಸ್ ಜೋಡಿಯನ್ನು ಸೋಲಿಸಿದರು.
ಮಿಶ್ರ ಡಬಲ್ಸ್‌ನಲ್ಲಿ ನಾಲ್ಕನೇ ಶ್ರೇಯಾಂಕದ ಪ್ರಕಾಶ್ ರಾಜ್ ಎಸ್ ಮತ್ತು ಕರ್ಣಿಕಾ ಶ್ರೀ ಜೋಡಿಯು 18-21, 21-11, 21-16 ರಿಂದ ಕಿಶಾಲ್ ಗಣಪತಿ ಮತ್ತು ರಶ್ಮಿ ಗಣೇಶ್ ವಿರುದ್ಧ ಗೆದ್ದರು.
ಪುರುಷರ ಡಬಲ್ಸ್‌ನಲ್ಲಿ ಎಸ್. ಪವನ್–ಎಸ್ ಪುನೀತ್ 17-21, 22-20, 21-14ರಿಂದ ಅಮಿತ್ ರಾಜ್ ನಟರಾಜ್–ಹಾರ್ದಿಕ್ ದಿವ್ಯಾಂಶ್ ಜೋಡಿಯ ವಿರುದ್ಧ ಮೇಲುಗೈ ಸಾಧಿಸಿದರು.
ಜೂನಿಯರ್ ಬಾಲಕಿಯರ ಸಿಂಗಲ್ಸ್‌ನಲ್ಲಿ ಶೈನಾ ಮಣಿಮುತ್ತು 21-10, 21-15 ರಿಂದ ಹಿತೈಶ್ರೀ ಎಲ್ ರಾಜಯ್ಯ ವಿರುದ್ಧ ಗೆದ್ದರು. ಡಬಲ್ಸ್‌ನಲ್ಲಿ ಅಶ್ವತಿ ವರ್ಗೀಸ್–ಲಕ್ಷ್ಯ ರಾಜೇಶ್ 21–17, 21–8ರಿಂದ ಇಶಿಕಾ ಬರುವಾ ಕಶ್ಯಪ್–ತನಿಕಾ ಮೋಹನ್ ವಿರುದ್ಧ ಗೆದ್ದರು.
ಮಿಶ್ರ ಡಬಲ್ಸ್‌ನಲ್ಲಿ ಎಸ್. ನಿಶ್ಚಲ್–ಸುಹೈನಾ ರಾಯ್ 15-21, 21-18, 21-12 ರಿಂದ ಕ್ರಿಸ್ ಬ್ಯಾಪ್ಟಿಸ್ಟ್ ಮತ್ತು ಎ.ಎಸ್. ಮೌನಿತಾ ವಿರುದ್ಧ ಜಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.