ADVERTISEMENT

ಖೇಲೊ ಇಂಡಿಯಾ ಕಬಡ್ಡಿ: ಪ್ರಶಸ್ತಿಗೆ ಮುತ್ತಿಕ್ಕಿದ ಕೋಟಾ, ಕುರುಕ್ಷೇತ್ರ ವಿವಿ

ಖೇಲೊ ಇಂಡಿಯಾ ಕಬಡ್ಡಿ: ಮಹರ್ಷಿ ದಯಾನಂದ್‌, ಚೌಧರಿ ಬನ್ಸಿಲಾಲ್ ವಿವಿ ತಂಡಗಳು ರನ್ನರ್ ಅಪ್‌

​ಪ್ರಜಾವಾಣಿ ವಾರ್ತೆ
Published 3 ಮೇ 2022, 19:31 IST
Last Updated 3 ಮೇ 2022, 19:31 IST
ಮಹಿಳೆಯರ ವಿಭಾಗದ ಪ್ರಶಸ್ತಿ ಗೆದ್ದ ಕುರುಕ್ಷೇತ್ರ ವಿವಿ ತಂಡದ ಆಟಗಾರ್ತಿಯರು ಕೋಚ್ ಜೊತೆ ಸಂಭ್ರಮಿಸಿದರು –ಪ್ರಜಾವಾಣಿ ಚಿತ್ರ/ಬಿ.ಎಚ್‌.ಶಿವಕುಮಾರ್
ಮಹಿಳೆಯರ ವಿಭಾಗದ ಪ್ರಶಸ್ತಿ ಗೆದ್ದ ಕುರುಕ್ಷೇತ್ರ ವಿವಿ ತಂಡದ ಆಟಗಾರ್ತಿಯರು ಕೋಚ್ ಜೊತೆ ಸಂಭ್ರಮಿಸಿದರು –ಪ್ರಜಾವಾಣಿ ಚಿತ್ರ/ಬಿ.ಎಚ್‌.ಶಿವಕುಮಾರ್   

ಬೆಂಗಳೂರು: ಗುಂಪು ಹಂತದ ಪಂದ್ಯಗಳಲ್ಲಿ ರೇಡಿಂಗ್ ಮೂಲಕ ಎದುರಾಳಿಗಳಲ್ಲಿ ನಡುಕ ಹುಟ್ಟಿಸಿದ ಜೈ ಭಗವಾನ್ ಅವರು ಫೈನಲ್‌ನಲ್ಲೂ ಭರ್ಜರಿ ಆಟವಾಡಿದರು. ಅವರ ಅಮೋಘ ಸಾಮರ್ಥ್ಯದ ಬಲದಿಂದ ರಾಜಸ್ಥಾನದ ಕೋಟಾ ವಿಶ್ವವಿದ್ಯಾಲಯ ತಂಡ ಖೇಲೊ ಇಂಡಿಯಾ ವಾರ್ಸಿಟಿ ಕ್ರೀಡಾಕೂಟದ ಕಬಡ್ಡಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿತು.

ಕಂಠೀರವ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ, ಕೂಟದ ಕೊನೆಯ ಸ್ಪರ್ಧೆಯಲ್ಲಿ ಕೋಟಾ ವಿವಿ 52–37ರಲ್ಲಿ ಹರಿಯಾಣದ ಚೌಧರಿ ಬನ್ಸಿಲಾಲ್ ವಿವಿಯನ್ನು ಸೋಲಿಸಿತು. ಹರಿಯಾಣದ ವಿವಿಗಳ ನಡುವಿನ ಮಹಿಳೆಯರ ಫೈನಲ್‌ನಲ್ಲಿ ಕುರುಕ್ಷೇತ್ರ ವಿವಿ 46–19ರಲ್ಲಿ ಮಹರ್ಷಿ ದಯಾನಂದ್ ವಿವಿಯನ್ನು ಸೋಲಿಸಿತು.

