ADVERTISEMENT

ಖೇಲೊ ಇಂಡಿಯಾ ಈಜು: ಚಿನ್ನಕ್ಕೆ ಕೊರಳೊಡ್ಡಿದ ರಿಧಿಮಾ, ಲಾಕ್ಷ್ಯಾ

​ಪ್ರಜಾವಾಣಿ ವಾರ್ತೆ
Published 9 ಜೂನ್ 2022, 16:16 IST
Last Updated 9 ಜೂನ್ 2022, 16:16 IST
ರಿಧಿಮಾ ವೀರೇಂದ್ರಕುಮಾರ್
ರಿಧಿಮಾ ವೀರೇಂದ್ರಕುಮಾರ್   

ಬೆಂಗಳೂರು: ಕರ್ನಾಟಕದ ಈಜುಪಟುಗಳು ಖೇಲೊ ಇಂಡಿಯಾ ಯೂತ್ ಗೇಮ್ಸ್‌ನಲ್ಲಿ ಗುರುವಾರವೂ ಪದಕಗಳ ಬೇಟೆಯಾಡಿದರು.

ಹರಿಯಾಣದ ಪಂಚಕುಲಾದಲ್ಲಿ ನಡೆಯುತ್ತಿರುವ ಕೂಟದ ಬಾಲಕರ 100 ಮೀಟರ್ಸ್ ಬ್ಯಾಕ್‌ಸ್ಟ್ರೋಕ್‌ನಲ್ಲಿ ರಿಧಿಮಾ ವೀರೇಂದ್ರ ಕುಮಾರ್ ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದರು. 1 ನಿಮಿಷ 5.13 ಸೆಕೆಂಡುಗಳಲ್ಲಿ ಅವರು ಗುರಿ ತಲುಪಿದರು. ಈ ವಿಭಾಗದಲ್ಲಿ ನೀನಾ ವೆಂಕಟೇಶ್ ಬೆಳ್ಳಿ ಜಯಿಸಿದರು.

ಬಾಲಕರ 1500 ಮೀ. ಫ್ರೀಸ್ಟೈಲ್‌ನಲ್ಲಿ ಅನೀಶ್‌ ಗೌಡ (16 ನಿ. 23.85 ಸೆ.) ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಈ ವಿಭಾಗದಲ್ಲಿ ಪವನ್ ಧನಂಜಯ್ ಕಂಚು ಜಯಿಸಿದರು. ಬಾಲಕಿಯರ 4X100 ಮೀ. ಫ್ರೀಸ್ಟೈಲ್‌ನಲ್ಲಿ ಕರ್ನಾಟಕ ಬೆಳ್ಳಿ ಜಯಿಸಿತು.

ADVERTISEMENT

ಬಾಲಕರ 100 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ಉತ್ಕರ್ಷ್ ಪಾಟೀಲ್ (58.63 ಸೆ.),200 ಮೀಟರ್ಸ್ ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ಲಾಕ್ಷ್ಯಾ (2 ನಿ. 46.31 ಸೆ.) ಅವರು ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಇದೇ ವಿಭಾಗದಲ್ಲಿ ಲಿನೇಶಾ ಎ.ಕೆ. ಬೆಳ್ಳಿ ಮತ್ತು ಸಾನ್ವಿ ರಾವ್‌ ಕಂಚು ಜಯಿಸಿದರು.

400 ಮೀ. ಫ್ರೀಸ್ಟೈಲ್‌ನಲ್ಲಿ ಹಷಿಕಾ ರಾಮಚಂದ್ರ ಬೆಳ್ಳಿ ಜಯಿಸಿದರು. ಬಾಲಕರ 200 ಮೀ. ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ವಿದಿತ್ ಶಂಕರ್ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.

ಫುಟ್‌ಬಾಲ್; ಸೆಮಿಗೆ ಕರ್ನಾಟಕ: ಶರತ್ ಗಳಿಸಿದ ಗೋಲಿನ ನೆರವಿನಿಂದ 1–0ಯಿಂದ ಹರಿಯಾಣವನ್ನು ಸೋಲಿಸಿದ ಕರ್ನಾಟಕ ಫುಟ್‌ಬಾಲ್ ತಂಡವು ಸೆಮಿಫೈನಲ್ ತಲುಪಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.