ADVERTISEMENT

ಉದ್ದೀಪನ ಮದ್ದು ಸೇವನೆ ಪರೀಕ್ಷೆ: ಆನ್‌ಲೈನ್‌ ಮೂಲಕ ಪ್ರಕರಣಗಳ ವಿಚಾರಣೆ

ನಾಡಾ ಮಹಾ ನಿರ್ದೇಶಕರ‌ ಹೇಳಿಕೆ

ಪಿಟಿಐ
Published 6 ಮೇ 2020, 17:13 IST
Last Updated 6 ಮೇ 2020, 17:13 IST

ನವದೆಹಲಿ: ರಾಷ್ಟ್ರೀಯ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಪ್ರಕರಣಗಳು ಬಾಕಿ ಉಳಿಯದಂತೆ ನೋಡಿಕೊಳ್ಳಲು ರಾಷ್ಟ್ರೀಯ ಉದ್ದೀಪನ ಮದ್ದು ಸೇವನೆ ತಡೆ ಘಟಕವು (ನಾಡಾ), ಪ್ರಕರಣಗಳ ವಿಚಾರಣೆಗಳನ್ನು ಆನ್‌ಲೈನ್‌ ಮೂಲಕ ನಡೆಸಲು ನಿರ್ಧರಿಸಿದೆ. ಮೇ 8ರಿಂದ ಈ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ನಾಡಾ ಮಹಾನಿರ್ದೇಶಕ ನವೀನ್‌ ಅಗರವಾಲ್ ಬುಧವಾರ‌ ಹೇಳಿದ್ದಾರೆ.

‘ಆನ್‌ಲೈನ್‌ ವಿಚಾರಣೆಯನ್ನು 8ರಿಂದ ಆರಂಭಿಸುತ್ತಿದ್ದೇವೆ. ಉದ್ದೀಪನ ಮದ್ದು ಸೇವನೆ ತಡೆ ಶಿಸ್ತು ಸಮಿತಿ (ಎಡಿಡಿಪಿ) ಹಾಗೂಉದ್ದೀಪನ ಮದ್ದು ಸೇವನೆ ತಡೆ ಮೇಲ್ಮನವಿ ಸಮಿತಿಗಳು (ಎಡಿಎಪಿ) ಬಾಕಿ ಇರುವ ಪ್ರಕರಣಗಳ ವಿಚಾರಣೆ ನಡೆಸಲಿವೆ’ ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಅಗರವಾಲ್‌ ತಿಳಿಸಿದ್ದಾರೆ.

‘ಹೋದ ವರ್ಷ ಎಡಿಡಿಪಿ ಹಾಗೂ ಎಡಿಎಪಿ, ನಾಡಾ ಇತಿಹಾಸದಲ್ಲೇ ಗರಿಷ್ಠ ಎನ್ನಬಹುದಾದ, ಅಂದರೆ 180 ಪ್ರಕರಣಗಳನ್ನು ವಿಲೇವಾರಿ ಮಾಡಿದ್ದವು’ ಎಂದು ಅವರು‌ ವಿವರಿಸಿದರು.

ADVERTISEMENT

‘ಆನ್‌ಲೈನ್‌ ಮೂಲಕ ನಡೆಸುವ ವಿಚಾರಣೆಗಳಿಗೆ ಹಲವು ತಾಂತ್ರಿಕ ತೊಂದರೆಗಳು ಎದುರಾಗಬಹುದು. ಅದರಲ್ಲಿ ಇಂಟರ್‌ನೆಟ್‌ ಸಮಸ್ಯೆಯೂ ಒಂದು. ಸಮಸ್ಯೆ ಪರಿಹರಿಸಲು ಸಾಧ್ಯವಾದ ಪ್ರಯತ್ನ ಮಾಡುತ್ತೇವೆ. ಆಡಿಯೊ ಕಾಲ್‌ ಮೂಲಕ ಸಂಪರ್ಕಿಸಲು ಅಥ್ಲೀಟುಗಳಿಗೆ ಅವಕಾಶ ನೀಡಲಾಗುವುದು’ ಎಂದು ಅವರು ನುಡಿದರು.

ಕೊರೊನಾ ಹಾವಳಿ ನಿಯಂತ್ರಿಸಲು ವಿಧಿಸಿರುವ ಲಾಕ್‌ಡೌನ್‌ನಿಂದಾಗಿ ಮದ್ದು ಸೇವನೆ ಪರೀಕ್ಷೆ ಕಷ್ಟವಾಗುತ್ತಿದೆ ಎಂದು ನಾಡಾ ಈ ಮೊದಲು ಹೇಳಿತ್ತು.

‘ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಲು ಎನ್‌ಐಎಸ್‌ ಪಟಿಯಾಲಾ ಹಾಗೂ ಬೆಂಗಳೂರಿನಲ್ಲಿರುವ ಭಾರತ ಕ್ರೀಡಾ ಪ್ರಾಧಿಕಾರ (ಸಾಯ್‌) ಕೇಂದ್ರಕ್ಕೆ ಅಥ್ಲೀಟುಗಳ ಪ್ರವೇಶ ಹಾಗೂ ಹೊರ ಹೋಗುವುದರ ಮೇಲೆ ನಿಷೇಧ ಹೇರಲಾಗಿದೆ. ಮದ್ದು ಸೇವನೆ ಪರೀಕ್ಷೆಗಾಗಿ ಅಧಿಕಾರಿಗಳು ತೆರಳಲು ಅವಕಾಶ ನೀಡಲಾಗುತ್ತದೆಯೇ ಎಂಬುದರ ಬಗ್ಗೆ ಕ್ರೀಡಾ ಸಚಿವಾಲಯದೊಂದಿಗೆ ಚರ್ಚೆ ನಡೆಸುತ್ತೇವೆ’ ಎಂದು ಅಗರವಾಲ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.