ಪುರುಷರ ಪ್ರಶಸ್ತಿ ಸುತ್ತಿನ ಪಂದ್ಯದ ಆರಂಭದಲ್ಲಿ ಉಭಯ ತಂಡಗಳು ಸಮಬಲದ ಹೋರಾಟ ಪ್ರದರ್ಶಿಸಿದವು. ನಂತರ ಕೋಟಾ ವಿವಿ ಆಧಿಪತ್ಯ ಸ್ಥಾಪಿಸಿತು. ಲೀಗ್ ಹಂತದಲ್ಲಿ ಅಜೇಯ ಆಟವಾಡಿದ ಬಂದಿದ್ದ ಕೋಟಾ ವಿರುದ್ಧ ಎದುರಾಳಿ ತಂಡ ಮೊದಲ 2 ನಿಮಿಷಗಳಲ್ಲಿ 3-0 ಮುನ್ನಡೆ ಗಳಿಸಿತು. ಕೋಟಾ ತಂಡಕ್ಕಾಗಿ ಆಕಾಶ್ ರೇಡಿಂಗ್‌ನಲ್ಲಿ ಮೊದಲ ಪಾಯಿಂಟ್ ತಂದುಕೊಟ್ಟರು.

ADVERTISEMENT

ಐದನೇ ನಿಮಿಷದಲ್ಲಿ 3–3ರ ಸಮಬಲ ಸಾಧಿಸಿದ ತಂಡ ನಂತರ ಹಿಡಿತ ಬಿಗಿಗೊಳಿಸುತ್ತ ಸಾಗಿತು. 10ನೇ ನಿಮಿಷದಲ್ಲಿ ಸೂಪರ್ ಟ್ಯಾಕಲ್ ಮೂಲಕ 10–9ರ ಮುನ್ನಡೆ ಗಳಿಸಿತು. ಈ ಹಂತದಿಂದ ಜೈ ಭಗವಾನ್ ಅವರ ರೇಡಿಂಗ್ ಕಳೆಗಟ್ಟಿತು. ಅವರು ಸತತ ಪಾಯಿಂಟ್‌ ಗಳಿಸುತ್ತ ಸಾಗಿದರು. ಆದರೂ ಬನ್ಸಿಲಾಲ್ ವಿವಿ ಪಟ್ಟು ಬಿಡಲಿಲ್ಲ. ಮೊದಲಾರ್ಧದ ಮುಕ್ತಾಯದ ಕೊನೆಯ ಹಂತದಲ್ಲಿ 16–16, 18–18ರಲ್ಲಿ ಪಂದ್ಯ ಸಾಗಿದಾಗ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುತೂಹಲ ಹೆಚ್ಚಾಯಿತು. ಮೊದಲಾರ್ಧದ ಕೊನೆಯಲ್ಲಿ ಲೋನಾ ಪಾಯಿಂಟ್ ಗಳಿಸಿದ ಕೊಟಾ 24–22 ಮುನ್ನಡೆ ಗಳಿಸಿತು.

ಆಕ್ರಮಣಕಾರಿ ಆಟ

ದ್ವಿತೀಯಾರ್ಧದಲ್ಲಿ ಕೋಟಾ ವಿವಿ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಭಗವಾನ್ ಅವರ ರೇಡಿಂಗ್ ಮತ್ತು ಎಡಕಾರ್ನರ್‌ನಲ್ಲಿದ್ದ ಯೋಗೇಶ್ ಅವರ ರೋಚಕ ಟ್ಯಾಕ್ಲಿಂಗ್ ತಂಡಕ್ಕೆ ಪಾಯಿಂಟ್‌ಗಳನ್ನು ಕಲೆಹಾಕಲು ನೆರವಾಯಿತು. ಪಂದ್ಯ ಮುಕ್ತಾಯಕ್ಕೆ 13 ನಿಮಿಷ ಇದ್ದಾಗ ತಂಡ 31–25ರ ಮುನ್ನಡೆ ಗಳಿಸಿತು. ‘ಸೂಪರ್‌ ಟ್ಯಾಕಲ್‌’ನಿಂದ ರೋಚಕವಾಗಿ ತಪ್ಪಿಸಿಕೊಂಡ ಜೈ ಭಗವಾನ್ ಅವರ ಸಾಧನೆಯ ಮೂಲಕ ಎದುರಾಳಿಗಳನ್ನು ಮತ್ತೊಮ್ಮೆ ಆಲ್‌ ಔಟ್ ಮಾಡಿತು. ನಂತರ ತಂಡದ ಮುನ್ನಡೆ ಹೆಚ್ಚುತ್ತ ಸಾಗಿತು. ಒಂದು ನಿಮಿಷ ಬಾಕಿ ಇದ್ದಾಗ ಬನ್ಸಿಲಾಲ್ ವಿವಿ ಮೂರನೇ ಬಾರಿ ಆಲ್‌ ಔಟ್ ಆಯಿತು.

