ADVERTISEMENT

ಮಾನವ್‌ ಠಕ್ಕರ್‌ಗೆ ಕಂಚಿನ ಪದಕ

ಪಿಟಿಐ
Published 17 ನವೆಂಬರ್ 2018, 16:57 IST
Last Updated 17 ನವೆಂಬರ್ 2018, 16:57 IST
ಮಾನವ್‌ ಠಕ್ಕರ್‌
ಮಾನವ್‌ ಠಕ್ಕರ್‌   

ಮಿನ್‌ಸ್ಕ್‌, ಬೆಲಾರಸ್‌: ಭಾರತದ ಮಾನವ್‌ ಠಕ್ಕರ್‌ ಐಟಿಟಿಎಫ್‌ ಚಾಲೆಂಜ್ ಬೆಲಾರಸ್ ಓಪನ್ ಟೂರ್ನಿಯ 21 ವರ್ಷದೊಳಗಿನವರ ಸಿಂಗಲ್ಸ್ ವಿಭಾಗದಲ್ಲಿ ಕಂಚಿನ ಪದಕ ಗಳಿಸಿದ್ದಾರೆ. ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಹರ್ಮೀತ್ ದೇಸಾಯಿ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.

ಟೂರ್ನಿಯ ಉದ್ದಕ್ಕೂ ಮಾನವ್‌ ಉತ್ತಮ ಸಾಮರ್ಥ್ಯ ತೋರಿದ್ದರು. ಕ್ವಾರ್ಟರ್‌ ಫೈನಲ್‌ನಲ್ಲಿ ವಿಶ್ವದ ಎಂಟನೇ ಕ್ರಮಾಂಕದ ಆಟಗಾರ, ಜಪಾನ್‌ನ ಯೂಕಿ ಮತ್ಸುಯಾಮ ಅವರನ್ನು ಮಣಿಸಿ ಗಮನ ಸೆಳೆದಿದ್ದರು. ಆದರೆ ಶನಿವಾರ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ರಷ್ಯಾದ ಡೆನಿಸ್‌ ಇವಾನಿನ್‌ ಅವರ ವಿರುದ್ಧ 2–3ರಿಂದ ಸೋತರು.

ಮೊದಲ ಗೇಮ್‌ನಲ್ಲಿ ಉತ್ತಮ ಆರಂಭ ಕಂಡ ಅವರು 11–5ರಿಂದ ಗೆದ್ದರು. ಆದರೆ ಮುಂದಿನ ಗೇಮ್‌ನಲ್ಲಿ 4–11ರಿಂದ ಸೋತರು. ಉಭಯ ಆಟಗಾರರು ಮುಂದಿನ ಎರಡು ಗೇಮ್‌ಗಳಲ್ಲಿ ಒಂದೊಂದನ್ನು ಗೆದ್ದರು. ಹೀಗಾಗಿ ಪಂದ್ಯ ರೋಮಾಂಚಕ ಘಟ್ಟದತ್ತ ಸಾಗಿತು. ಆದರೆ ನಿರ್ಣಾಯಕ ಐದನೇ ಗೇಮ್‌ನಲ್ಲಿ ಭಾರತದ ಆಟಗಾರರನ್ನು ದಂಗುಬಡಿಸಿದ ಇವಾನಿನ್‌ 11–9ರಿಂದ ಗೆದ್ದು ಫೈನಲ್‌ಗೆ ಲಗ್ಗೆ ಇರಿಸಿದರು.

ADVERTISEMENT

ಅಲೆಕ್ಸಿಗೆ ಸೋಲುಣಿಸಿದ ಹರಮೀತ್‌: ರಷ್ಯಾದ ಅಲೆಕ್ಸಿ ಲಿವೆನ್‌ಸ್ಟೋವ್‌ ಅವರನ್ನು 4–2ರಿಂದ ಮಣಿಸಿ ಹರಮೀತ್ 16ರ ಘಟ್ಟ ಪ್ರವೇಶಿಸಿದರು. ಮೊದಲ ಗೇಮ್‌ನಲ್ಲಿ 11–9ರಿಂದ ಗೆದ್ದ ಹರಮೀತ್‌ಗೆ ಮುಂದಿನ ಎರಡು ಗೇಮ್‌ಗಳಲ್ಲಿ (6–11, 10–12) ನಿರಾಸೆ ಕಾದಿತ್ತು. ಛಲ ಬಿಡದೆ ಕಾದಾಡಿದ ಹರಮೀತ್‌ 11–7, 11–6, 11–6ರಿಂದ ಮುಂದಿನ ಮೂರು ಗೇಮ್‌ಗಳನ್ನು ಗೆದ್ದು ಸಂಭ್ರಮಿಸಿದರು.

ಮುಂದಿನ ಹಂತದಲ್ಲಿ ಅವರು ಚೀನಾದ ಜೆಂಗ್‌ ಸೂನ್‌ ವಿರುದ್ಧ ಸೆಣಸುವರು. ಪುರುಷರ ಸಿಂಗಲ್ಸ್‌ನಲ್ಲೂ ಸ್ಪರ್ಧಿಸಿದ್ದ ಮಾನವ್‌ 3–11, 11–13, 13–15, 10–12ರಿಂದ ಬೆಲ್ಜಿಯಂನ ರಾಬಿನ್ ದೇವೋಸ್ ಎದುರು ಸೋತು ಹೊರಬಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.