ADVERTISEMENT

ಕೆಐಒಸಿಎಲ್‌– ಚೆಸ್ ಟೂರ್ನಿ | ಮೊದಲ ದಿನ ಮುನ್ನಡೆಯಲ್ಲಿ ಶರಣ್‌, ಧನುಷ್

ಕೆಐಒಸಿಎಲ್ ಫಿಡೆ ರೇಟಿಂಗ್ ಮುಕ್ತ ರ‍್ಯಾಪಿಡ್ ಚೆಸ್ ಟೂರ್ನಿ: ಕರ್ನಾಟಕದ ಆಟಗಾರರ ಪಾರಮ್ಯ

​ಪ್ರಜಾವಾಣಿ ವಾರ್ತೆ
Published 6 ಜನವರಿ 2024, 14:42 IST
Last Updated 6 ಜನವರಿ 2024, 14:42 IST
ಶರಣ್ ರಾವ್‌
ಶರಣ್ ರಾವ್‌   

ಮಂಗಳೂರು: ಸ್ಥಳೀಯ ಆಟಗಾರರಾದ ಶರಣ್ ರಾವ್‌ ಮತ್ತು ಧನುಷ್ ರಾಮ್ ಎಂ ಅವರು ಕುದುರೆಮುಖ ಕಬ್ಬಿಣ ಅದಿರು ಕಂಪನಿ ನಿಯಮಿತ (ಕೆಐಒಸಿಎಲ್‌) ಆಶ್ರಯದ ಫಿಡೆ ರೇಟಿಂಗ್ ಅಖಿಲ ಭಾರತ ಮುಕ್ತ ರ‍್ಯಾಪಿಡ್ ಚೆಸ್ ಟೂರ್ನಿಯ ಮೊದಲ ದಿನ ಅಗ್ರಸ್ಥಾನವನ್ನು ಹಂಚಿಕೊಂಡಿದ್ದಾರೆ.

ಮಂಗಳೂರು ನಗರ ನಿವಾಸಿ, ಕಳೆದ ವರ್ಷ ಜುಲೈಯಲ್ಲಿ ಇಂಟರ್‌ನ್ಯಾಷನಲ್ ಮಾಸ್ಟರ್ ಪಟ್ಟ ಅಲಂಕರಿಸಿದ ಶರಣ್ ರಾವ್ ಮೊದಲ ದಿನದ ಮುಕ್ತಾಯಕ್ಕೆ ಐದು ಸುತ್ತುಗಳಲ್ಲಿ ಐದು ಪಾಯಿಂಟ್ ಗಳಿಸಿದ್ದಾರೆ. 1785 ರೇಟಿಂಗ್ ಪಾಯಿಂಟ್ ಹೊಂದಿರುವ, ಪುತ್ತೂರು ನಿವಾಸಿ ಧನುಷ್ ರಾಮ್ ಕೂಡ 5 ಪಾಯಿಂಟ್‌ಗಳ ಸಾಧನೆ ಮಾಡಿದರು. 

ಕರ್ನಾಟಕದ ಪ್ರೀತಂ ಶರ್ಮಾ, ತಮಿಳುನಾಡಿನ ಸೆಂಥಿಲ್ ಮಾರನ್‌, ಸೈಯದ್ ಅನ್ವರ್ ಶಾಜುಲಿ, ಗೋವಾದ ಪ್ರದೀಪ್ ಮಂದಾರ್ ಲಾಡ್‌ ಮತ್ತು ಋತ್ವಿಜ್ ಪರಬ್‌ ತಲಾ 5 ಪಾಯಿಂಟ್‌ಗಳೊಂದಿಗೆ ಅಗ್ರ ಸ್ಥಾನಗಳನ್ನು ಹಂಚಿಕೊಂಡಿದ್ದಾರೆ. ಕರ್ನಾಟಕದ ಗೋಪಾಲ್ ರವಿ ಹೆಗ್ಡೆ, ಅರ್ಜುನ್ ಪ್ರಭು, ಪ್ರಶಾಂತ್ ನಾಯ್ಕ್‌, ಗಹನ್ ಎಂ.ಜಿ, ಆರುಷಿ ಹೆಲೆನ್ ಡಿ‘ಸಿಲ್ವಾ, ಗೋವಾದ ಅನಿಕೇತ್ ಎಕ್ಕ, ತಮಿಳುನಾಡಿನ ಮಣಿಕಂಠನ್‌ ಎಸ್‌.ಎಸ್‌ ಅವರು ತಲಾ 4.5 ಪಾಯಿಂಟ್‌ ತಮ್ಮದಾಗಿಸಿಕೊಂಡಿದ್ದಾರೆ.

ADVERTISEMENT

2150 ರೇಟಿಂಗ್ ಪಾಯಿಂಟ್‌ ಇರುವ ಶರಣ್ ರಾವ್ ಮೊದಲ ದಿನದ ಕೊನೆಯ ಸುತ್ತಿನಲ್ಲಿ ಕರ್ನಾಟಕದ ಸುದರ್ಶನ್ ಭಟ್ ವಿರುದ್ಧ ಜಯ ಗಳಿಸಿದರು. ಧನುಷ್‌ ರಾಮ್ ತಮಗಿಂತ ಹೆಚ್ಚು ರೇಟಿಂಗ್ ಪಾಯಿಂಟ್‌ (2047) ಹೊಂದಿರುವ ತಮಿಳುನಾಡಿನ ಶ್ಯಾಮ್ ಆರ್ ಎದುರು ಗೆದ್ದರು. ಪ್ರೀತಂ ದಕ್ಷಿಣ ಕನ್ನಡದ ಮಧುಸೂದನ ಭಟ್ ವಿರುದ್ಧ, ಸೆಂಥಿಲ್ ಮಾರನ್ ತಮಿಳುನಾಡಿನ ಅನೂಪ್ ಶಂಕರ್ ವಿರುದ್ಧ, ಪ್ರದೀಪ್ ಲಾಡ್‌ ದಕ್ಷಿಣ ಕನ್ನಡದ ಲಕ್ಷಿತ್ ಸಾಲಿಯಾನ್ ವಿರುದ್ಧ, ಇಂಟರ್‌ನ್ಯಾಷನಲ್ ಮಾಸ್ಟರ್ ಋತ್ವಿಜ್ ಪರಬ್ ತಮಿಳುನಾಡಿನ ಗುಗನ್ ವಿರುದ್ಧ ಜಯ ಸಾಧಿಸಿದರು.

ಕೆನಡಾದಲ್ಲಿ ನೆಲೆಸಿರುವ ಭಾರತೀಯ ಆಟಗಾರ, ಫಿಡೆ ಮಾಸ್ಟರ್‌ ಆ್ಯರನ್ ರೀವ್ ಮೆಂಡಿಸ್ ಕರ್ನಾಟಕದ ಅನ್ವಯ್ ಕಾಮತ್‌ ವಿರುದ್ಧ ಗೆದ್ದು 4.5 ಪಾಯಿಂಟ್ ಕಲೆ ಹಾಕಿದರು. ಆ್ಯರನ್ 2190 ರೇಟಿಂಗ್ ಹೊಂದಿದ್ದರೆ ಅನ್ವಯ್ ಅವರ ರೇಟಿಂಗ್ 1171.

ಧನುಷ್ ರಾಮ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.