ADVERTISEMENT

ಜಪಾನ್ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿ: ಸೆಮಿಫೈನಲ್‌ನತ್ತ ಲಕ್ಷ್ಯ ಸೇನ್

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2025, 13:26 IST
Last Updated 14 ನವೆಂಬರ್ 2025, 13:26 IST
ಲಕ್ಷ್ಯ ಸೇನ್
ಲಕ್ಷ್ಯ ಸೇನ್   

ಕುಮಾಮೊಟೊ, ಜಪಾನ್: ಭಾರತದ ಅಗ್ರಕ್ರಮಾಂಕದ ಆಟಗಾರ ಲಕ್ಷ್ಯ ಸೇನ್ ಅವರು ಜಪಾನ್ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿದರು. 

ಶುಕ್ರವಾರ ನಡೆದ ಕ್ವಾರ್ಟರ್‌ಫೈನಲ್‌ನಲ್ಲಿ ಲಕ್ಷ್ಯ ಅವರು 21–13, 21–17ರಿಂದ ಮಾಜಿ ವಿಶ್ವ ಚಾಂಪಿಯನ್, ಸಿಂಗಪುರದ ಲೊಹ್ ಕೀನ್ ಯೆವ್  ಅವರಿಗೆ ಆಘಾತ ನೀಡಿದರು. 

ಲಕ್ಷ್ಯ ಅವರು ಯೆವ್ ವಿರುದ್ಧ ಇದುವರೆಗೆ 10 ಸಲ ಎದುರಿಸಿದ್ದಾರೆ. ಅದರಲ್ಲಿ ಒಟ್ಟು ಏಳು ಬಾರಿ ಜಯಿಸಿದ್ದಾರೆ. 

ADVERTISEMENT

ಲಯ ಕಳೆದುಕೊಂಡಿದ್ದ ಲಕ್ಷ್ಯ ಅವರು ಈಚೆಗೆ ಹಾಂಗ್‌ಕಾಂಗ್ ಓಪನ್‌ ಟೂರ್ನಿಯಲ್ಲಿ ರನ್ನರ್ಸ್ ಅಪ್ ಆಗಿದ್ದರು. ಡೆನ್ಮಾರ್ಕ್ ಮತ್ತು ಹೈಲೊ ಓಪನ್ ಟೂರ್ನಿಗಳಲ್ಲಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದರು. ಇದರಿಂದಾಗಿ ಅವರ ಆತ್ಮವಿಶ್ವಾಸ ಹೆಚ್ಚಿತ್ತು.  ಅದರ ಫಲ ಇಲ್ಲಿ ದೊರೆಯುತ್ತಿದೆ. 

ನಾಲ್ಕರ ಘಟ್ಟದಲ್ಲಿ ಲಕ್ಷ್ಯ ಅವರು ವಿಶ್ವ ಕ್ರಮಾಂಕದಲ್ಲಿ 13ನೇ ಸ್ಥಾನದಲ್ಲಿರುವ ಜಪಾನಿನ ಕೆಂಟಾ ನಿಶಿಮೊಟೊ ವಿರುದ್ಧ ಆಡಲಿದ್ದಾರೆ. 

ಎಂಟರ ಘಟ್ಟದ ಪಂದ್ಯದಲ್ಲಿ ಲಕ್ಷ್ಯ ಅಮೋಘವಾಡಿದರು. ಮೊದಲ ಗೇಮ್‌ ಆರಂಭವು ತೀವ್ರ ಪೈಪೋಟಿಯಿಂದ ಕೂಡಿತ್ತು. ಇಬ್ಬರೂ 4–4ರ ಸಮಬಲ ಸಾಧಿಸಿದ್ದರು. ಅರ್ಧವಿರಾಮದ ವೇಳೆಗೆ ಲಕ್ಷ್ಯ 11–8ರ ಮುನ್ನಡೆ ಗಳಿಸುವಲ್ಲಿ ಯಶಸ್ವಿಯಾದರು. ವಿರಾಮದ ನಂತರದ ಆಟದಲ್ಲಿ ಸತತ ಆರು ಅಂಕ ಗಳಿಸಿದರು. ಮುನ್ನಡೆ ಕಾಯ್ದುಕೊಂಡು ಗೇಮ್ ಜಯಿಸಿದರು. 

ಎರಡನೇ ಗೇಮ್‌ನಲ್ಲಿ ಲೊಹ್ ಅವರು ತುಸು ಪ್ರತಿರೋಧ ತೋರಿದರು. 9–9ರ ಸಮಬಲವಿತ್ತು. ಈ ಹಂತದಲ್ಲಿ ಲಕ್ಷ್ಯ ತಮ್ಮತ್ತ ಗೇಮ್ ಸೆಳೆದುಕೊಳ್ಳುವಲ್ಲಿ ಸಫಲರಾದರು. ಚುರುಕಾದ ಸ್ಮ್ಯಾಷ್ ಮತ್ತು ನಿಖರ ಡ್ರಾಪ್‌ಗಳ ಮೂಲಕ ಪಾಯಿಂಟ್‌ ಗಳಿಸಿದರು. 15–9ರ ಮುನ್ನಡೆ ಸಾಧಿಸಿದರು. ಆದರೆ ಸಿಂಗಪುರದ ಆಟಗಾರ ಕೂಡ ತಿರುಗೇಟು ನೀಡಿದರು. 17–18ರ ಅಂತರ ಸಾಧಿಸಿದರು. ಆದರೆ ಇಲ್ಲಿಂದ ಮುಂದೆ ಹೋಗಲು ಅವರಿಗೆ ಲಕ್ಷ್ಯ ಬಿಡಲಿಲ್ಲ. ಮೇಲುಗೈ ಸಾಧಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.