ADVERTISEMENT

ಕೊಕ್ಕೊ ಲೀಗ್‌ ನಡೆಸಲು ನಿರ್ಧಾರ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2019, 19:16 IST
Last Updated 2 ಏಪ್ರಿಲ್ 2019, 19:16 IST

ನವದೆಹಲಿ (ಪಿಟಿಐ): ಗ್ರಾಮೀಣ ಕ್ರೀಡೆ ಕೊಕ್ಕೊಗೆ ಹೊಸ ಮೆರುಗು ನೀಡಲು ಮುಂದಾಗಿರುವ ಭಾರತ ಕೊಕ್ಕೊ ಫೆಡರೇಷನ್ (ಕೆಕೆಎಫ್‌ಐ), ಐಪಿಎಲ್‌ ಮಾದರಿಯಲ್ಲಿ ಅಲ್ಟಿಮೇಟ್‌ ಕೊಕ್ಕೊ ಲೀಗ್‌ ನಡೆಸಲು ತೀರ್ಮಾನಿಸಿದೆ.

ಈ ವಿಷಯವನ್ನು ಕೆಕೆಎಫ್‌ಐ ಮಂಗಳವಾರ ತಿಳಿಸಿದೆ. ಈ ಕಾರ್ಯಕ್ಕೆ ಡಾಬರ್‌ ಇಂಡಿಯಾ ಲಿಮಿಟೆಡ್‌ ಕೂಡಾ ಕೈ ಜೋಡಿಸಿದ್ದು, ತೆಂಜಿಂಗ್‌ ನಿಯೋಗಿ ಅವರನ್ನು ಲೀಗ್‌ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯನ್ನಾಗಿ (ಸಿಇಒ) ನೇಮಿಸಲಾಗಿದೆ.

ಭಾರತ ಒಲಿಂಪಿಕ್‌ ಸಂಸ್ಥೆಯ (ಐಒಎ) ಮಹಾ ಕಾರ್ಯದರ್ಶಿ ರಾಜೀವ್‌ ಮೆಹ್ತಾ ಅವರು ಲೀಗ್‌ನ ಮುಖ್ಯಸ್ಥರಾಗಿದ್ದಾರೆ.

ADVERTISEMENT

21 ದಿನಗಳ ಕಾಲ ಡಬಲ್‌ ರೌಂಡ್‌ ರಾಬಿನ್‌ ಮಾದರಿಯಲ್ಲಿ ನಡೆಯುವ ಲೀಗ್‌ನಲ್ಲಿ ಒಟ್ಟು ಎಂಟು ತಂಡಗಳು 60 ಪಂದ್ಯಗಳನ್ನು ಆಡಲಿವೆ.

ಭಾರತ ಸೇರಿದಂತೆ ಇಂಗ್ಲೆಂಡ್‌, ದಕ್ಷಿಣ ಕೊರಿಯಾ, ಇರಾನ್‌, ಬಾಂಗ್ಲಾದೇಶ, ನೇಪಾಳ ಮತ್ತು ಶ್ರೀಲಂಕಾದ ಆಟಗಾರರು ಲೀಗ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ಯುವ ಆಟಗಾರರಿಗೆ ಸೂಕ್ತ ವೇದಿಕೆ ಕಲ್ಪಿಸಲು ಮುಂದಾಗಿರುವ ಕೆಕೆಎಫ್‌ಐ, ಹರಾಜಿನಲ್ಲಿ ಪ್ರತಿ ತಂಡವೂ 19 ವರ್ಷದೊಳಗಿನ ಒಬ್ಬ ಆಟಗಾರನನ್ನು ಖರೀದಿಸಲೇಬೇಕು ಎಂಬ ನಿಯಮ ಜಾರಿಗೊಳಿಸಲು ನಿರ್ಧರಿಸಿದೆ. ತಂಡವೊಂದರಲ್ಲಿ ಒಟ್ಟು 12 ಮಂದಿ ಇರಲಿದ್ದಾರೆ. ಇದರಲ್ಲಿ ಇಬ್ಬರು ವಿದೇಶಿ ಆಟಗಾರರು ಸೇರಿರುತ್ತಾರೆ.

‘ಕೊಕ್ಕೊ ಲೀಗ್‌ ಅನ್ನು ಯಶಸ್ವಿಗೊಳಿಸಲು ಪಣ ತೊಟ್ಟಿದ್ದೇವೆ. ಫ್ರಾಂಚೈಸ್‌ ಶುಲ್ಕದ ರೂಪದಲ್ಲಿ ನಾವು ಕೆಕೆಎಫ್‌ಐಗೆ ₹ 10 ಕೋಟಿ ನೀಡಲು ನಿರ್ಧರಿಸಿದ್ದೇವೆ’ ಎಂದು ಡಾಬರ್ ಇಂಡಿಯಾ ಲಿಮಿಟೆಡ್‌ನ ಉಪಾಧ್ಯಕ್ಷ ಅಮಿತ್‌ ಬರ್ಮನ್‌ ತಿಳಿಸಿದ್ದಾರೆ.

ಕೊಕ್ಕೊ ಲೀಗ್‌ ಈ ವರ್ಷದ ಸೆಪ್ಟೆಂಬರ್‌ ಅಥವಾ ಅಕ್ಟೋಬರ್‌ನಲ್ಲಿ ನಡೆಯುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.