ADVERTISEMENT

ಮಿಲ್ಖಾಸಿಂಗ್ ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ

​ಪ್ರಜಾವಾಣಿ ವಾರ್ತೆ
Published 4 ಜೂನ್ 2021, 15:01 IST
Last Updated 4 ಜೂನ್ 2021, 15:01 IST
ಮಿಲ್ಖಾ ಸಿಂಗ್
ಮಿಲ್ಖಾ ಸಿಂಗ್   

ಚಂಡೀಗಡ: ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಅಥ್ಲೀಟ್ ಮಿಲ್ಕಾ ಸಿಂಗ್ ಅವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಶುಕ್ರವಾರ ಫೋನ್ ಕರೆ ಮಾಡಿ ಆರೋಗ್ಯ ವಿಚಾರಿಸಿದರು.

ಈಚೆಗೆ ಕೋವಿಡ್ ಸೋಂಕಿಗೆ ಒಳಗಾಗಿದ್ದ ಮಿಲ್ಖಾ ಸಿಂಗ್ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೋದ ಭಾನುವಾರ ಮನೆಗೆ ಮರಳಿದ್ದರು. ಆದರೆ, ಗುರುವಾರ ಅವರ ಆಮ್ಲಜನಕ ಮಟ್ಟವು ಕಡಿಮೆಯಾಗಿದ್ದರಿಂದ ಪಿಜಿಐಎಂಇಆರ್‌ (ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆ, ಸ್ನಾತಕೋತ್ತರ ಸಂಸ್ಥೆ) ಗೆ ದಾಖಲಾಗಿದ್ದಾರೆ.

‘ಬೇಗನೆ ಗುಣಮುಖರಾಗಿ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲು ಹೋಗುತ್ತಿರುವ ಅಥ್ಲೀಟ್‌ಗಳನ್ನು ಹಾರೈಸಿ ಮತ್ತು ಪ್ರೇರಣೆ ನೀಡಿ‘ ಎಂದು ಪ್ರಧಾನಿ ಮೋದಿ ಅವರು ಸಿಂಗ್ ಅವರಿಗೆ ಶುಭಹಾರೈಸಿದರು.

ADVERTISEMENT

‘ಸಿಂಗ್ ಅವರು ನಿನ್ನೆಗಿಂತ ಇಂದು ಚೇತರಿಸಿಕೊಂಡಿದ್ದಾರೆ. ಅವರ ಆರೋಗ್ಯವು ಸ್ಥಿರವಾಗಿದೆ‘ ಎಂದು ಆಸ್ಪತ್ರೆಯ ವಕ್ತಾರ ಪ್ರೊ. ಅಶೋಕ ಕುಮಾರ್ ತಿಳಿಸಿದ್ದಾರೆ.

ಮೂವರು ವೈದ್ಯರ ತಂಡವು ಸಿಂಗ್ ಅವರ ಚಿಕಿತ್ಸೆಯ ಹೊಣೆ ನಿಭಾಯಿಸುತ್ತಿದೆ.

‘ನನ್ನ ತಂದೆಯ ಆರೋಗ್ಯ ಸ್ಥಿರವಾಗಿದೆ. ಅವರಿಗೆ ಕರೆ ಮಾಡಿ ಮಾತನಾಡಿಸಿ ಧೈರ್ಯ ತುಂಬಿದ ಪ್ರಧಾನಿ ಮೋದಿಯವರಿಗೆ ಧನ್ಯವಾದಗಳು‘ ಎಂದು ಮಿಲ್ಖಾ ಪುತ್ರ, ಗಾಲ್ಫ್ ಆಟಗಾರ ಜೀವ್ ಮಿಲ್ಖಾಸಿಂಗ್ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.