ADVERTISEMENT

ಪದ್ಮಶ್ರೀಗೆ ಎಂ.ಪಿ.ಗಣೇಶ್, ಸುಮಾ ಹೆಸರು

ಪದ್ಮವಿಭೂಷಣಕ್ಕೆ ಬಾಕ್ಸರ್ ಎಂ.ಸಿ.ಮೇರಿ ಕೋಮ್, ಪದ್ಮಭೂಷಣಕ್ಕೆ ಪಿ.ವಿ. ಸಿಂಧು ಹೆಸರು ಶಿಫಾರಸು

ಪಿಟಿಐ
Published 12 ಸೆಪ್ಟೆಂಬರ್ 2019, 19:30 IST
Last Updated 12 ಸೆಪ್ಟೆಂಬರ್ 2019, 19:30 IST
ಎಂ.ಪಿ.ಗಣೇಶ್ ಹಾಗೂ ಸುಮಾ ಶಿರೂರು
ಎಂ.ಪಿ.ಗಣೇಶ್ ಹಾಗೂ ಸುಮಾ ಶಿರೂರು   

ನವದೆಹಲಿ: ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀಗೆ ಒಲಿಂಪಿಯನ್, ಹಾಕಿ ಆಟಗಾರ ಎಂ.ಪಿ.ಗಣೇಶ್, ಶೂಟರ್ ಸುಮಾ ಶಿರೂರು ಮತ್ತು ಆರ್ಚರ್ ತರುಣ್ ದೀಪ್ ರಾಯ್ ಅವರ ಹೆಸರನ್ನು ಕ್ರೀಡಾ ಸಚಿವಾಲಯ ಗುರುವಾರ ಶಿಫಾರಸು ಮಾಡಿದೆ. ಗಣೇಶ್ ಮತ್ತು ಸುಮಾ ಕನ್ನಡಿಗರು.

ಸುಮಾ ಒಳಗೊಂಡಂತೆ ಏಳು ಮಂದಿ ಮಹಿಳಾ ಕ್ರೀಡಾಪಟುಗಳ ಹೆಸರನ್ನು ಪಟ್ಟಿಯಲ್ಲಿ ಸೇರಿಸಲಾಗಿದ್ದು ಆರು ಬಾರಿಯ ವಿಶ್ವ ಚಾಂಪಿಯನ್ ಎಂ.ಸಿ.ಮೇರಿ ಕೋಮ್ ಅವರನ್ನು ಪದ್ಮವಿಭೂಷಣ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ. ಮೇರಿ ಕೋಮ್‌ ಅಂತಿಮ ಪಟ್ಟಿಯಲ್ಲಿ ಸ್ಥಾನ ಗಳಿಸಿದರೆ, ಈ ಪ್ರಶಸ್ತಿಗೆ ಭಾಜನರಾಗುವ ಮೊದಲ ಮಹಿಳಾ ಕ್ರೀಡಾಪಟು ಎನಿಸಲಿದ್ದಾರೆ. 2006ರಲ್ಲಿ ಪದ್ಮಶ್ರೀ ಮತ್ತು 2013ರಲ್ಲಿ ಪದ್ಮಭೂಷಣ ಪ್ರಶಸ್ತಿ ಅವರಿಗೆ ಒಲಿದಿತ್ತು.

ಕುಸ್ತಿಪಟು ವಿನೇಶಾ ಪೋಗಟ್, ಟೇಬಲ್ ಟೆನಿಸ್ ಆಟಗಾರ್ತಿ ಮಣಿಕಾ ಭಾತ್ರಾ, ಕ್ರಿಕೆಟ್ ಪಟು ಹರ್ಮನ್‌ಪ್ರೀತ್ ಕೌರ್‌, ಭಾರತ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್, ಪರ್ವತಾರೋಹಿ ಅವಳಿ ಸಹೋದರಿಯರಾದ ತಾಶಿ ಮಲಿಕ್ ಮತ್ತು ನುಗಾಶಿ ಮಲಿಕ್ ಕೂಡ ಪದ್ಮಶ್ರೀಗೆ ಶಿಫಾರಸು ಮಾಡಲಾದವರ ಪಟ್ಟಿಯಲ್ಲಿದ್ದಾರೆ.

ADVERTISEMENT

ಸಿಂಧುಗೆ ಮತ್ತೆ ಅವಕಾಶ: ವಿಶ್ವ ಚಾಂಪಿಯನ್‌ ಮತ್ತು ಒಲಿಂಪಿಕ್ಸ್‌ ಬೆಳ್ಳಿ ಪದಕ ವಿಜೇತೆ ಪಿ.ವಿ.ಸಿಂಧು ಅವರ ಹೆಸರನ್ನೂ ಪದ್ಮಭೂಷಣ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ. ಅವರಿಗೆ 2015ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ. 2017ರಲ್ಲಿ ಪದ್ಮಭೂಷಣಕ್ಕೆ ಶಿಫಾರಸು ಮಾಡಲಾಗಿತ್ತು. ಆದರೆ ಅಂತಿಮ ಪಟ್ಟಿಯಲ್ಲಿ ಅವರು ಸ್ಥಾನ ಗಳಿಸಿರಲಿಲ್ಲ.

ಕೊಡಗಿನವರಾದ ಎಂ.ಪಿ.ಗಣೇಶ್ 1972ರ ಮ್ಯೂನಿಚ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಭಾರತ ತಂಡದಲ್ಲಿದ್ದರು. ಅವರಿದ್ದ ತಂಡ 1971ರ ವಿಶ್ವಕಪ್‌ನಲ್ಲಿ ಕಂಚು ಮತ್ತು1973ರ ವಿಶ್ವಕಪ್‌ನಲ್ಲಿ ಬೆಳ್ಳಿ ಪದಕ ಗಳಿಸಿತ್ತು. ಚಿಕ್ಕಬಳ್ಳಾಪುರದವರಾದ ಸುಮಾ 10 ಮೀಟರ್ಸ್ ಏರ್ ರೈಫಲ್ ವಿಭಾಗದಲ್ಲಿ ಜಂಟಿ ವಿಶ್ವ ದಾಖಲೆ ಹೊಂದಿದ್ದಾರೆ.

‘ಎಂ.ಪಿ.ಗಣೇಶ್ ಮತ್ತು ತರುಣ್ ದೀಪ್ ಹೆಸರನ್ನು ಹೆಚ್ಚುವರಿಯಾಗಿ ಸೇರಿಸಲಾಗಿದೆ. ಏಳು ಮಂದಿ ಮಹಿಳೆಯರು ಅಂತಿಮ ಪಟ್ಟಿಯಲ್ಲಿ ಸ್ಥಾನ ಗಳಿಸುವುದು ಬಹುತೇಕ ಖಚಿತವಾಗಿದ್ದು ಗಣೇಶ್ ಮತ್ತು ತರುಣ್‌ದೀಪ್ ಅವರನ್ನು ಪ್ರಶಸ್ತಿಗೆ ಪರಿಗಣಿಸಬೇಕೇ ಎಂಬುದನ್ನು ಗೃಹ ಸಚಿವಾಲಯದ ಪದ್ಮ ಪ್ರಶಸ್ತಿ ಸಮಿತಿ ನಿರ್ಧರಿಸಲಿದೆ’ ಎಂದು ಕ್ರೀಡಾ ಸಚಿವಾಲಯದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.