ADVERTISEMENT

ಊಬರ್‌ ಕಪ್‌ ಟೂರ್ನಿಯಲ್ಲಿ ಆಡಲು ಮಾಳವಿಕಾ‌ ಕಾತರ

ಪಿಟಿಐ
Published 12 ಸೆಪ್ಟೆಂಬರ್ 2020, 14:40 IST
Last Updated 12 ಸೆಪ್ಟೆಂಬರ್ 2020, 14:40 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಊಬರ್‌ ಕಪ್‌ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಮೊದಲ ಬಾರಿ ಕಣಕ್ಕಿಳಿಯಲು ಸಜ್ಜಾಗಿರುವ ಭಾರತದ ಬ್ಯಾಡ್ಮಿಂಟನ್‌ ಪಟು ಮಾಳವಿಕಾ ಬನ್ಸೋಡ್‌ ಅವರು, ಕೋವಿಡ್–19‌ ಸೋಂಕಿನ ಆತಂಕ ನನಗಿಲ್ಲ ಎಂದಿದ್ದಾರೆ. ದೀರ್ಘ ಬಿಡುವಿನ ಬಳಿಕ ಆಡಲು ಕಾತರಳಾಗಿದ್ದೇನೆ ಎಂದೂಅವರು ಹೇಳಿದ್ದಾರೆ.

ಮಾರ್ಚ್‌ನಲ್ಲಿ ಕೊರೊನಾ ಹಾವಳಿಯಿಂದಾಗಿ ಟೂರ್ನಿಗಳು ಸ್ಥಗಿತಗೊಂಡ ಬಳಿಕ ನಡೆಯುತ್ತಿರುವಮೊದಲ ಪ್ರಮುಖ ಟೂರ್ನಿ ಥಾಮಸ್‌ ಮತ್ತು ಊಬರ್ ಕಪ್‌ ಫೈನಲ್ಸ್‌ ಆಗಿದೆ. ಇದು ಅಕ್ಟೋಬರ್‌ 3ರಿಂದ 11ರವರೆಗೆ ಡೆನ್ಮಾರ್ಕ್‌ನಲ್ಲಿ ನಿಗದಿಯಾಗಿದೆ.

‘ಕಳೆದ ಹಲವು ತಿಂಗಳುಗಳಿಂದ ಯಾವುದೇ ಟೂರ್ನಿಗಳು ನಡೆದಿಲ್ಲ. ಡೆನ್ಮಾರ್ಕ್‌ ಪ್ರವಾಸದ ಕುರಿತು ಕುತೂಹಲವಿದೆ. ಕೋವಿಡ್‌–19 ಪಿಡುಗಿನ ಕುರಿತು ನನಗೆ ಯಾವುದೇ ಆತಂಕವಿಲ್ಲ. ಊಬರ್‌ ಕಪ್ ಟೂರ್ನಿಗೆ ಮೊದಲ ಬಾರಿ ಆಯ್ಕೆಯಾಗಿದ್ದೇನೆ. ತುಂಬಾ ಖುಷಿಯಾಗಿದೆ. ಕಳೆದ ಎರಡು ತಿಂಗಳು ತರಬೇತಿಯನ್ನೂ ಪಡೆದಿದ್ದೇನೆ. ಲಾಕ್‌ಡೌನ್‌ ತೆರವುಗೊಳಿಸಿದ ಬಳಿಕ ಭಾರತ ಜೂನಿಯರ್‌ ತಂಡದ ಕೋಚ್‌ ಸಂಜಯ್‌ ಮಿಶ್ರಾ ಅವರ ಮಾರ್ಗದರ್ಶನದಲ್ಲಿ ಅಭ್ಯಾಸ ನಡೆಸಿದ್ದೇನೆ‘ ಎಂದು ನಾಗಪುರದ ಆಟಗಾರ್ತಿ ಮಾಳವಿಕಾ ನುಡಿದರು.

ADVERTISEMENT

18 ವರ್ಷದ ಮಾಳವಿಕಾ ಅವರು ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಮಾಲ್ಡೀವ್ಸ್‌ ಹಾಗೂ ನೇಪಾಳದಲ್ಲಿ ನಡೆದ ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಪ್ರಶಸ್ತಿಗೆ ಮುತ್ತಿಕ್ಕಿದ್ದರು.

‘ಪ್ರತಿಷ್ಠಿತ ಊಬರ್‌ ಕಪ್‌ ಟೂರ್ನಿಗೆ ಆಯ್ಕೆಯಾಗುತ್ತೇನೆ ಎಂಬ ನಿರೀಕ್ಷೆ ಇರಲಿಲ್ಲ. ದೇಶದ ಬ್ಯಾಡ್ಮಿಂಟನ್‌ ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನದಲ್ಲಿರುವುದರಿಂದ(ಮೊದಲ ಸ್ಥಾನದಲ್ಲಿ ಆಕರ್ಷಿ ಕಶ್ಯಪ್ ಇದ್ದಾರೆ‌) ವಿಶ್ವಾಸ ಇತ್ತು. ದೇಶವನ್ನು ಪ್ರತಿನಿಧಿಸುವುದು ಹೆಮ್ಮೆಯ ಸಂಗತಿ‘ ಎಂದು ಎಡಗೈ ಆಟಗಾರ್ತಿ ಹೇಳಿದರು.

ಮಾಳವಿಕಾ ಅವರಲ್ಲದೆ ಆಕರ್ಷಿ ಕಶ್ಯಪ್‌ ಅವರೂ ಊಬರ್ ಕಪ್‌ ಟೂರ್ನಿಗಾಗಿ ಭಾರತ ಮಹಿಳಾ ತಂಡಕ್ಕೆ ಆಯ್ಕೆಯಾಗಿದ್ದಾರೆ. ರಿಯೊ ಒಲಿಂಪಿಕ್ಸ್‌ ಬೆಳ್ಳಿ ಪದಕ ಗೆದ್ದಿರುವ ಪಿ.ವಿ.ಸಿಂಧು ಹಾಗೂ ಲಂಡನ್‌ ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್‌ ತಂಡದಲ್ಲಿರುವ ಪ್ರಮುಖ ಆಟಗಾರ್ತಿಯರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.