ADVERTISEMENT

ಪ್ರಮುಖ ಸ್ಪರ್ಧಿಗಳ ಆಕರ್ಷಣೆ

ಅ. 15ರಿಂದ ಬೆಂಗಳೂರಿನಲ್ಲಿ ರಾಷ್ಟ್ರೀಯ ಓಪನ್ ಅಥ್ಲೆಟಿಕ್ಸ್

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2022, 12:22 IST
Last Updated 27 ಸೆಪ್ಟೆಂಬರ್ 2022, 12:22 IST

ಬೆಂಗಳೂರು: ಇತ್ತೀಚೆಗೆ ನಡೆದ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಪದಕ ಗೆದ್ದ ಕೆಲವು ಸ್ಪರ್ಧಿಗಳು ಸೇರಿದಂತೆ ದೇಶದ ಪ್ರಮುಖ ಅಥ್ಲೀಟ್‌ಗಳ ಪ್ರದರ್ಶನ ಕಣ್ತುಂಬಿಕೊಳ್ಳುವ ಅವಕಾಶ ಬೆಂಗಳೂರಿನ ಕ್ರೀಡಾಪ್ರೇಮಿಗಳಿಗೆ ಲಭಿಸಲಿದೆ.

ಕರ್ನಾಟಕ ಅಥ್ಲೆಟಿಕ್ಸ್ ಸಂಸ್ಥೆಯ (ಕೆಎಎ) ಆಶ್ರಯದಲ್ಲಿ ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ಅ. 15ರಿಂದ 19ರವರೆಗೆ 61ನೇ ರಾಷ್ಟ್ರೀಯ ಓಪನ್ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ ಆಯೋಜನೆಯಾಗಿದ್ದು, ದೇಶದ ಘಟಾನುಘಟಿ ಸ್ಪರ್ಧಿಗಳು ಪದಕಕ್ಕಾಗಿ ಪೈಪೋಟಿ ನಡೆಸಲಿದ್ದಾರೆ.

ದ್ಯುತಿ ಚಾಂದ್‌, ಹಿಮಾ ದಾಸ್, ಅನುರಾಣಿ, ಮುರಳಿ ಶ್ರೀಶಂಕರ್‌, ಜೈಶಂಕರ್‌, ಅವಿನಾಶ್‌ ಸಬ್ಳೆ, ಎಲ್ದೋಸ್‌ ಪಾಲ್‌ ಮತ್ತು ಅಬ್ದುಲ್ಲಾ ಅಬೂಬಕರ್‌ ಅವರು ಪಾಲ್ಗೊಳ್ಳಲಿದ್ದಾರೆ. ಕರ್ನಾಟಕದ ಯುವ ಅಥ್ಲೀಟ್‌ಗಳಾದ ಡಿ.ಪಿ.ಮನು, ಚೇತನ್‌, ಅಭಿನ್‌ ದೇವಾಡಿಗ ಮತ್ತು ಎನ್‌.ಎಸ್‌.ಸಿಮಿ ಅವರು ತಮ್ಮ ಸಾಮರ್ಥ್ಯ ತೋರಲಿದ್ದಾರೆ. ರಾಜ್ಯದ 45 ಅಥ್ಲೀಟ್‌ಗಳು ಪಾಲ್ಗೊಳ್ಳಲಿದ್ದಾರೆ.

ADVERTISEMENT

‘ಬೆಂಗಳೂರಿನಲ್ಲಿ ಸುಮಾರು ಮೂರು ದಶಕಗಳ ಬಳಿಕ ಈ ಚಾಂಪಿಯನ್‌ಷಿಪ್‌ನ ಆಯೋಜನೆಯಾಗಿದೆ. ಪುರುಷರ ಮತ್ತು ಮಹಿಳೆಯರ ವಿಭಾಗಗಳಲ್ಲಿ 1,200ಕ್ಕೂ ಅಧಿಕ ಅಥ್ಲೀಟ್‌ಗಳು ಪಾಲ್ಗೊಳ್ಳಲಿದ್ದಾರೆ’ ಎಂದು ಚಾಂಪಿಯನ್‌ಷಿಪ್‌ನ ಸಂಘಟನಾ ಸಮಿತಿಯ ಅಧ್ಯಕ್ಷ, ಸಚಿವರೂ ಆಗಿರುವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಈ ಪ್ರಮುಖ ಚಾಂಪಿಯನ್‌ಷಿಪ್‌ಗೆ ಕರ್ನಾಟಕ ಆತಿಥ್ಯ ವಹಿಸುತ್ತಿರುವುದು ಹೆಮ್ಮೆಯ ಸಂಗತಿ. ಕೂಟ ಯಶಸ್ವಿಯಾಗಿ ನಡೆಸಲು ಬೇಕಾದ ಎಲ್ಲ ನೆರವನ್ನು ರಾಜ್ಯ ಸರ್ಕಾರ ಒದಗಿಸಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಲಿದ್ದಾರೆ’ ಎಂದು ಹೇಳಿದರು.

