ADVERTISEMENT

ಮುಳುಗಿದ ಬೋಟ್‌ | ಅಪಾಯದಿಂದ ಪಾರಾದ ಗಂಗೂಲಿ ಸೋದರ, ಅತ್ತಿಗೆ

ಪುರಿ ಕಡಲ ತೀರ ಬಳಿ ಮುಳುಗಿದ ಸ್ಪೀಡ್‌ ಬೋಟ್‌: ತನಿಖೆಗೆ ಜಿಲ್ಲಾಡಳಿತ ಸೂಚನೆ

ಪಿಟಿಐ
Published 26 ಮೇ 2025, 15:58 IST
Last Updated 26 ಮೇ 2025, 15:58 IST
<div class="paragraphs"><p> ಬೋಟ್‌ (ಪ್ರಾತಿನಿಧಿಕ ಚಿತ್ರ)</p></div>

ಬೋಟ್‌ (ಪ್ರಾತಿನಿಧಿಕ ಚಿತ್ರ)

   

ಪುರಿ: ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಅಣ್ಣ ಸ್ನೇಹಾಶಿಶ್‌ ಗಂಗೂಲಿ ಮತ್ತು ಅತ್ತಿಗೆ ಅರ್ಪಿತಾ ಅವರು ಇತರ ಕೆಲವರೊಂದಿಗೆ ಪುರಿ ತೀರದ ಸಮುದ್ರದಲ್ಲಿ ವಿಹರಿಸುತ್ತಿದ್ದ ಸ್ಪೀಡ್‌ಬೋಟ್‌ ಮಗುಚಿದ್ದು, ಅವರು ಜೀವರಕ್ಷಕರ ಸಹಾಯದಿಂದ ಪಾರಾಗಿದ್ದಾರೆ. ಈ ಘಟನೆಗೆ ಸಂಬಂಧಿಸಿ ತನಿಗೆ ನಡೆಸುವಂತೆ ಪುರಿ ಜಿಲ್ಲಾಡಳಿತ ಆದೇಶಿಸಿದೆ.

ಘಟನೆ ಮೇ 24ರಂದು ನಡೆದಿದ್ದರೂ, ವಿಷಯ ಸೋಮವಾರ ಬಹಿರಂಗವಾಗಿದೆ. ‘ಈ ಘಟನೆಗೆ ಕಾರಣವೇನೆಂದು ತನಿಖೆ ನಡೆಸುವಂತೆ ಆದೇಶ ನೀಡಿದ್ದೇನೆ. ದೋಣಿ ವಿಹಾರ ನಿರ್ವಹಣೆಯ ಗುತ್ತಿಗೆ ಪಡೆದ ಅಪರೇಟರ್‌ ಕಡೆಯಿಂದ ಸುರಕ್ಷತಾ ನಿಯಮ ಪಾಲನೆಯಲ್ಲಿ ಲೋಪವಾಗಿರುವುದು ಕಂಡುಬಂದರೆ ಕ್ರಮ ಕೈಗೊಳ್ಳಲಾಗುವುದು’ ಎಂದು ಪುರಿ ಜಿಲ್ಲಾಧಿಕಾರಿ ಸಿದ್ಧಾರ್ಥಶಂಕರ್ ಸ್ವೇನ್ ತಿಳಿಸಿದ್ದಾರೆ.

ADVERTISEMENT

ಸ್ಕೈಡ್ರೈವ್‌ ಅಡ್ವೆಂಚರ್‌ ಮತ್ತು ವಾಟರ್‌ ಸ್ಪೋರ್ಟ್ಸ್‌ ಹೆಸರಿನ ಖಾಸಗಿ ಸಂಸ್ಥೆಗೆ ಒಡಿಶಾ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರವು ಇಲ್ಲಿ ಜಲಕ್ರೀಡಾ ಚಟುವಟಿಕೆ ನಡೆಸಲು ಅನುಮತಿ ನೀಡಿತ್ತು.

