ADVERTISEMENT

ಪ್ರೊ ಹಾಕಿ: ಪುರುಷರ ತಂಡಕ್ಕೆ ಸತತ ಐದನೇ ಸೋಲು

ಆಸ್ಟ್ರೇಲಿಯಾ ವಿರುದ್ಧ ಕೊನೆ ಕ್ಷಣದಲ್ಲಿ ಮುಗ್ಗರಿಸಿದ ಭಾರತ

ಪಿಟಿಐ
Published 14 ಜೂನ್ 2025, 16:09 IST
Last Updated 14 ಜೂನ್ 2025, 16:09 IST
ಎರಡು ಗೋಲು ಗಳಿಸಿದ ಭಾರತದ ಆಟಗಾರ ಅಭಿಷೇಕ್‌ 
ಎರಡು ಗೋಲು ಗಳಿಸಿದ ಭಾರತದ ಆಟಗಾರ ಅಭಿಷೇಕ್‌    

ಆ್ಯಂಟ್‌ವರ್ಪ್: ಕೊನೆಯ ಕ್ಷಣದಲ್ಲಿ ಮತ್ತೆ ಎಡವಿದ ಭಾರತ ಪುರುಷರ ತಂಡವು ಎಫ್‌ಐಎಚ್ ಪ್ರೊ ಲೀಗ್ ಹಾಕಿ ಟೂರ್ನಿಯಲ್ಲಿ ಸತತ ಐದನೇ ಸೋಲು ಅನುಭವಿಸಿದೆ.

ಶನಿವಾರ ನಡೆದ ಯುರೋಪಿಯನ್‌ ಲೆಗ್‌ನ ಪಂದ್ಯದಲ್ಲಿ ಭಾರತ 2–3 ಗೋಲುಗಳಿಂದ ಆಸ್ಟ್ರೇಲಿಯಾ ವಿರುದ್ಧ ಮುಗ್ಗರಿಸಿದೆ.  ಈಗಾಗಲೇ ಲೆಗ್‌ನಲ್ಲಿ ನೆದರ್ಲೆಂಡ್ಸ್‌ ಮತ್ತು ಅರ್ಜೆಂಟೀನಾ ವಿರುದ್ಧ ಭಾರತ ತಲಾ ಎರಡು ಪಂದ್ಯಗಳಲ್ಲಿ ಪರಾಭವಗೊಂಡಿದೆ. 

ಅನುಭವಿ ಫಾರ್ವರ್ಡ್‌ ಆಟಗಾರ ಅಭಿಷೇಕ್‌ (8ನೇ ಮತ್ತು 35ನೇ ನಿಮಿಷ) ಗಳಿಸಿದ ಎರಡು ಗೋಲುಗಳ ನೆರವಿನಿಂದ ಭಾರತ ಒಂದು ಹಂತದಲ್ಲಿ 2–0 ಮುನ್ನಡೆ ಪಡೆದಿತ್ತು. ಆದರೆ, ನಂತರದಲ್ಲಿ ಆಸ್ಟ್ರೇಲಿಯಾದ ಆಟಗಾರರು ಪಾರಮ್ಯ ಮೆರೆದರು. ನೇಥನ್ ಎಫ್ರಾಮ್ಸ್ (42ನೇ), ಜೋಯಲ್ ರಿಂತಲಾ (56ನೇ) ಟಾಮ್ ಕ್ರೇಗ್ (60ನೇ) ಗೋಲು ಗಳಿಸಿದರು. ಇದರಲ್ಲಿ ಕೊನೆಯ ಎರಡು ಗೋಲುಗಳು ಪೆನಾಲ್ಟಿ ಕಾರ್ನರ್‌ನಿಂದ ಲಭಿಸಿತು. 

ADVERTISEMENT

ಅರ್ಜೆಂಟೀನಾ ವಿರುದ್ಧದ ಕಳೆದ ಪಂದ್ಯದಲ್ಲಿ ಗಾಯಗೊಂಡಿರುವ ಭಾರತ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಈ ಪಂದ್ಯಕ್ಕೆ ವಿಶ್ರಾಂತಿ ಪಡೆದಿದ್ದರು. ಹಾರ್ದಿಕ್‌ ಸಿಂಗ್ ತಂಡವನ್ನು ಮುನ್ನಡೆಸಿದರು.

