ADVERTISEMENT

ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌: ಅಕ್ಸೆಲ್‌ಸನ್‌ ಫೈನಲ್‌ಗೆ

ಏಜೆನ್ಸೀಸ್
Published 14 ಮಾರ್ಚ್ 2020, 19:49 IST
Last Updated 14 ಮಾರ್ಚ್ 2020, 19:49 IST
ಜಪಾನ್‌ನ ನೊಜೊಮಿ ಒಕುಹರಾ ಅವರನ್ನು ಮಣಿಸಿದ ಚೀನಾದ ಚೆನ್‌ ಯೂಫಿ ಅವರು ಷಟಲ್ ಹಿಂದಿರುಗಿಸಿದ ವಿಧಾನ –ಎಎಫ್‌ಪಿ ಚಿತ್ರ
ಜಪಾನ್‌ನ ನೊಜೊಮಿ ಒಕುಹರಾ ಅವರನ್ನು ಮಣಿಸಿದ ಚೀನಾದ ಚೆನ್‌ ಯೂಫಿ ಅವರು ಷಟಲ್ ಹಿಂದಿರುಗಿಸಿದ ವಿಧಾನ –ಎಎಫ್‌ಪಿ ಚಿತ್ರ   

ಲಂಡನ್‌: ಡೆನ್ಮಾರ್ಕ್‌ನ ವಿಕ್ಟರ್‌ ಅಕ್ಸೆಲ್‌ಸನ್‌ಅವರುಆಲ್‌ ಇಂಗ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನ ಫೈನಲ್‌ ತಲುಪಿದರು. ಶನಿವಾರ ನಡೆದ ಸೆಮಿಫೈನಲ್‌ ಹಣಾಹಣಿಯಲ್ಲಿ ಎರಡನೇ ಶ್ರೇಯಾಂಕದ ಆಕ್ಸೆಲ್‌ಸನ್‌ ಅವರು ಶ್ರೇಯಾಂಕ ರಹಿತ ಆಟಗಾರ ಮಲೇಷ್ಯಾದ ಲೀ ಜೀ ಜಿಯಾ ಅವರನ್ನು ಸೋಲಿಸಿದರು.

ಮೊದಲ ಸೆಟ್‌ ಕಳೆದುಕೊಂಡರೂ ಚೇತರಿಸಿಕೊಂಡ ಆಕ್ಸೆಲ್‌ಸನ್‌ 1 ಗಂಟೆ 13 ನಿಮಿಷಗಳ ಹೋರಾಟದಲ್ಲಿ 17–21, 21–13, 21–19ರಿಂದ ಗೆದ್ದರು.

ಅಗ್ರ ಶ್ರೇಯಾಂಕದ ಚೆನ್‌ ಯೂಫಿ ಮಹಿಳೆಯರ ಸಿಂಗಲ್ಸ್‌ ಫೈನಲ್‌ ಪ್ರವೇಶಿಸಿದರು. ಚೀನಾದ ಈ ಆಟಗಾರ್ತಿ ನೇರ ಸೆಟ್‌ಗಳಲ್ಲಿ ಇತ್ಯರ್ಥವಾದ ಸೆಮಿಫೈನಲ್‌ ಪಂಧ್ಯದಲ್ಲಿ ನಾಲ್ಕನೇ ಶ್ರೇಯಾಂಕದ ಜಪಾನ್‌ನ ಆಟಗಾರ್ತಿ ನೊಜೊಮಿ ಒಕುಹಾರ ಅವರನ್ನು 21–14, 23–21 ರಿಂದ ಸೋಲಿಸಿದರು. 22 ವರ್ಷದಯೂಫಿ ಗೆಲುವಿಗೆ 43 ನಿಮಿಷಗಳನ್ನು ತೆಗೆದುಕೊಂಡರು.

ADVERTISEMENT

ಲೀಗೆ ಅಚ್ಚರಿಯ ಜಯ: ಇದಕ್ಕೆ ಮೊದಲು ವಿಶ್ವದ 13ನೇ ರ‍್ಯಾಂಕಿನ ಆಟಗಾರ ಮಲೇಷ್ಯಾದ ಲೀ ಜೀ ಜಿಯಾ ಕ್ವಾರ್ಟರ್‌ ಫೈನಲ್‌ ಹಣಾಹಣಿಯಲ್ಲಿ ಮೂರನೇ ಶ್ರೇಯಾಂಕದ ಚೆನ್‌ ಲಾಂಗ್‌ (ಚೀನಾ) ಅವರನ್ನು ಮಣಿಸಿ ಅಚ್ಚರಿಯ ಫಲಿತಾಂಶ ನೀಡಿದ್ದರು.

