ಸುವೊನ್: ಭಾರತದ ಎಚ್.ಎಸ್.ಪ್ರಣಯ್ ಅವರು ಬಲ ಪಕ್ಕೆಲುಬಿನ ನೋವಿನಿಂದಾಗಿ ಕೊರಿಯಾ ಮಾಸ್ಟರ್ಸ್ 500 ಟೂರ್ನಿಯ ಟೂರ್ನಿಯ ಮೊದಲ ಸುತ್ತಿನ ಪಂದ್ಯವನ್ನು ಅರ್ಧದಲ್ಲೇ ತ್ಯಜಿಸಿದರು. ಆಯುಷ್ ಶೆಟ್ಟಿ ಮತ್ತು ಇತರ ಆಟಗಾರರೂ ಬುಧವಾರ ಹೊರಬೀಳುವುದರೊಂದಿಗೆ ಭಾರತದ ಸವಾಲು ಈ ಟೂರ್ನಿಯ ಬೇಗ ಅಂತ್ಯಗೊಂಡಿತು.
33 ವರ್ಷ ವಯಸ್ಸಿನ ಪ್ರಣಯ್, ಇಂಡೊನೇಷ್ಯಾದ ಚಿಕೊ ಆರಾ ದ್ವಿ ವಾರ್ದೊಯೊ ಎದುರು 5–8 ಹಿನ್ನಡೆಯ ವೇಳೆ ಕ್ರಾಸ್ ಕೋರ್ಟ್ ಸ್ಮ್ಯಾಶ್ ಆಡಿದಾಗ ಅವರಿಗೆ ನೋವು ಕಾಣಿಸಿಕೊಂಡಿತು. ಚಿಕಿತ್ಸೆ ಪಡೆದು ಆಟಕ್ಕೆ ಮರಳಿದರೂ ಅವರು ಸರಾಗವಾಗಿ ಆಡಲಾಗದೇ 8–16ರಲ್ಲಿದ್ದಾಗ ಪಂದ್ಯ ಬಿಟ್ಟುಕೊಟ್ಟರು.
ಈ ವರ್ಷ ಅಮೆರಿಕ ಓಪನ್ ಸೂಪರ್ 300 ಟೂರ್ನಿ ಗೆದ್ದಿದ್ದ ಆಯುಷ್ ಶೆಟ್ಟಿ 18–21, 18–21 ರಲ್ಲಿ ತೈವಾನ್‌ನ ಸು ಲಿ ಯಾಂಗ್ ಅವರಿಗೆ 47 ನಿಮಿಷಗಳಲ್ಲಿ ಮಣಿದರು.
ಕಿರಣ್ ಜಾರ್ಜ್ ಸ್ಫೂರ್ತಿಯುತವಾಗಿ ಆಡಿದರೂ ಅಂತಿಮವಾಗಿ 14–21, 22–20, 14–21 ರಿಂದ ಮಾಜಿ ವಿಶ್ವ ಚಾಂಪಿಯನ್ ಲೊ ಕೀನ್ ಯೂ (ಸಿಂಗಪುರ) ಅವರಿಗೆ ಮಣಿದರು.
ಮಹಿಳೆಯರ ಸಿಂಗಲ್ಸ್‌ನಲ್ಲಿ ಅನುಪಮಾ ಉಪಾಧ್ಯಾಯ 16–21, 15–21 ರಿಂದ ವಿಶ್ವ ಕ್ರಮಾಂಕದಲ್ಲಿ ಎಂಟನೇ ಸ್ಥಾನದಲ್ಲಿರುವ ಪುತ್ರಿ ವಾರ್ದನಿ ಅವರಿಗೆ ಸೋತರು.
ಮಿಶ್ರ ಡಬಲ್ಸ್‌ನಲ್ಲಿ ಮೋಹಿತ್ ಜಗ್ಲಾನ್– ಲಕ್ಷಿತಾ ಜಗ್ಲಾನ್ 7–21, 14–21ರಲ್ಲಿ ಜಪಾನ್‌ನ ಯುಯಿಚಿ ಶಿಮೊಗಾಮಿ– ಸಯಾಕಾ ಹೊಬಾರ ಎದುರು ಹಿಮ್ಮೆಟ್ಟಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.