ADVERTISEMENT

ಫೆಡರೇಷನ್‌ಗಳಿಗೆ ಮಾನ್ಯತೆ: ನಿರ್ಧಾರದಿಂದ ಹಿಂದೆ ಸರಿದ ಸಚಿವಾಲಯ

ಪಿಟಿಐ
Published 26 ಜೂನ್ 2020, 5:36 IST
Last Updated 26 ಜೂನ್ 2020, 5:36 IST
   

ನವದೆಹಲಿ: ದೆಹಲಿ ಹೈಕೋರ್ಟ್‌ನ ಆದೇಶಕ್ಕೆ ತಲೆಬಾಗಿರುವ ಕೇಂದ್ರ ಕ್ರೀಡಾ ಸಚಿವಾಲಯವು ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ಗಳಿಗೆ (ಎನ್‌ಎಸ್‌ಎಫ್‌) ನೀಡಿದ್ದ ವಾರ್ಷಿಕ ಮಾನ್ಯತೆಯನ್ನು ತಡೆ ಹಿಡಿದಿದೆ.

‘ಫೆಬ್ರುವರಿ 7ರಂದು ನ್ಯಾಯಾಲಯ ನೀಡಿದ್ದ ಆದೇಶವನ್ನು ಕ್ರೀಡಾ ಸಚಿವಾಲಯವು ಪಾಲಿಸಿಲ್ಲ. ನ್ಯಾಯಾಲಯಕ್ಕೆ ಮಾಹಿತಿ ನೀಡದೆಯೇ 54 ಎನ್‌ಎಸ್‌ಎಫ್‌ಗಳಿಗೆ ಈ ವರ್ಷದ ಸೆಪ್ಟೆಂಬರ್‌ 30ರವರೆಗೆ ಮಾನ್ಯತೆ ನೀಡಲಾಗಿದೆ. ಇದು ಸರಿಯಲ್ಲ’ ಎಂದು ಹೈಕೋರ್ಟ್‌ ಹೇಳಿದೆ.

‘ಎನ್‌ಎಸ್‌ಎಫ್‌ಗಳಿಗೆ ನೀಡಿರುವ ಮಾನ್ಯತೆಯನ್ನು ತಡೆಹಿಡಿಯುವಂತೆ ದೆಹಲಿ ಹೈಕೋರ್ಟ್‌ ಬುಧವಾರ ಆದೇಶಿಸಿದೆ. ಹೀಗಾಗಿ ನಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದೇವೆ’ ಎಂದು ಕ್ರೀಡಾ ಸಚಿವಾಲಯದ ಸಹಾಯಕ ಕಾರ್ಯದರ್ಶಿ ಎಸ್‌ಪಿಎಸ್‌ ತೋಮರ್‌ ಅವರು ಭಾರತೀಯ ಕ್ರೀಡಾ ಪ್ರಾಧಿಕಾರದ (ಸಾಯ್‌) ವ್ಯವಸ್ಥಾಪಕ ನಿರ್ದೇಶಕ ಸಂದೀಪ್‌ ಪ್ರಧಾನ್‌ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ADVERTISEMENT

ವಾರ್ಷಿಕ ಮಾನ್ಯತೆ ಗಳಿಸುವ ಫೆಡರೇಷನ್‌ಗಳು ಕೇಂದ್ರ ಸರ್ಕಾರ ನೀಡುವ ಅನುದಾನ ಪಡೆಯಲು ಅರ್ಹವಾಗಿರುತ್ತವೆ. ತರಬೇತಿ ಹಾಗೂ ಟೂರ್ನಿಗಳ ಆಯೋಜನೆಯ ವೇಳೆಯೂ ಸರ್ಕಾರವು ಎನ್‌ಎಸ್‌ಎಫ್‌ಗಳಿಗೆ ನೆರವು ನೀಡುತ್ತದೆ.

ಭಾರತ ಪ್ಯಾರಾಲಿಂಪಿಕ್‌ ಸಮಿತಿ (ಪಿಸಿಐ), ಭಾರತ ರೋವಿಂಗ್‌ ಫೆಡರೇಷನ್‌ (ಆರ್‌ಎಫ್‌ಐ) ಹಾಗೂ ಸ್ಕೂಲ್‌ ಗೇಮ್ಸ್‌ ಫೆಡರೇಷನ್‌ ಆಫ್‌ ಇಂಡಿಯಾವನ್ನು (ಎಸ್‌ಜಿಎಫ್‌ಐ) ಈ ಬಾರಿಯ ಪಟ್ಟಿಯಿಂದ ಹೊರಗಿಟ್ಟಿದ್ದ ಸಚಿವಾಲಯ, ಅಖಿಲ ಭಾರತ ಕೇರಂ ಫೆಡರೇಷನ್‌ಗೆ ಹೊಸದಾಗಿ ಮಾನ್ಯತೆ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.