‘ಶನಿವಾರ ಮಧ್ಯಾಹ್ನ ಘಟನೆ ನಡೆದರೂ, ಕುಟುಂಬ ಸದಸ್ಯರು ದೂರು ಕೊಟ್ಟಿರಲಿಲ್ಲ. ನಮಗೆ ಗೊತ್ತಾದ ಬಳಿಕ ಕುಟುಂಬ ಸದಸ್ಯರನ್ನು ಸಂಪರ್ಕಿಸಿದ್ದೇವೆ. ಇದು ಮಾನವ ತಪ್ಪಿನಿಂದ ಆಗಿದ್ದೊ ಅಥವಾ ಪ್ರಾಕೃತಿಕ ಕಾರಣದಿಂದ ಆಗಿದೆಯೊ ಎಂಬುದನ್ನು ತಿಳಿದುಕೊಳ್ಳಲು ಸೂಚಿಸಿದ್ದೇವೆ’ ಎಂದು ಪುರಿ ಎಸ್‌ಪಿ ವಿನೀತ್ ಅಗರವಾಲ್ ತಿಳಿಸಿದರು.

ಸ್ಥಳೀಯ ಟೆಲಿವಿಷನ್ ಚಾನೆಲ್‌ ಪ್ರಸಾರ ಮಾಡಿರುವ ದೃಶ್ಯಾವಳಿಗಳ ಪ್ರಕಾರ ಸಮುದ್ರ ಪ್ರಕ್ಷುಬ್ಧವಾಗಿದ್ದು, ದೈತ್ಯ ಅಲೆಯೊಂದು ದೋಣಿಗೆ ಬಡಿದ ಕಾರಣ ಅದು ಆಯತಪ್ಪಿ ಬುಡಮೇಲಾಗಿದೆ. ಅರ್ಪಿತಾ, ಸ್ನೇಹಾಶಿಶ್ ಸೇರಿ ಎಲ್ಲರೂ ಅಪಾಯಕ್ಕೆ ಸಿಲುಕಿದ್ದರು.

‘ದೇವರ ದಯದಿಂದ ನಾವು ಬದುಕುಳಿದೆವು. ನಾವು ಇನ್ನೂ ಆ ಭಯದ ಗುಂಗಿನಿಂದ ಹೊರಬಂದಿಲ್ಲ. ಸಮುದ್ರದಲ್ಲಿ ಜಲಕ್ರೀಡೆ ಚಟುವಟಿಕೆಯನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಕೋಲ್ಕತ್ತಕ್ಕೆ ಮರಳಿದ ಮೇಲೆ ಈ ಬಗ್ಗೆ ಪುರಿ ಎಸ್‌ಪಿ ಮತ್ತು ಒಡಿಶಾ ಸಿಎಂ ಅವರಿಗೆ ಪತ್ರ ಬರೆಯುವುದಾಗಿ’ ಅರ್ಪಿತಾ ತಿಳಿಸಿದ್ದಾರೆ. ‘ಜೀವರಕ್ಷಕರ ಸಕಾಲಿಕ ನೆರವು ನಮ್ಮನ್ನು ಕಾಪಾಡಿತು’ ಎಂದಿದ್ದಾರೆ. ರಬ್ಬರ್‌ ಬೋಟ್‌ಗಳನ್ನು ಬಳಸಿ ಅಪಾಯಕ್ಕೆ ಸಿಲುಕಿದವರನ್ನು ರಕ್ಷಿಸಲಾಯಿತು.

‘ಸಾಹಸ ಕ್ರೀಡಾ ಅಪರೇಟರ್‌ಗಳ ದುರಾಸೆ ಇದಕ್ಕೆ ಕಾರಣ’ ಎಂದು ಅರ್ಪಿತಾ ದೂರಿದ್ದಾರೆ. 10 ಮಂದಿ ಕುಳಿತುಕೊಳ್ಳಲು ವಿನ್ಯಾಸ ಮಾಡಿದ್ದ ದೋಣಿಯಲ್ಲಿ ಬರೇ ನಾಲ್ಕು ಮಂದಿ ಇದ್ದರು. ಹೀಗಾಗಿ ಅದಕ್ಕೆ ನಿಯಂತ್ರಣ ಇರಲಿಲ್ಲ. ದೊಡ್ಡ ಅಲೆಗಳನ್ನು ತಡೆದುಕೊಳ್ಳುವಲ್ಲಿ ಸಾಧ್ಯವಾಗುತ್ತಿರಲಿಲ್ಲ. ಭಾರ ಕಡಿಮೆಯಿದ್ದ ಕಾರಣ ದೋಣಿ ನಿಯಂತ್ರಣ ತಪ್ಪಿತು. ಸಮುದ್ರವೂ ಪ್ರಕ್ಷುಬ್ಧವಾಗಿತ್ತು’ ಎಂದು ಅವರು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.