ADVERTISEMENT

ಎಂಬಿಎ ಪದವೀಧರೆಯ ಬಾಲ್ ಬ್ಯಾಡ್ಮಿಂಟನ್ ಯಾನ

ಬಸವರಾಜ ದಳವಾಯಿ
Published 14 ಡಿಸೆಂಬರ್ 2020, 19:30 IST
Last Updated 14 ಡಿಸೆಂಬರ್ 2020, 19:30 IST
ಪಲ್ಲವಿ ಜಿ.
ಪಲ್ಲವಿ ಜಿ.   

ಬಾಲ್‌ ಬ್ಯಾಡ್ಮಿಂಟನ್ ಟೂರ್ನಿಗಳಲ್ಲಿ ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿರುವ ಪ್ರತಿಭೆ ಬೆಂಗಳೂರಿನ ಪಲ್ಲವಿ ಜಿ.

ಏಳನೇ ತರಗತಿಯಲ್ಲಿದ್ದಾಗಲೇ ಬಾಲ್ ಬ್ಯಾಡ್ಮಿಂಟನ್‌ನತ್ತ ಆಸಕ್ತಿ ಬೆಳೆಸಿಕೊಂಡ ಪಲ್ಲವಿ ರಾಜ್ಯ, ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ ಛಾಪು ಮೂಡಿಸಿದ್ದಾರೆ. ನ್ಯಾಯಾಲಯದಲ್ಲಿ ಡಿ ಗ್ರೂಪ್‌ ನೌಕರರಾಗಿರುವ ತಾಯಿ ಮತ್ತು ಮೂವರು ಅಕ್ಕಂದಿರ ಅಕ್ಕರೆಯಲ್ಲಿ ಬೆಳೆದವರು ಪಲ್ಲವಿ. ಜಯಾ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಕೋಚ್‌ಗಳಾದ ಜಯಾ ಹಾಗೂ ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ ಇವರು ಪಳಗುತ್ತಿದ್ದಾರೆ.

ಭಾರತ ಮಾತಾ ವಿದ್ಯಾಮಂದಿರದಲ್ಲಿ ಪ್ರಾಥಮಿಕ ಹಾಗೂ ಫ್ರೌಡ ಶಿಕ್ಷಣ, ಬಿಎಂಎಸ್‌ ಕಾಲೇಜಿನಲ್ಲಿ ಪಿಯುಸಿ, ಹೆಬ್ಬಾಳದ ಏಟ್ರಿಯಾ ಇನ್‌ಸ್ಟಿಟ್ಯೂಟ್ ಆಫ್‌ ಟೆಕ್ನಾಲಜಿ ಕಾಲೇಜಿನಲ್ಲಿ ಎಂಬಿಎ ಪದವಿ ಪಡೆದಿದ್ದಾರೆ.

ADVERTISEMENT

ತಾಲ್ಲೂಕು, ಜಿಲ್ಲಾಮಟ್ಟದ ಬಾಲ್‌ ಬ್ಯಾಡ್ಮಿಂಟನ್‌ ಟೂರ್ನಿಗಳಲ್ಲಿ ಪ್ರಗತಿ ಸಾಧಿಸುತ್ತ ಸಾಗಿದ ಪಲ್ಲವಿ, 2013ರಲ್ಲಿ ಸಬ್‌ ಜೂನಿಯರ್‌ ಮೂಲಕ ಮೊದಲ ಬಾರಿ ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗೆ ಪದಾರ್ಪಣೆ ಮಾಡಿದರು. ಬಳಿಕ ಜೂನಿಯರ್‌ ಚಾಂಪಿಯನ್‌ಷಿಪ್‌ಗೆ ಆಯ್ಕೆಯಾದರು. 60, 62 ಹಾಗೂ 63ನೇ ರಾಷ್ಟ್ರೀಯ ಜೂನಿಯರ್ ಚಾಂಪಿಯನ್‌ಷಿಪ್‌ಗಳಲ್ಲಿ ಕರ್ನಾಟಕ ತಂಡದ ನಾಯಕತ್ವ ವಹಿಸುವ ಅವಕಾಶ ಅವರಿಗೆ ಒಲಿದುಬಂತು. ರಾಷ್ಟ್ರೀಯ ಜೂನಿಯರ್ ಚಾಂಪಿಯನ್‌ಷಿಪ್‌ಗಳಲ್ಲಿ ಎರಡು ಬಾರಿ ಅವರಿಗೆ ‘ಸ್ಟಾರ್‌ ಆಫ್ ಇಂಡಿಯಾ’ ಗೌರವ ಸಂದಿದೆ. 1ರಿಂದ 4ನೇ ಸ್ಥಾನ ಗಳಿಸಿದ ತಂಡಗಳಲ್ಲಿ ಶ್ರೇಷ್ಠ ಆಟಗಾರ್ತಿಯರನ್ನು ಆಯ್ಕೆ ಮಾಡಿ ನೀಡುವ ಪುರಸ್ಕಾರ ಇದು.

ತಲಾ ಎರಡು ಬಾರಿ ರಾಷ್ಟ್ರೀಯ ಸೀನಿಯರ್‌ ಹಾಗೂ ಫೆಡರೇಷನ್‌ ಕಪ್ ಟೂರ್ನಿಗಳಲ್ಲಿ ಪಲ್ಲವಿ ಕಣಕ್ಕಿಳಿದಿದ್ದಾರೆ. ದಕ್ಷಿಣ ವಲಯ ಟೂರ್ನಿಯಲ್ಲೂ ಆಡಿದ್ದಾರೆ. 2018ರಲ್ಲಿ ಮೊದಲ ಬಾರಿ ನಡೆದ ರಾಷ್ಟ್ರೀಯ ಯೂತ್ ಚಾಂಪಿಯನ್‌ಷಿಪ್‌ನಲ್ಲಿ ರಾಜ್ಯ ತಂಡವನ್ನು ಮುನ್ನಡೆಸುವ ಅವಕಾಶ ಅವರಿಗೆ ಸಿಕ್ಕಿತ್ತು. ‘ಕೋವಿಡ್‌–19 ಸಾಂಕ್ರಾಮಿಕದಿಂದಾಗಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಹಲವು ಚಾಂಪಿಯನ್‌ಷಿಪ್‌ಗಳು ರದ್ದಾದದ್ದು ನಿರಾಸೆ ತಂದಿತು. ಹಲವು ಅವಕಾಶಗಳು ಕೈ ತಪ್ಪಿದವು’ ಎಂದು ಪಲ್ಲವಿ ಬೇಸರದಿಂದ ನುಡಿದರು.

‘ಕ್ರೀಡೆಯು ನಮ್ಮ ಸ್ಮರಣ ಶಕ್ತಿ ಹೆಚ್ಚಿಸುವುದರಿಂದ ಕ್ರೀಡೆ ಮತ್ತು ವಿದ್ಯಾಭ್ಯಾಸ ಎರಡರಲ್ಲೂ ಸಮತೋಲನ ಕಾಯ್ದುಕೊಳ್ಳಲು ಸಾಧ್ಯವಾಗಿದೆ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.