ADVERTISEMENT

ಜೆರೆಮಿಗೆ ಚಿನ್ನದ ಪದಕ

ವೇಟ್‌ಲಿಫ್ಟಿಂಗ್‌ನಲ್ಲಿ ಮುಂದುವರಿದ ಪದಕ ಬೇಟೆ; ಬಿಂದ್ಯಾರಾಣಿಗೆ ಬೆಳ್ಳಿ

​ಪ್ರಜಾವಾಣಿ ವಾರ್ತೆ
Published 31 ಜುಲೈ 2022, 14:29 IST
Last Updated 31 ಜುಲೈ 2022, 14:29 IST
ಜೆರೆಮಿ ಲಾಲ್‌ರಿನುಂಗಾ ಯಶಸ್ವಿಯಾಗಿ ಭಾರ ಎತ್ತಿದ ಕ್ಷಣ –ಪಿಟಿಐ ಚಿತ್ರ
ಜೆರೆಮಿ ಲಾಲ್‌ರಿನುಂಗಾ ಯಶಸ್ವಿಯಾಗಿ ಭಾರ ಎತ್ತಿದ ಕ್ಷಣ –ಪಿಟಿಐ ಚಿತ್ರ   

ಬರ್ಮಿಂಗ್‌ಹ್ಯಾಮ್ (ಪಿಟಿಐ): ಕಾಮನ್‌ವೆಲ್ತ್‌ ಕೂಟದ ವೇಟ್‌ಲಿಫ್ಟಿಂಗ್‌ನಲ್ಲಿ ಭಾರತದ ಶಕ್ತಿ ಪ್ರದರ್ಶನ ಮುಂದುವರಿದಿದ್ದು, ಯುವ ವೇಟ್‌ಲಿಫ್ಟರ್‌ ಜೆರೆಮಿ ಲಾಲ್‌ರಿನುಂಗಾ ಅವರು ಶನಿವಾರ ಚಿನ್ನದ ಪದಕ ಗೆದ್ದು ಬೀಗಿದರು. ಬಿಂದ್ಯಾರಾಣಿ ದೇವಿ ಬೆಳ್ಳಿ ಪಡೆದರು.

ಮಿಜೊರಾಂ ರಾಜ್ಯದ ಐಜ್ವಾಲ್‌ನ 19 ವರ್ಷದ ಜೆರೆಮಿ ಪುರುಷರ 67 ಕೆ.ಜಿ ವಿಭಾಗದಲ್ಲಿ ಅಸಾಧಾರಣ ಸಾಮರ್ಥ್ಯ ತೋರಿ, ಒಟ್ಟು 300 ಕೆ.ಜಿ ಭಾರ ಎತ್ತಿದರಲ್ಲದೆ, ಎರಡು ಕೂಟ ದಾಖಲೆಗಳನ್ನೂ ತಮ್ಮ ಹೆಸರಿಗೆ ಬರೆಯಿಸಿಕೊಂಡರು.

ಸ್ನ್ಯಾಚ್‌ನಲ್ಲಿ 140 ಕೆ.ಜಿ ಹಾಗೂ ಕ್ಲೀನ್‌ ಮತ್ತು ಜರ್ಕ್‌ನಲ್ಲಿ 160 ಕೆ.ಜಿ ಎತ್ತಿದರು. ಸ್ನ್ಯಾಚ್‌ ಮತ್ತು ಒಟ್ಟಾರೆ ವಿಭಾಗದಲ್ಲಿ ಅವರು ದಾಖಲೆ ಸ್ಥಾಪಿಸಿದರು. 2018ರ ಯೂತ್‌ ಒಲಿಂಪಿಕ್ಸ್‌ನಲ್ಲಿ ಚಿನ್ನ ಜಯಿಸಿದ್ದ ಜೆರೆಮಿ, ಈ ಸಾಧನೆಯ ಮೂಲಕ ಸೀನಿಯರ್‌ ವಿಭಾಗಕ್ಕೆ ಭರ್ಜರಿ ಪ್ರವೇಶ ಪಡೆದುಕೊಂಡಿದ್ದಾರೆ.

