ADVERTISEMENT

ಅಥ್ಲೆಟಿಕ್ಸ್‌: ಮಂಗಳೂರು ವಿವಿ ಚಾಂಪಿಯನ್‌

ಖೇಲೊ ಇಂಡಿಯಾ ಅಂತರ ವಿವಿ ಕ್ರೀಡಾಕೂಟ: ಆಳ್ವಾಸ್ ಕಾಲೇಜು ವಿದ್ಯಾರ್ಥಿಗಳ ಪಾರಮ್ಯ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2020, 19:47 IST
Last Updated 1 ಮಾರ್ಚ್ 2020, 19:47 IST
ಸಮಗ್ರ ಚಾಂಪಿಯನ್ ಪಟ್ಟ ಗಳಿಸಿದ ಮಂಗಳೂರು ವಿವಿಯ ಅಥ್ಲೀಟ್‌ಗಳೊಂದಿಗೆ ಕೋಚ್‌ಗಳು ಮತ್ತು ಅಧಿಕಾರಿಗಳು
ಸಮಗ್ರ ಚಾಂಪಿಯನ್ ಪಟ್ಟ ಗಳಿಸಿದ ಮಂಗಳೂರು ವಿವಿಯ ಅಥ್ಲೀಟ್‌ಗಳೊಂದಿಗೆ ಕೋಚ್‌ಗಳು ಮತ್ತು ಅಧಿಕಾರಿಗಳು   

ಬೆಂಗಳೂರು: ಒಡಿಶಾದ ಭುವನೇಶ್ವ ರದಲ್ಲಿ ನಡೆದ ಅಖಿಲ ಭಾರತ ಅಂತರ ವಿ.ವಿ ಖೇಲೊ ಇಂಡಿಯಾ ಕ್ರೀಡಾ ಕೂಟದ ಅಥ್ಲೆಟಿಕ್ಸ್‌ ವಿಭಾಗದ ಸಮಗ್ರ ಚಾಂಪಿಯನ್‌ ಪಟ್ಟ ಮಂಗಳೂರು ವಿವಿ ಪಾಲಾಯಿತು. ಪುರುಷ ಮತ್ತು ಮಹಿಳಾ ವಿಭಾಗದ ಚಾಂಪಿಯನ್‌ಷಿಪ್‌ ಕೂಡ ಮಂಗಳೂರು ವಿಶ್ವವಿದ್ಯಾಲಯಕ್ಕೆ ಸಂದಿತು.

ಪುರುಷರ ಅಥ್ಲೆಟಿಕ್ಸ್ ತಂಡ 64 ಪಾಯಿಂಟ್ ಗಳಿಸಿದರೆ ಮಹಿಳೆಯರು 51 ಪಾಯಿಂಟ್ ಕಲೆ ಹಾಕಿದರು. ಏಳು ಚಿನ್ನ, ಆರು ಬೆಳ್ಳಿ ಹಾಗೂ ಐದು ಕಂಚಿನ ಪದಕಗಳು ಮಂಗಳೂರು ಅಥ್ಲೀಟ್‌ಗಳ ಪಾಲಾದವು. ವಿವಿಯನ್ನು ಪ್ರತಿನಿಧಿಸಿದ 32 ವಿದ್ಯಾರ್ಥಿಗಳಲ್ಲಿ 30 ಕ್ರೀಡಾಪಟುಗಳು ಆಳ್ವಾಸ್ ಶಿಕ್ಷಣ ಪ್ರತಿ ಷ್ಠಾನದವರು. ಒಟ್ಟು 18 ಪದಕಗಳ ಪೈಕಿ 17 ಪದಕಗಳು ಈ ಸಂಸ್ಥೆಯ ವಿದ್ಯಾ ರ್ಥಿಗಳ ಕೊರಳಿಗೇರಿದವು. 4x100 ಮೀಟರ್ಸ್‌ ರಿಲೇಯಲ್ಲಿ ಬೆಳ್ಳಿ ಗೆದ್ದ ತಂಡದ ಇಬ್ಬರು ಆಳ್ವಾಸ್‌ನ ವಿದ್ಯಾರ್ಥಿಗ ಳಾಗಿದ್ದು ಉಳಿದ ಇಬ್ಬರು ಉಡುಪಿಯ ಎಂಜಿಎ ಹಾಗೂ ಗೋಣಿಕೊಪ್ಪದ ಕಾವೇರಿ ಕಾಲೇಜಿನವರು.

ಮಂಗಳೂರು ವಿವಿಯ ಪುರುಷರು ನಾಲ್ಕು ಚಿನ್ನ, ಮೂರು ಬೆಳ್ಳಿ ಮತ್ತು ನಾಲ್ಕು ಕಂಚಿನ ಪದಕ ಗಳಿಸಿದ್ದಾರೆ. ಮಹಿಳೆಯರು ತಲಾ ಮೂರು ಚಿನ್ನ ಮತ್ತು ಬೆಳ್ಳಿ, ಒಂದು ಕಂಚಿನ ಪದಕ ಗೆದ್ದಿದ್ದಾರೆ. ಆಳ್ವಾಸ್ ಕಾಲೇಜಿನ ವರ್ಷಾ, ಮಹಿಳೆಯರ ಹ್ಯಾಮರ್‌ ಥ್ರೋದಲ್ಲಿ 51.80 ಮೀಟರ್ಸ್‌ ಸಾಧನೆಯೊಂದಿಗೆ ಭಾನುವಾರ ಚಿನ್ನದ ಪದಕ ಗಳಿಸಿದರೆ ಹೈಜಂಪ್‌ನಲ್ಲಿ 1.74 ಮೀಟರ್ಸ್ ಎತ್ತರದ ಸಾಧನೆ ಮಾಡಿದ ಎಸ್.ಬಿ ಸುಪ್ರಿಯಾ ಚಿನ್ನಕ್ಕೆ ಕೊರಳೊಡ್ಡಿದರು.

ADVERTISEMENT

ಟ್ರಿಪಲ್‌ ಜಂಪ್‌ನಲ್ಲಿ 12.78 ಮೀಟರ್ಸ್‌ ಸಾಧನೆ ಮಾಡಿದ ಐಶ್ವರ್ಯಾ ಬಿ ಚಿನ್ನ, 12.10 ಮೀಟರ್ಸ್ ಸಾಧನೆ ಮಾಡಿದ ಅನುಷಾ ಜಿ ಕಂಚಿನ ಪದಕ ಗೆದ್ದರು.

ಪುರುಷರ ವಿಭಾಗ 200 ಮೀಟರ್ಸ್‌ ಓಟದಲ್ಲಿ ವಿಘ್ನೇಶ್ ಎ (21.75 ಸೆಕೆಂಡು) ಕಂಚಿನ ಪದಕ ಗೆದ್ದುಕೊಂಡರು. ಕೇರಳದ ಮಹಾತ್ಮ ಗಾಂಧಿ ವಿಶ್ವವಿದ್ಯಾಲಯ (11 ಪದಕ) ದ್ವಿತೀಯ, ಪಟಿಯಾಲದ ಪಂಜಾಬ್ ವಿವಿ (6) ತೃತೀಯ ಸ್ಥಾನ ಗಳಿಸಿತು.

ಪಂಜಾಬ್‌ ವಿವಿ ಚಾಂಪಿಯನ್: 17 ಚಿನ್ನದೊಂದಿಗೆ ಒಟ್ಟು 46 ಪದಕ ಗೆದ್ದ ಪಂಜಾಬ್ ವಿವಿ ಸಮಗ್ರ ಪ್ರಶಸ್ತಿ ಗಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.