ಸತತ ನಾಲ್ಕು ಪಂದ್ಯಗಳಲ್ಲಿ ಸೋತಿದ್ದ ಭಾರತದ ಆಟಗಾರರು ಮೊದಲ ಎರಡು ಕ್ವಾರ್ಟರ್‌ಗಳಲ್ಲಿ ಸುಧಾರಿತ ಆಟ ಪ್ರದರ್ಶಿಸಿ ಹಿಡಿತ ಸಾಧಿಸಿದ್ದರು. ಮೊದಲ ಕ್ವಾರ್ಟರ್‌ನಲ್ಲೇ ಅಭಿಷೇಕ್‌ ಫೀಲ್ಡ್‌ ಗೋಲು ಗಳಿಸಿ ಭಾರತಕ್ಕೆ ಮುನ್ನಡೆ ಒದಗಿಸಿದ್ದರು. 11ನೇ ನಿಮಿಷದಲ್ಲಿ ಆಸ್ಟ್ರೇಲಿಯಾ ತಂಡವು ಪೆನಾಲ್ಟಿ ಕಾರ್ನರ್‌ ಅವಕಾಶ ಪಡೆಯಿತು. ಆದರೆ, ಭಾರತದ ಗೋಲ್‌ಕೀಪರ್‌ ಸೂರಜ್ ಕರ್ಕೇರ, ಎದುರಾಳಿ ತಂಡದ ಗೋಲು ಅವಕಾಶ ಸಮರ್ಥವಾಗಿ ತಡೆದರು. 

22ನೇ ನಿಮಿಷದಲ್ಲಿ ಭಾರತಕ್ಕೆ ಪೆನಾಲ್ಟಿ ಕಾರ್ನರ್ ಅವಕಾಶ ಸಿಕ್ಕಿತು. ಆದರೆ, ಅದರ ಲಾಭ ಪಡೆಯುವಲ್ಲಿ ಜುಗ್ರಾಜ್ ಸಿಂಗ್ ಎಡವಿದರು. ಮೂರನೇ ಕ್ವಾರ್ಟರ್‌ನ ಐದನೇ ನಿಮಿಷದಲ್ಲಿ ಅಭಿಷೇಕ್‌, ಎದುರಾಳಿ ಗೋಲ್‌ಕೀಪರ್‌ನ ಹಿಂದೆ ರಿವರ್ಸ್ ಹಿಟ್ ಮೂಲಕ ಗೋಲು ಗಳಿಸಿ ಭಾರತದ ಮುನ್ನಡೆಯನ್ನು ದ್ವಿಗುಣಗೊಳಿಸಿದರು. 

37ನೇ ನಿಮಿಷದಲ್ಲಿ ಆಸ್ಟ್ರೇಲಿಯಾ ಪಡೆದ ಮತ್ತೊಂದು ಪೆನಾಲ್ಟಿ ಕಾರ್ನರ್‌ ಅವಕಾಶವನ್ನು ಕರ್ಕೇರ ಯಶಸ್ವಿಯಾಗಿ ತಡೆದರು. ಆದರೆ, ಅದಾದ ಐದು ನಿಮಿಷದಲ್ಲಿ ಆಸ್ಟ್ರೇಲಿಯಾದ ಎಫ್ರಾಮ್ಸ್ ಅವರು ರಿಬೌಂಡ್ ಮೂಲಕ ಗೋಲು ಗಳಿಸಿದರು. ಇದರ ಹೊರತಾಗಿಯೂ ಮೂರನೇ ಕ್ವಾರ್ಟರ್‌ನ ಅಂತ್ಯಕ್ಕೆ ಭಾರತ 2–1 ಮುನ್ನಡೆ ಪಡೆದಿತ್ತು. 

ಭಾರತವು 48ನೇ ನಿಮಿಷದಲ್ಲಿ ಸತತ ಎರಡು ಪೆನಾಲ್ಟಿ ಕಾರ್ನರ್‌ಗಳನ್ನು ಗಳಿಸಿದರೂ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಆದರೆ, ಕೊನೆಯ 10 ನಿಮಿಷದಲ್ಲಿ ಆಸ್ಟ್ರೇಲಿಯಾ ತಂಡವು ನಾಲ್ಕು ಪೆನಾಲ್ಟಿ ಕಾರ್ನರ್‌ ಅವಕಾಶ ಪಡೆದು, ಎರಡರಲ್ಲಿ ಯಶಸ್ವಿಯಾಯಿತು. ಪಂದ್ಯ ಮುಗಿಯಲು 42 ಸೆಕೆಂಡ್‌ ಇರುವಂತೆ ಕ್ರೇಗ್ ಗೆಲುವಿನ ಗೋಲು ದಾಖಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.