ADVERTISEMENT

ಬೆಂಗಾಲ್‌ ವಾರಿಯರ್ಸ್‌ಗೆ ಮಣಿದ ಜೈಪುರ; 800ರ ಮೈಲುಗಲ್ಲು ದಾಟಿದ ಮಣಿಂದರ್

ಪಟ್ನಾ ಪೈರೇಟ್ಸ್‌ಗೆ ರೋಚಕ ಜಯ

​ಪ್ರಜಾವಾಣಿ ವಾರ್ತೆ
Published 3 ಜನವರಿ 2022, 16:45 IST
Last Updated 3 ಜನವರಿ 2022, 16:45 IST
ಎದುರಾಳಿ ಆವರಣದಲ್ಲಿ ಪಾಯಿಂಟ್ ಗಳಿಸಿದ ಮಣಿಂದರ್ ಸಿಂಗ್
ಎದುರಾಳಿ ಆವರಣದಲ್ಲಿ ಪಾಯಿಂಟ್ ಗಳಿಸಿದ ಮಣಿಂದರ್ ಸಿಂಗ್   

ಬೆಂಗಳೂರು: ನಾಯಕನ ‘ಸೂಪರ್’ ಆಟದ ನೆರವಿನಿಂದ ಹಾಲಿ ಚಾಂಪಿಯನ್ ಬೆಂಗಾಲ್ ವಾರಿಯರ್ಸ್ ಪ್ರೊ ಕಬಡ್ಡಿ ಲೀಗ್‌ನ ಸೋಮವಾರದ ಪಂದ್ಯದಲ್ಲಿ ಗೆಲುವು ಸಾಧಿಸಿತು.

ವೈಟ್‌ಫೀಲ್ಡ್‌ನ ಹೋಟೆಲ್ ಶೆರಟಾನ್ ಗ್ರ್ಯಾಂಡ್‌ನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಜೈಪುರ್ ಪಿಂಕ್‌ ಪ್ಯಾಂಥರ್ಸ್‌ ತಂಡವನ್ನು ಬೆಂಗಾಲ್‌ 31–28ರಲ್ಲಿ ಮಣಿಸಿತು. ನಾಯಕ ಮಣಿಂದರ್ ಸಿಂಗ್ 13 ಪಾಯಿಂಟ್‌ ಕಲೆ ಹಾಕುವುದರೊಂದಿಗೆ ಪ್ರೊ ಕಬಡ್ಡಿಯಲ್ಲಿ 800 ರೇಡ್ ಪಾಯಿಂಟ್‌ಗಳ ಮೈಲುಗಲ್ಲು ದಾಟಿದರು.

ಜಿದ್ದಾಜಿದ್ದಿಯ ಹೋರಾಟದಲ್ಲಿ ಒಂದು ಬೋನಸ್ ಪಾಯಿಂಟ್‌ ಮತ್ತು 11 ಟಚ್ ಪಾಯಿಂಟ್‌ಗಳನ್ನು ಮಣಿಂದರ್ ಸಿಂಗ್ ತಮ್ಮದಾಗಿಸಿಕೊಂಡರು. ಆಲ್‌ರೌಂಡರ್ ಮೊಹಮ್ಮದ್ ನಬಿಭಕ್ಷ್‌ ರೇಡಿಂಗ್‌ನಲ್ಲೂ ಟ್ಯಾಕ್ಲಿಂಗ್‌ನಲ್ಲೂ ಮಿಂಚಿದರು. ಆರು ಟಚ್ ಪಾಯಿಂಟ್ ಮತ್ತು ಮೂರು ಟ್ಯಾಕ್ಲಿಂಗ್ ಪಾಯಿಂಟ್‌ಗಳೊಂದಿಗೆ ಅವರು 10 ಪಾಯಿಂಟ್‌ ಗಳಿಸಿದರು.

ADVERTISEMENT

ಪಿಂಕ್‌ ಪ್ಯಾಂಥರ್ಸ್ ಪರವಾಗಿ ಅರ್ಜುನ್ ದೇಸ್ವಾಲ್ ಏಕಾಂಗಿ ಹೋರಾಟ ನಡೆಸಿದರು. ಒಟ್ಟು 16 ಪಾಯಿಂಟ್ ಸಂಪಾದಿಸಿದ ಅವರಿಗೆ ದೀಪಕ್ ಹೂಡಾ ಕೊಂಚ ಸಹಕಾರ ನೀಡಿದರು.

ಪಟ್ನಾ ಪೈರೇಟ್ಸ್‌ಗೆ ರೋಚಕ ಗೆಲುವು

ಮತ್ತೊಂದು ಪಂದ್ಯದಲ್ಲಿ ಪಟ್ನಾ ಪೈರೇಟ್ಸ್ ತಂಡ ತೆಲುಗು ಟೈಟನ್ಸ್ ವಿರುದ್ಧ ರೋಚಕ ಜಯ ಗಳಿಸಿತು. ಮೋನು ಗೋಯತ್, ಸಚಿನ್ ಮತ್ತು ಪ್ರಶಾಂತ್ ಕುಮಾರ್ ಅವರ ಸಂಘಟಿತ ಶ್ರಮದಿಂದಾಗಿ ತಂಡ 31–30ರಲ್ಲಿ ಎದುರಾಳಿಗಳನ್ನು ಮಣಿಸಿತು. ಇವರು ಮೂವರು ಕ್ರಮವಾಗಿ ಏಳು, ಆರು ಮತ್ತು ಐದು ಪಾಯಿಂಟ್ ಕಲೆ ಹಾಕಿದರು.

ತೆಲುಗು ಟೈಟನ್ಸ್‌ ಪರ ಅಂಕಿತ್ ಬೆನಿವಾಲ್ ಸೂಪರ್ ಟೆನ್ (10) ಸಾಧನೆ ಮಾಡಿದರು. ರಾಕೇಶ್ ಗೌಡ 7 ಪಾಯಿಂಟ್ ಗಳಿಸಿ ಗೆಲುವಿಗೆ ಶ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.