ADVERTISEMENT

ಖೇಲೊ ಇಂಡಿಯಾ: ಹೈಕೋರ್ಟ್‌ ಮೊರೆಹೋದ ಕೊಕ್ಕೊ ಸಂಸ್ಥೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2019, 18:23 IST
Last Updated 2 ಜನವರಿ 2019, 18:23 IST

ಬೆಂಗಳೂರು: ‘ಪುಣೆಯಲ್ಲಿ ಇದೇ 9ರಿಂದ ನಡೆಯಲಿರುವ ಖೇಲೊ ಇಂಡಿಯಾ ಯುವ ಕ್ರೀಡಾಕೂಟದಲ್ಲಿ (ಕೆಐವೈಜಿ) ಪಾಲ್ಗೊಳ್ಳಲು ನಮಗೆ ಅನುಮತಿ ನೀಡಿಲ್ಲ’ ಎಂದು ಆಕ್ಷೇಪಿಸಿ ಕರ್ನಾಟಕ ರಾಜ್ಯ ಕೊಕ್ಕೊ ಅಸೋಸಿಯೇಷನ್ ಹೈಕೋರ್ಟ್ ಮೆಟ್ಟಿಲೇರಿದೆ.

ಅಸೋಸಿಯೇಷನ್ ಗೌರವ ಕಾರ‍್ಯದರ್ಶಿ ಆರ್. ಮಲ್ಲಿಕಾರ್ಜುನಯ್ಯ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಬಿ.ಎಂ.ಶ್ಯಾಮ್‌ಪ್ರಸಾದ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಾದ ಮಂಡಿಸಿದ ವಕೀಲೆ ಡಿ.ಸಂಧ್ಯಾ, ‘ಅಧಿಕೃತ ಕೊಕ್ಕೊ ಸಂಸ್ಥೆ ಕಳುಹಿಸಿರುವ ಪಟ್ಟಿಯನ್ನು ಕಡೆಗಣಿಸಿ, ಕರ್ನಾಟಕ ರಾಜ್ಯ ಒಲಿಂಪಿಕ್ ಸಂಸ್ಥೆ ಪ್ರತ್ಯೇಕ ತಂಡ ರಚಿಸಿ ಅದಕ್ಕೆ ಅನುಮೋದನೆ ಪಡೆದಿದೆ ಮತ್ತು ಆ ತಂಡವನ್ನು ಕ್ರೀಡಾಕೂಟಕ್ಕೆ ಕಳುಹಿಸಲು ಮುಂದಾಗಿದೆ. ಇದು ಅಕ್ರಮ ಹಾಗೂ ಕಾನೂನು ಬಾಹಿರ’ ಎಂದು ವಿವರಿಸಿದರು.

ADVERTISEMENT

ಆಕ್ಷೇಪಣೆ ಏನು?: ಕೊಕ್ಕೊ ಫೆಡರೇಷನ್ ಆಫ್ ಇಂಡಿಯಾ 2018ರ ಅಕ್ಟೋಬರ್‌ 7ರಂದು ನಮಗೆ ಪತ್ರ ಬರೆದು
ಖೇಲೊ ಇಂಡಿಯಾ ಕ್ರೀಡಾಕೂಟಕ್ಕೆ ಪುರುಷರ ಹಾಗೂ ಮಹಿಳೆಯರ ತಂಡಗಳನ್ನು ಆಯ್ಕೆ ಮಾಡಿ ಕಳುಹಿಸಿಕೊಡಿ ಎಂದು ಸೂಚಿಸಿತ್ತು. ಅದರಂತೆ ಎರಡು ತಂಡಗಳನ್ನು ಆಯ್ಕೆ ಮಾಡಿ ಪಟ್ಟಿ ಕಳುಹಿಸಿಕೊಟ್ಟಿದ್ದೆವು. ಆದರೆ, ಸರ್ಕಾರ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಕಾರ‍್ಯದರ್ಶಿಗಳನ್ನು ಕ್ರೀಡಾಕೂಟಕ್ಕೆ ರಾಜ್ಯದ ನೋಡಲ್ ಏಜೆನ್ಸಿಯನ್ನಾಗಿ ನೇಮಿಸಿತು' ಎಂದರು.

‘ಹೀಗಾಗಿ ನೋಡಲ್ ಅಧಿಕಾರಿಯಿಂದ ಆಯ್ಕೆ ಪಟ್ಟಿಗೆ ಅನುಮೋದನೆ ಪಡೆದು ಕಳುಹಿಸುವಂತೆ ಫೆಡರೇಷನ್ ಸೂಚಿಸಿತ್ತು. ಇದರನ್ವಯ ನ.27 ರಂದು ಅಸೋಸಿಯೇಷನ್ ಆಯ್ಕೆ ಪಟ್ಟಿಯನ್ನು ನೀಡಿತ್ತು. ಆದರೆ ಈವರೆಗೂ ಅದಕ್ಕೆ ಅನುಮತಿ ನೀಡಿಲ್ಲ’ ಎಂಬುದು ಅರ್ಜಿದಾರರ ಆಕ್ಷೇಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.