ADVERTISEMENT

ದಾಖಲೆಯ ಹೊಸ್ತಿಲಲ್ಲಿ ಮೇರಿ ಕೋಮ್‌

ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನ ಫೈನಲ್‌ ಇಂದು; 48 ಕೆ.ಜಿ ವಿಭಾಗದಲ್ಲಿ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2018, 19:22 IST
Last Updated 23 ನವೆಂಬರ್ 2018, 19:22 IST
ಹನಾ ಒಕೋಟ (ಬಲ)
ಹನಾ ಒಕೋಟ (ಬಲ)   

ನವದೆಹಲಿ: ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ದಾಖಲೆ ಬರೆಯಲು ಸಜ್ಜಾಗಿರುವ ಭಾರತದ ಮೇರಿ ಕೋಮ್ ಶನಿವಾರ ಉಕ್ರೇನ್‌ನ ಹನಾ ಒಕೋಟಾ ಅವರನ್ನು ಎದುರಿಸುವರು. ಇಲ್ಲಿನ ಇಂದಿರಾಗಾಂಧಿ ಕ್ರೀಡಾಂಗಣದಲ್ಲಿ ನಡೆಯಲಿರುವ ಅಂತಿಮ ಬೌಟ್‌ನಲ್ಲಿ ಮೇರಿ ಗೆದ್ದರೆ ಆರನೇ ಬಾರಿ ವಿಶ್ವ ಚಾಂಪಿಯನ್ ಪಟ್ಟ ತಮ್ಮದಾಗಿಸಿಕೊಳ್ಳಲಿದ್ದಾರೆ. ಈ ಮೂಲಕ ಐರ್ಲೆಂಡ್‌ನ ಕೇಟಿ ಟೇಲರ್‌ ಅವರ ದಾಖಲೆಯನ್ನು ಹಿಂದಿಕ್ಕುವರು.

ಗುರುವಾರ ನಡೆದ ಸೆಮಿಫೈನಲ್‌ನಲ್ಲಿ ಮೇರಿ ದಕ್ಷಿಣ ಕೊರಿಯಾದ ಕಿಮ್ ಹಾಂಗ್ ಮಿ ಅವರನ್ನು ಭಾರತದ ಬಾಕ್ಸರ್ ಮಣಿಸಿದ್ದರು. ಹನಾ ಒಕೋಟಾ ಸೆಮಿಫೈನಲ್‌ನಲ್ಲಿ ಜಪಾನ್‌ನ ಮಡೋಕಾ ವಾಡ ಅವರಿಗೆ ಸೋಲುಣಿಸಿದ್ದರು.

2002ರಲ್ಲಿ ಮೊದಲ ಬಾರಿ ಮೇರಿ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದಿದ್ದರು. ಆಗ ಅವರು 45 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಿದ್ದರು. 2005, 2006 ಮತ್ತು 2008ರಲ್ಲಿ 46 ಕೆ.ಜಿ ವಿಭಾಗದಲ್ಲಿ ಚಿನ್ನ ಗಳಿಸಿದ್ದರು. 2010ರಲ್ಲಿ 48 ಕೆ.ಜಿ ವಿಭಾಗದಲ್ಲಿ ಕಣಕ್ಕೆ ಇಳಿದು ಮೊದಲಿಗರಾಗಿದ್ದರು.

ADVERTISEMENT

ಸೆಪ್ಟೆಂಬರ್‌ನಲ್ಲಿ ನಡೆದಿದ್ದ ಸೈಲೇಸಿಯನ್‌ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನ ಸೆಮಿಫೈನಲ್‌ನಲ್ಲಿ ಉಕ್ರೇನ್‌ ಬಾಕ್ಸರ್‌ಗೆ ಮೇರಿ ನಿರಾಸೆ ಮೂಡಿಸಿದ್ದರು.

‘ಸೈಲೇಸಿಯನ್‌ ಚಾಂಪಿಯನ್‌ಷಿಪ್‌ನ ಸೆಮಿಫೈನಲ್‌ನಲ್ಲಿ ಸೋತಿರುವುದು ನಿಜ. ಈ ಬಾರಿಯೂ ಅದೇ ಫಲಿತಾಂಶ ಪುನರಾವರ್ತನೆಯಾಗಲಿದೆ ಎಂದು ಹೇಳಲಾಗದು. ಎಲ್ಲ ಸಾಮರ್ಥ್ಯ ಹೊರಗೆಡವಿ ಆಡುತ್ತೇನೆ. ಮೇರಿ ಅವರಿಗೆ ತವರಿನ ಪ್ರೇಕ್ಷಕರ ಬೆಂಬಲ ಇದ್ದೇ ಇದೆ. ಆದರೆ ಅವರನ್ನು ಮಣಿಸಲು ಬೇಕಾದ ತಂತ್ರಗಳು ನನ್ನಲ್ಲಿವೆ’ ಎಂದು ಹನಾ ಹೇಳಿದರು.

ಬೌಟ್‌ಗಳು ಸಂಜೆ 4 ಗಂಟೆಗೆ ಆರಂಭವಾಗಲಿವೆ. ಮೊದಲ ಬೌಟ್‌ನಲ್ಲಿ 45ರಿಂದ 48 ಕೆ.ಜಿ ವಿಭಾಗದವರು ಸ್ಪರ್ಧಿಸಲಿದ್ದಾರೆ. ನಂತರ 51 ಕೆ.ಜಿ ವಿಭಾಗ, 54, 57, 60, 64 ಕೆ.ಜಿ ವಿಭಾಗಗಳ ಸ್ಪರ್ಧೆ ಇರುತ್ತದೆ. 69, 75, 81 ಮತ್ತು 81+ ವಿಭಾಗದ ಬೌಟ್‌ಗಳು ಕೊನೆಯಲ್ಲಿನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.