ಹರಿಯಾಣ ಡರ್ಬಿಯಲ್ಲಿ ಕುರುಕ್ಷೇತ್ರ ಮೇಲುಗೈ

ಮಹಿಳೆಯರ ಫೈನಲ್ ಪಂದ್ಯ ಹರಿಯಾಣ ಡರ್ಬಿಯಾಗಿತ್ತು. ಗುಂಪು ಹಂತದಲ್ಲಿ ಕುರುಕ್ಷೇತ್ರ ವಿವಿ ವಿರುದ್ಧ ಸೋತಿದ್ದ ಮಹರ್ಷಿ ವಿವಿ ತಿರುಗೇಟು ನೀಡುವ ನಿರೀಕ್ಷೆಯೊಂದಿಗೆ ಕಣಕ್ಕೆ ಇಳಿದಿತ್ತು. ಆದರೆ ಪ್ರಾಚಿ ಮತ್ತು ಪೂಜಾ ಅವರ ಭರ್ಜರಿ ಆಟ ಕುರುಕ್ಷೇತ್ರ ವಿವಿ ಪ್ರಾಬಲ್ಯ ಮೆರೆಯಲು ನೆರವಾಯಿತು.

ಕೋಟಾ ವಿವಿ ಎದುರು ಸೆಮಿಫೈನಲ್‌ನಲ್ಲಿ ಸೋತ ಸಿ.ವಿ.ರಾಮನ್ ವಿವಿ ಪುರುಷರ ವಿಭಾಗದಲ್ಲಿ ಮತ್ತು ಕುರುಕ್ಷೇತ್ರ ವಿವಿ ವಿರುದ್ಧ ನಾಲ್ಕರ ಘಟ್ಟದಲ್ಲಿ ಸೋತಿದ್ದ ಸಾವಿತ್ರಿಬಾಯಿ ಫುಲೆ ವಿವಿ ತಂಡಗಳು ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದ ಕಂಚಿನ ಪದಕ ಗಳಿಸಿದವು.

ಕಬಡ್ಡಿ ಸ್ಟಾರ್‌ಗಳ ಪ್ರೋತ್ಸಾಹ

ಮಹಿಳೆಯರ ಮತ್ತು ಪುರುಷರ ಫೈನಲ್ ಪಂದ್ಯಗಳನ್ನು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಮತ್ತು ರಾಜ್ಯದ ಯುವಸಬಲೀಕರಣ ಹಾಗೂ ಕ್ರೀಡಾ ಸಚಿವ ನಾರಾಯಣಗೌಡ ಅವರೊಂದಿಗೆ ಪ್ರೊ ಕಬಡ್ಡಿ ಸ್ಟಾರ್‌ಗಳಾದ ಪವನ್ ಶೆರಾವತ್‌, ನವೀನ್ ಕುಮಾರ್ (ಎಕ್ಸ್‌ಪ್ರೆಸ್‌) ಮತ್ತು ಅಜಯ್ ಠಾಕೂರ್‌ ವೀಕ್ಷಿಸಿದರು. ಮಹಿಳೆಯರ ಫೈನಲ್ ನಂತರ ಅವರು ಅಂಗಣದ ನಡುವಿಗೆ ಬರುತ್ತಿದ್ದಂತೆ ಪ್ರೇಕ್ಷಕರು ಖುಷಿಯಿಂದ ಸಂಭ್ರಮಿಸಿದರು.

ಫುಟ್‌ಬಾಲ್‌: ಎಂ.ಜಿ ವಿವಿಗೆ ಪ್ರಶಸ್ತಿ

ಜೈನ್ ವಿವಿ ಆವರಣದಲ್ಲಿ ನಡೆದ ‍‍ಪುರುಷರ ಫುಟ್‌ಬಾಲ್ ಫೈನಲ್‌ನಲ್ಲಿ ಕೋಟಯಂನ ಮಹಾತ್ಮ ಗಾಂಧಿ ವಿವಿ ಕೇರಳ ವಿವಿಯನ್ನು 2–0 ಗೋಲುಗಳಿಂದ ಮಣಿಸಿತು. ಹರಿಶಂಕರ್‌ (2ನೇ ನಿಮಿಷ) ಮತ್ತು ಅರ್ಜುನ್‌ (89ನೇ ನಿ) ಗೋಲು ಗಳಿಸಿದರು. ಕ್ಯಾಲಿಕಟ್‌ ವಿವಿ ಹಾಗೂ ಪಂಜಾಬ್‌ ವಿವಿ ಕಂಚಿನ ಪದಕ ಗಳಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.