ADVERTISEMENT

ಮಹಿಳೆಯರ ಬಾಕ್ಸಿಂಗ್ ವಿಶ್ವಕಪ್: ನಾಲ್ಕರ ಘಟ್ಟಕ್ಕೆ ಮೇರಿ ಸವಾರಿ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2018, 19:18 IST
Last Updated 20 ನವೆಂಬರ್ 2018, 19:18 IST
ನವದೆಹಲಿಯಲ್ಲಿ ನಡೆಯುತ್ತಿರುವ ವಿಶ್ವ ಮಹಿಳೆಯರ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನ 48 ಕೆ.ಜಿ. ವಿಭಾಗದ ಕ್ವಾರ್ಟ್‌ಫೈನಲ್‌ನಲ್ಲಿ ಮಂಗಳವಾರ ಭಾರತದ ಮೇರಿ ಕೋಮ್ (ನೀಲಿ) ಮತ್ತು ಚೀನಾದ ವೂ ಯೂ (ಕೆಂಪು) ಅವರ ಹಣಾಹಣಿ ನಡೆಯಿತು  –ಎಎಫ್‌ಪಿ ಚಿತ್ರ
ನವದೆಹಲಿಯಲ್ಲಿ ನಡೆಯುತ್ತಿರುವ ವಿಶ್ವ ಮಹಿಳೆಯರ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನ 48 ಕೆ.ಜಿ. ವಿಭಾಗದ ಕ್ವಾರ್ಟ್‌ಫೈನಲ್‌ನಲ್ಲಿ ಮಂಗಳವಾರ ಭಾರತದ ಮೇರಿ ಕೋಮ್ (ನೀಲಿ) ಮತ್ತು ಚೀನಾದ ವೂ ಯೂ (ಕೆಂಪು) ಅವರ ಹಣಾಹಣಿ ನಡೆಯಿತು  –ಎಎಫ್‌ಪಿ ಚಿತ್ರ   

ನವದೆಹಲಿ: ವಿಶ್ವ ಬಾಕ್ಸಿಂಗ್‌ನಲ್ಲಿ ಹೊಸ ದಾಖಲೆ ಸಾಧಿಸುವ ಕನಸು ನನಸು ಮಾಡಿಕೊಳ್ಳುವತ್ತ ಭಾರತ ಮೇರಿ ಕೋಮ್ ಅವರು ಮತ್ತೊಂದು ಹೆಜ್ಜೆ ಇಟ್ಟಿದ್ದಾರೆ.

ಅವರು ಇಲ್ಲಿ ನಡೆಯುತ್ತಿರುವ ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಮಂಗಳವಾರ ಫ್ಲೈವೇಟ್‌ (48 ಕೆ.ಜಿ.) ವಿಭಾಗದ ನಾಲ್ಕರ ಘಟ್ಟಕ್ಕೆ ಪ್ರವೇಶಿದ್ದಾರೆ. ಕ್ವಾರ್ಟರ್‌ಫೈನಲ್‌ನಲ್ಲಿ ಮೇರಿ ಕೋಮ್ ಅವರು 5–0ಯಿಂದ ಚೀನಾದ ವೂ ಯೂ ವಿರುದ್ಧ ಜಯಿಸಿದರು.

ಮಣಿಪುರದ ಮೇರಿ ಅವರು ಈ ಹಿಂದೆ ಐದು ಬಾರಿ ಚಿನ್ನ ಮತ್ತು ಒಂದು ಸಲ ಬೆಳ್ಳಿ ಪದಕ ಜಯಿಸಿದ್ದಾರೆ. ಇದೀಗ ಅವರು ಸೆಮಿಫೈನಲ್ ಪ್ರವೇಶಿಸಿರುವುದರಿಂದ ಮತ್ತೊಂದು ಪದಕ (ಸೆಮಿಯಲ್ಲಿ ಸೋತರೂ ಕಂಚಿನ ಪದಕ ಸಿಗುತ್ತದೆ)ಲಭಿಸುವುದು ಖಚಿತವಾಗಿದೆ. ಇದರೊಂದಿಗೆ ಮೇರಿ ಅವರು ಐರ್ಲೆಂಡ್‌ನ ಬಾಕ್ಸಿಂಗ್ ದಂತಕಥೆ ಕ್ಯಾಟಿ ಟೇಲರ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.

ADVERTISEMENT

ಚೀನಾದ ಬಾಕ್ಸರ್‌ ಮಾಡಿದ ಎಲ್ಲ ತಂತ್ರಗಳಿಗೂ ಮೇರಿ ಪ್ರತಿತಂತ್ರ ಹೆಣೆದರು. ತಮ್ಮ ಅನುಭವದ ಬತ್ತಳಿಕೆಯಲ್ಲಿದ್ದ ಪರಿಣಾಮಕಾರಿ ಅಸ್ತ್ರಗಳನ್ನು ಪ್ರಯೋಗಿಸಿದರು. ಅವರು ಪ್ರಯೋಗಿಸುತ್ತಿದ್ದ ಕ್ಲೀನ್‌ ಪಂಚ್‌ಗಳಿಗೆ ವೂ ಯೂ ಬಸವಳಿದರು. ಇದರಿಂದಾಗಿ ಮೇರಿ 30–27, 29–28, 30–27, 29–28, 30–27 ರಿಂದ ಎದುರಾಳಿಯನ್ನು ಮಣಿಸಿದರು.

‘ಇದೊಂದು ರೋಚಕ ಪಂದ್ಯವಾಗಿತ್ತು. ಆಕೆ ನನಗೆ ಕಠಿಣ ಸ್ಪರ್ಧೆ ಒಡ್ಡಿದರು. ಈ ಹಿಂದೆಯೂ ನಾನು ಚೀನಾದ ಹಲವು ಬಾಕ್ಸರ್‌ಗಳ ವಿರುದ್ಧ ಸೆಣಸಿದ್ದೇನೆ. ಅದರೆ ಇಂದು ವೂ ಅವರನ್ನು ಎದುರಿಸುವುದು ಸುಲಭವಾಗಿರಲಿಲ್ಲ. ನನ್ನ ಅನುಭವ ಮತ್ತು ಆತ್ಮವಿಶ್ವಾಸ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದವು’ ಎಂದು ಮೇರಿ ಸುದ್ದಿಗಾರರಿಗೆ ತಿಳಿಸಿದರು.

ಗುರುವಾರ ನಡೆಯಲಿರುವ ಸೆಮಿಫೈನಲ್‌ ಹಣಾಹಣಿಯಲ್ಲಿ ಮೇರಿ ಅವರು ಉತ್ತರ ಕೊರಿಯಾದ ಕಿಮ್ ಯಾಂಗ್ ಮೀ ಅವರನ್ನು ಎದುರಿಸಲಿದ್ದಾರೆ. ‌

35 ವರ್ಷದ ಮೇರಿ ಅವರು ಮೂವರು ಮಕ್ಕಳ ತಾಯಿಯೂ ಹೌದು. ಉತ್ತಮ ಫೀಟ್‌ನೆಸ್ ಕಾಪಾಡಿಕೊಂಡಿರುವ ಅವರು ಈ ಟೂರ್ನಿಯಲ್ಲಿ ಸತತ ಜಯ ಸಾಧಿಸಿ ಸೆಮಿಗೆ ಲಗ್ಗೆ ಇಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.