ADVERTISEMENT

ಮಿಕ್ಸೆಡ್‌ ಬ್ಯಾಡ್ಮಿಂಟನ್‌: ಭಾರತಕ್ಕೆ ಜಯ

ಪಿಟಿಐ
Published 30 ಸೆಪ್ಟೆಂಬರ್ 2019, 19:20 IST
Last Updated 30 ಸೆಪ್ಟೆಂಬರ್ 2019, 19:20 IST

ಕಝಾನ್‌, ರಷ್ಯಾ: ಮೀರಬಾ ಲುವಾಂಗ್‌ ಮತ್ತು ತನಿಶಾ ಕ್ರಾಸ್ಟೊ, ಬಿಡಬ್ಲ್ಯುಎಫ್‌ ವಿಶ್ವ ಜೂನಿಯರ್‌ ಮಿಕ್ಸೆಡ್‌ ಟೀಮ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನ ‘ಇ’ ಗುಂಪಿನ ಪಂದ್ಯದಲ್ಲಿ ಭಾರತ 4–1 ರಿಂದ ಅಮೆರಿಕ ವಿರುದ್ಧ ಗೆಲ್ಲಲು ನೆರವಾದರು.

ಗೋವಾದ ಹುಡುಗಿ ತನಿಶಾ, ಮಿಕ್ಸಡ್‌ ಡಬಲ್ಸ್ ಮತ್ತು ಬಾಲಕಿಯರ ಡಬಲ್ಸ್‌ –ಎರಡರಲ್ಲೂ ಗೆದ್ದು ಗಮನ ಸೆಳೆದರು. ಛತ್ತೀಸಗಢದ ಇಶಾನ್‌ ಭಟ್ನಾಗರ್‌ ಜೊತೆ ಆಡಿದ ತನಿಶಾ 22–20, 21–9 ರಲ್ಲಿ ಅಮೆರಿಕದ ಜಾಕೊಬ್‌ ಝಾಂಗ್‌ ಮತ್ತು ಜೆಸ್ಸಿಕಾ ವಾಂಗ್‌ ಅವರನ್ನು ಸೋಲಿಸಿದರು.

ವಿಶ್ವ ಜೂನಿಯರ್‌ ಕ್ರಮಾಂಕದಲ್ಲಿ 10ನೇ ಸ್ಥಾನದಲ್ಲಿರುವ ಲುವಾಂಗ್‌ 21–9, 21–11 ರಿಂದ 520ನೇ ರ‍್ಯಾಂಕ್‌ನ ಅಲೆಕ್ಸಾಂಡರ್‌ ಝೆಂಗ್ ಮೇಲೆ 26 ನಿಮಿಷಗಳಲ್ಲೇ ಸುಲಭ ಗೆಲುವನ್ನು ದಾಖಲಿಸಿದರು. ಗುಜರಾತ್‌ನ ಆಟಗಾರ್ತಿ ತಸನ್ನಿಮ್‌ ಮಿರ್‌ ಬಾಲಕಿಯರ 21–19, 25–23ರಲ್ಲಿ ನತಾಲಿ ಚಿ ವಿರುದ್ಧ ಜಯಗಳಿಸಿ ಭಾರತದ ಮುನ್ನಡೆ 3–0ಗೆ ಹೆಚ್ಚಿಸಿದರು. ನತಾಲಿ ವಿಶ್ವ ಕ್ರಮಾಂಕದಲ್ಲಿ 75ನೇ ಸ್ಥಾನದಲ್ಲಿದ್ದಾರೆ. ಆದರೆ ಬಾಲಕರ ಡಬಲ್ಸ್‌ನಲ್ಲಿ ಮಂಜಿತ್‌ ಸಿಂಗ್‌ ಮತ್ತು ಇಮನ್‌ ಸೊನೊವಾಲ್‌ 23–25, 19–21 ರಲ್ಲಿ ವಿಲಿಯಮ್‌ ಯು ಮತ್ತು ಜೋಶುವಾ ಯುವಾನ್‌ ಅವರಿಗೆ ಮಣಿದರು.ಕೊನೆಯ ಪಂದ್ಯದಲ್ಲಿ ಅದಿತಿ ಭಟ್‌– ಕ್ರಾಸ್ಟೊ ಜೋಡಿ ಉತ್ತಮ ಹೋರಾಟದ ನಂತರ 21–16, 15–21, 21–7 ರಲ್ಲಿ ಅಮೆರಿಕದ ಕೆಟೆಲಿನ್‌ ಗೊ ಮತ್ತು ಎಸ್ತರ್‌ ಶಿ ಅವರನ್ನು ಸೋಲಿಸಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.