ಹುಬ್ಬಳ್ಳಿ: ಕರ್ನಾಟಕದ ನಾಲ್ವರು ಸೈಕ್ಲಿಸ್ಟ್ ಗಳು, ಗುವಾಹಟಿಯಲ್ಲಿ ನಡೆಯುತ್ತಿರುವ ಖೇಲೊ ಇಂಡಿಯಾ ಯೂತ್ ಕ್ರೀಡಾ ಕೂಟದಲ್ಲಿ ಮಂಗಳವಾರ ಬೆಳ್ಳಿ ಪದಕ ಗಳನ್ನು ಜಯಿಸಿದ್ದಾರೆ.
21 ವರ್ಷದ ಒಳಗಿನವರ ಪುರುಷರ ವಿಭಾಗದ 1,000 ಮೀಟರ್ ವೈಯಕ್ತಿಕ ಟೈಮ್ ಟ್ರಯಲ್ಸ್‌ನಲ್ಲಿ ನೈರುತ್ಯ ರೈಲ್ವೆ ಉದ್ಯೋಗಿ ವೆಂಕಪ್ಪ ಕೆಂಗಲಗುತ್ತಿ ಒಂದು ನಿಮಿಷ 09.254 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಬಾಗಲಕೋಟೆ ತಾಲ್ಲೂಕಿನ ತುಳಸಿಗೇರಿ ಗ್ರಾಮದ ವೆಂಕಪ್ಪ 10 ಕಿ.ಮೀ. ಸ್ಕ್ರ್ಯಾಚ್ ರೇಸ್‍ನಲ್ಲಿಯೂ 29 ನಿಮಿಷ 21.56 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ದಿನದ ಎರಡನೇ ಬೆಳ್ಳಿ ತಮ್ಮದಾಗಿಸಿಕೊಂಡರು.
21 ವರ್ಷದೊಳಗಿನವರ ಮಹಿಳಾ ವಿಭಾಗದ 7.5 ಕಿ.ಮೀ ಸ್ಕ್ರ್ಯಾಚ್ ಸ್ಪರ್ಧೆಯಲ್ಲಿ ಬೆಂಗಳೂರಿನ ಕೀರ್ತಿ ರಂಗಸ್ವಾಮಿ 14 ನಿಮಿಷ 53.246 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಬೆಳ್ಳಿ ಪಡೆದರು. 17 ವರ್ಷದೊಳಗಿನ ಬಾಲಕಿಯರ ವಿಭಾಗದ 500 ಮೀಟರ್ ವೈಯಕ್ತಿಕ ಟೈಮ್ ಟ್ರಯಲ್ಸ್‌ನಲ್ಲಿ ಅಂಕಿತಾ ರಾಠೋಡ 41.697 ಸೆಕೆಂಡುಗಳಲ್ಲಿ ಗುರಿ ತಲುಪಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು.
ಮೂರು ದಿನಗಳಿಂದ ನಡೆಯುತ್ತಿರುವ ಸೈಕ್ಲಿಂಗ್ ಸ್ಪರ್ಧೆಗಳಲ್ಲಿ ಕರ್ನಾಟಕ ತಂಡದವರು ಒಟ್ಟು ಐದು ಬೆಳ್ಳಿ ಮತ್ತು ನಾಲ್ಕು ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.