ADVERTISEMENT

ರಾಷ್ಟ್ರೀಯ ಕಬಡ್ಡಿ | ರೈಲ್ವೇಸ್‌ ಎದುರು ಸೋಲು: ಕರ್ನಾಟಕ ನಿರ್ಗಮನ

ಪಿಟಿಐ
Published 22 ಫೆಬ್ರುವರಿ 2025, 16:02 IST
Last Updated 22 ಫೆಬ್ರುವರಿ 2025, 16:02 IST
ಕಬಡ್ಡಿ ಆಟದಲ್ಲಿ ನಿರತ ಕ್ರೀಡಾಪಟುಗಳು
ಕಬಡ್ಡಿ ಆಟದಲ್ಲಿ ನಿರತ ಕ್ರೀಡಾಪಟುಗಳು   

ಕಟಕ್: ಕರ್ನಾಟಕ ತಂಡ, ಇಲ್ಲಿ ನಡೆಯುತ್ತಿರುವ 71ನೇ ಸೀನಿಯರ್ ರಾಷ್ಟ್ರೀಯ ಕಬಡ್ಡಿ ಚಾಂಪಿಯನ್‌ಷಿಪ್‌ನ ಪ್ರಿಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಶನಿವಾರ ರೈಲ್ವೇಸ್ ತಂಡದ ಎದುರು 28–47 ಅಂತರದಲ್ಲಿ ಸೋಲನುಭವಿಸಿತು.

‘ಜಿ’ ಗುಂಪಿನಲ್ಲಿದ್ದ ಕರ್ನಾಟಕ ಆಡಿದ ಮೂರು ಪಂದ್ಯಗಳಲ್ಲಿ ಎರಡು ಗೆದ್ದು (ಉತ್ತರಾಖಂಡ ಮತ್ತು ಪಶ್ಚಿಮ ಬಂಗಾಳ ವಿರುದ್ಧ) ಎರಡನೇ ಸ್ಥಾನದೊಡನೆ 16ರ ಘಟ್ಟಕ್ಕೆ ತಲುಪಿತ್ತು. ಪಂಜಾಬ್ ಆಡಿದ ಮೂರೂ ಪಂದ್ಯ ಗೆದ್ದು ಗುಂಪಿನಲ್ಲಿ ಅಗ್ರಸ್ಥಾನ ಪಡೆದಿತ್ತು.

ಐಪಿಎಲ್‌ ಸ್ಟಾರ್‌ಗಳಾದ ಯೊಗೀಶ್‌ ಕಥುನಿಯಾ ಮತ್ತು ರೇಡರ್‌ ಆಶು ಮಲಿಕ್ ಅವರನ್ನು ಒಳಗೊಂಡ ಹಾಲಿ ಚಾಂಪಿಯನ್ ಹರಿಯಾಣ 48–41ರಲ್ಲಿ ತಮಿಳುನಾಡು ತಂಡವನ್ನು ಪ್ರಯಾಸದಿಂದ ಸೋಲಿಸಿ ಕ್ವಾರ್ಟರ್‌ಫೈನಲ್ ತಲುಪಿತು. ಮುಂದಿನ ಪಂದ್ಯದಲ್ಲಿ ಸರ್ವಿಸಸ್‌ ತಂಡವನ್ನು ಎದುರಿಸಲಿದೆ.

ADVERTISEMENT

ಪ್ರಶಸ್ತಿಗೆ ನೆಚ್ಚಿನ ತಂಡಗಳಲ್ಲಿ ಒಂದಾಗಿರುವ ಸರ್ವಿಸಸ್‌  ತಂಡ ಇನ್ನೊಂದು ಪ್ರಿಕ್ವಾರ್ಟರ್‌ಫೈನಲ್‌  ಪಂದ್ಯದಲ್ಲಿ 57–22 ರಿಂದ ಮಧ್ಯಪ್ರದೇಶ ತಂಡವನ್ನು ಸುಲಭವಾಗಿ ಸೋಲಿಸಿತು.

ಎಂಟರ ಘಟ್ಟದ ಇತರ ಪಂದ್ಯಗಳಲ್ಲಿ ಮಹಾರಾಷ್ಟ್ರ ತಂಡವು, ಪಂಜಾಬ್ ತಂಡವನ್ನು; ಇಂಡಿಯನ್ ರೈಲ್ವೇಸ್‌ ತಂಡವು, ರಾಜಸ್ಥಾನ ತಂಡವನ್ನು; ಉತ್ತರ ಪ್ರದೇಶ ತಂಡವು, ಗೋವಾ ತಂಡವನ್ನು ಎದುರಿಸಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.