ADVERTISEMENT

ಕ್ಲೀನ್‌ ಮತ್ತು ಜರ್ಕ್‌ನಲ್ಲಿ ಭಾರ ಎತ್ತುವ ವೇಳೆ ಎರಡು ಸಲ ನೋವು ಅನುಭವಿಸಿದರೂ, ಛಲ ಬಿಡಲಿಲ್ಲ. ಸ್ನ್ಯಾಚ್‌ನಲ್ಲಿ ಎರಡನೇ ಪ್ರಯತ್ನದಲ್ಲಿ 140 ಕೆ.ಜಿ ಎತ್ತಿದ ಅವರು ಎದುರಾಳಿಗಳನ್ನು ಹಿಂದಿಕ್ಕಿದರು. ಕೊನೆಯ ಪ್ರಯತ್ನದಲ್ಲಿ 143 ಕೆ.ಜಿ ಎತ್ತಲು ಪ್ರಯತ್ನಿಸಿದರೂ ವಿಫಲರಾದರು.

ಕ್ಲೀನ್‌ ಮತ್ತು ಜರ್ಕ್‌ನಲ್ಲಿ ಮೊದಲ ಪ್ರಯತ್ನದಲ್ಲಿ 154 ಕೆ.ಜಿ ಹಾಗೂ ಎರಡನೇ ಪ್ರಯತ್ನದಲ್ಲಿ 160 ಕೆ.ಜಿ. ಭಾರ ಎತ್ತಿದರು. ಮೂರನೇ ಅವಕಾಶದಲ್ಲಿ 165 ಕೆ.ಜಿ ಎತ್ತಲು ಪ್ರಯತ್ನಿಸಿದರೂ ಎಡವಿದರು. ಆದರೆ ಎರಡನೇ ಪ್ರಯತ್ನದಲ್ಲೇ ಅವರು ಚಿನ್ನ ಖಚಿತಪಡಿಸಿಕೊಂಡಿದ್ದರು.

ಸಮೋವದ ವೈಪವ ನೆವೊ (127 ಕೆ.ಜಿ+ 166 ಕೆ.ಜಿ) ಅವರು ಬೆಳ್ಳಿ ಹಾಗೂ ನೈಜೀರಿಯಾದ ಜೋಸೆಫ್‌ ಉಮೊಫಿಯ (130 ಕೆ.ಜಿ+ 160 ಕೆ.ಜಿ) ಕಂಚು ಗೆದ್ದುಕೊಂಡರು.

ಬಿಂದ್ಯಾರಾಣಿಗೆ ಬೆಳ್ಳಿ: ಜೆರೆಮಿ ಅವರ ಚಿನ್ನದ ಸಾಧನೆಗೂ ಮುನ್ನ ಬಿಂದ್ಯಾರಾಣಿ ದೇವಿ ಅವರು ಮಹಿಳೆಯರ 55 ಕೆ.ಜಿ. ವಿಭಾಗದಲ್ಲಿ ಭಾರತಕ್ಕೆ ಬೆಳ್ಳಿ ತಂದಿತ್ತಿದ್ದರು.

23 ವರ್ಷದ ಬಿಂದ್ಯಾ ಒಟ್ಟು 202 ಕೆ.ಜಿ. ಭಾರ (86 ಕೆ.ಜಿ+ 116 ಕೆ.ಜಿ) ಎತ್ತಿದರು. ಕ್ಲೀನ್‌ ಮತ್ತು ಜರ್ಕ್‌ನಲ್ಲಿ 116 ಕೆ.ಜಿ ಸಾಧನೆಯು ಹೊಸ ಕೂಟ ದಾಖಲೆಯೂ ಹೌದು.

ನೈಜೀರಿಯಾದ ಅದಿಜತ್ ಅಡೆನಿಕ್ ಒಲರೊನೊಯೆ (203 ಕೆ.ಜಿ) ನಿರೀಕ್ಷೆಯಂತೆಯೇ ಚಿನ್ನದ ಪದಕ ಗೆದ್ದುಕೊಂಡರೆ, ಇಂಗ್ಲೆಂಡ್‌ನ ಫೇಯರ್ ಮಾರೊ (198 ಕೆ.ಜಿ) ಕಂಚು ಪಡೆದರು.

ವೇಟ್‌ಲಿಫ್ಟಿಂಗ್‌ನಲ್ಲಿ ಭಾರತ ಒಟ್ಟು ಐದು ಪದಕ ಜಯಿಸಿದೆ. ಮೀರಾಬಾಯಿ ಚಾನು, ಸಂಕೇತ್‌ ಸರ್ಗರ್‌ ಮತ್ತು ಗುರುರಾಜ ಪೂಜಾರಿ ಅವರು ಕ್ರಮವಾಗಿ ಚಿನ್ನ, ಬೆಳ್ಳಿ ಹಾಗೂ ಕಂಚು ಗೆದ್ದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.