ಎರಡು ಬಾರಿಯ ವಿಶ್ವ ಚಾಂಪಿಯನ್‌ ಚೆನ್‌ ಅವರಿಗೆ 21–12, 21–18ರಿಂದ ಆಘಾತ ನೀಡಿದ ಲೀ, ಬರ್ಮಿಂಗ್‌ಹ್ಯಾಮ್‌ನಲ್ಲಿ ಮೂರನೇ ಪ್ರಶಸ್ತಿ ಗೆಲ್ಲುವತ್ತ ದಾಪುಗಾಲಿಟ್ಟಿದ್ದ ಚೆನ್‌ ಆಸೆಗೆ ಅಡ್ಡಿಯಾದರು.

2013 ಹಾಗೂ 2015ರಲ್ಲಿ ಇಲ್ಲಿ ಚಾಂಪಿಯನ್‌ ಆಗಿದ್ದ ಚೆನ್‌,ಪ್ರೀಕ್ವಾರ್ಟರ್‌ ಹಣಾಹಣಿಯಲ್ಲಿ ಆರು ಬಾರಿಯ ಆಲ್‌ ಇಂಗ್ಲೆಂಡ್‌ ಓಪನ್‌ ಚಾಂಪಿಯನ್‌, ಮಲೇಷ್ಯಾದ ಲಿನ್‌ ಡಾನ್‌ ಅವರನ್ನು 21–17, 21–18ರಿಂದ ಮಣಿಸಿದ್ದರು.

ಆದರೆ ಶ್ರೇಯಾಂಕರಹಿತ ಆಟಗಾರ ಮಲೇಷ್ಯಾದ ಲೀ ಎದುರು ಚೆನ್‌ ಆಟ ನಡೆಯಲಿಲ್ಲ. 49 ನಿಮಿಷಗಳಲ್ಲಿ ಈ ಪಂದ್ಯ ಮುಗಿಯಿತು. ಲೀ ಇಲ್ಲಿ ಮೊದಲ ಬಾರಿ ಪ್ರಶಸ್ತಿ ಗೆಲ್ಲುವತ್ತ ಚಿತ್ತ ನೆಟ್ಟಿದ್ದಾರೆ.

ಹೋದ ವರ್ಷ ಅಕ್ಟೋಬರ್‌ನಲ್ಲಿ ನಡೆದ ಡೆನ್ಮಾರ್ಕ್‌ ಓಪನ್‌ನಲ್ಲಿ ಚೆನ್‌ ಅವರು ಲೀ ಅವರನ್ನು ಸೋಲಿಸಿದ್ದರು. ಹಾಗಾಗಿ ಇದೊಂದು ಪ್ರತೀಕಾರದ ಪಂದ್ಯವಾಗಿ ಮಾರ್ಪಟ್ಟಿತು.

ಇತರಕ್ವಾರ್ಟರ್‌ಫೈನಲ್‌ ಪಂದ್ಯ ಗಳಲ್ಲಿ ವಿಕ್ಟರ್‌ ಆಕ್ಸೆಲ್‌ಸನ್ ಅವರು 21–15, 21–7ರಿಂದ ಚೀನಾದ ಯು ಕಿ ಶಿ ಎದುರು ಗೆದ್ದರು.

ಅಗ್ರಶ್ರೇಯಾಂಕದ ಆಟಗಾರ ಟಿಯೆನ್‌ ಚೆನ್‌ ಚು 21–11, 21–12ರಿಂದ ಜು ವೆ ವಾಂಗ್‌ ಎದುರು, ಆ್ಯಂಡರ್ಸ್ ಆ್ಯಂಟೋನಿಯೊ ಅವರು 21–10, 21–13ರಿಂದ ರಾಸ್ಮಸ್‌ ಗೆಮ್ಕೆ ಮೇಲೆ ಜಯ ಸಾಧಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.