ಟೋಕಿಯೊ: ಕೆನ್ಯಾದ ಅಥ್ಲೀಟ್‌ಗಳಾದ ಇಮ್ಯಾನುವಲ್ ವಾನ್ಯೋನಿ ಮತ್ತು ಬಿಯಟ್ರಸ್ ಚೆಬೆಟ್ ಅವರು ಶನಿವಾರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಪುರುಷರ 800 ಮೀಟರ್ ಮತ್ತು ಮಹಿಳೆಯರ 5,000 ಮೀಟರ್ ಓಟದಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು.
ಕಳೆದ ವರ್ಷ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಇದೇ ಸ್ಪರ್ಧೆಯಲ್ಲಿ ಚಾಂಪಿಯನ್ ಆಗಿದ್ದ ಈ ಇಬ್ಬರು ಅಥ್ಲೀಟ್‌ಗಳು ಮತ್ತೊಮ್ಮೆ ವಿಶ್ವ ಮಟ್ಟದ ಸ್ಪರ್ಧೆಯಲ್ಲಿ ಪಾರಮ್ಯ ಮೆರೆದರು. ಚೆಬೆಟ್ ಅವರು ಇಲ್ಲಿ 10,000 ಮೀಟರ್ ಸ್ಪರ್ಧೆಯಲ್ಲೂ ಸ್ವರ್ಣ ಗೆದ್ದಿದ್ದಾರೆ.
ಜಪಾನ್‌ನ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸೇರಿದ್ದ 58,000ಕ್ಕೂ ಅಧಿಕ ಪ್ರೇಕ್ಷಕರ ಮುಂದೆ 25 ವರ್ಷದ ಚೆಬೆಟ್ (14 ನಿ. 54.36ಸೆ) ಅವರು ತಮ್ಮ ‘ಸ್ಫೂರ್ತಿಯ ಚಿಲುಮೆ’ಯಾಗಿರುವ ದಿಗ್ಗಜ ಅಥ್ಲೀಟ್ ಫೇತ್ ಕಿಪ್ಯೆಗಾನ್ (ಕೆನ್ಯಾ) ಅವರನ್ನು ಹಿಂದಿಕ್ಕಿದರು. ಒಂದೇ ಚಾಂಪಿಯನ್‌ಷಿಪ್‌ನಲ್ಲಿ ದೂರ ಅಂತದ ಓಟದಲ್ಲಿ ‘ಡಬಲ್’ ಚಿನ್ನ ಗೆದ್ದ ಮೂರನೇ ಮಹಿಳಾ ಅಥ್ಲೀಟ್ ಎಂಬ ಹಿರಿಮೆಗೆ ಚೆಬೆಟ್ ಪಾತ್ರವಾದರು.
ಮಹಿಳೆಯರ 1500 ಮೀ. ಓಟದಲ್ಲಿ ಅಭೂತಪೂರ್ವ ನಾಲ್ಕನೇ ಸಲ ಚಿನ್ನ ಗೆದ್ದ ಕಿಪ್ಯೆಗಾನ್ (14:55.07) ಅವರು ಈ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದರು. ಇಟಲಿಯ ನಾಡಿಯಾ ಬ್ಯಾಟೊಕ್ಲೆಟ್ಟಿ (14:55.42) ಕಂಚಿನ ಪದಕ ತಮ್ಮದಾಗಿಸಿಕೊಂಡರು.
21 ವರ್ಷದ ಇಮ್ಯಾನುವಲ್ ಅವರು 800 ಮೀ. ಫೈನಲ್‌ನಲ್ಲಿ 1 ನಿಮಿಷ 41.86 ಸೆಕೆಂಡುಗಳಲ್ಲಿ ಗುರಿ ತಲುಪಿ, ಚಾಂಪಿಯನ್‌ಷಿಪ್ ದಾಖಲೆ ನಿರ್ಮಿಸಿದರು. ಅಲ್ಜೀರಿಯಾದ ಜಾಮೆಲ್ ಸೆಡ್ಜಾಟಿ (1:41.90) ಮತ್ತು ಕೆನಡಾದ ಮಾರ್ಕೊ ಅರೋಪ್ (1:41.95) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.