ಅಥ್ಲೆಟಿಕ್‌ ಫೆಡರೇಷನ್‌ ಆಫ್‌ ಇಂಡಿಯಾ (ಎಎಫ್‌ಐ) ಹಿರಿಯ ಉಪಾಧ್ಯಕ್ಷರಾದ ಲಾಂಗ್‌ಜಂಪರ್‌ ಅಂಜು ಬಾಬಿ ಜಾರ್ಜ್‌ ಮಾತನಾಡಿ, ‘ಓಪನ್‌ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ ಎಎಫ್‌ಐನ ಪ್ರತಿಷ್ಠಿತ ಕೂಟ ಆಗಿದೆ. ಕರ್ನಾಟಕವು ಈ ಕೂಟವನ್ನು ಯಶಸ್ವಿಯಾಗಿ ಆಯೋಜಿಸುವ ವಿಶ್ವಾಸವಿದೆ. ರಾಷ್ಟ್ರೀಯ ಕ್ರೀಡಾಕೂಟದ ಬೆನ್ನಲ್ಲೇ ಈ ಚಾಂಪಿಯನ್‌ಷಿಪ್‌ ನಡೆಯುತ್ತಿರುವುದರಿಂದ ಅಥ್ಲೀಟ್‌ಗಳೂ ಅತ್ಯುತ್ತಮ ಫಾರ್ಮ್‌ನಲ್ಲಿದ್ದು, ಪ್ರಬಲ ಪೈಪೋಟಿ ನಿರೀಕ್ಷಿಸಬಹುದು’ ಎಂದರು.

ವಿವಿಧ ರಾಜ್ಯಗಳ ತಂಡಗಳಲ್ಲದೆ ರೈಲ್ವೇಸ್‌, ಸರ್ವಿಸಸ್‌, ಎಲ್‌ಐಸಿ, ಒಎನ್‌ಜಿಸಿಯನ್ನು ಪ್ರತಿನಿಧಿಸುವ ಅಥ್ಲೀಟ್‌ಗಳೂ ಭಾಗವಹಿಸಲಿದ್ದಾರೆ. ನಾಲ್ಕು ದಿನಗಳಲ್ಲಿ ಪುರುಷ ಹಾಗೂ ಮಹಿಳೆಯರ ವಿಭಾಗಗಳಲ್ಲಿ 47 ಸ್ಪರ್ಧೆಗಳು ನಡೆಯಲಿವೆ. ನಡಿಗೆ ಸ್ಪರ್ಧೆ ಕಬ್ಬನ್‌ ಪಾರ್ಕ್‌ನಲ್ಲಿ ಆಯೋಜನೆಯಾಗಲಿದೆ.

ಪ್ಯಾರಿಸ್‌ ಒಲಿಂಪಿಕ್ಸ್ ಮತ್ತು ಏಷ್ಯನ್ ಗೇಮ್ಸ್‌ಗೆ ಭಾರತ ತಂಡದ ಪೂರ್ವಸಿದ್ಧತಾ ಶಿಬಿರಕ್ಕೆ ಆಯ್ಕೆ ಟ್ರಯಲ್ಸ್ ಆಗಿಯೂ ಈ ಚಾಂಪಿಯನ್‌ಷಿಪ್‌ಅನ್ನು ಪರಿಗಣಿಸಲಾಗುತ್ತದೆ.

ಕೆಎಎ ಕಾರ್ಯದರ್ಶಿ ಎ.ರಾಜವೇಲು, ಕೂಟದ ನಿರ್ದೇಶಕ ಸತ್ಯನಾರಾಯಣ, ಕೆ.‍ಪಿ.ಪುರುಷೋತ್ತಮ್‌ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.