ADVERTISEMENT

ನೀರಜ್ ಬೆಳ್ಳಿ ಬೆಡಗು: ಜಾವೆಲಿನ್ ಥ್ರೋನಲ್ಲಿ ಮಿಂಚಿದ ಭಾರತದ ಕಣ್ಮಣಿ

ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ 19 ವರ್ಷಗಳ ನಂತರ ಒಲಿದ ಪದಕ

​ಪ್ರಜಾವಾಣಿ ವಾರ್ತೆ
Published 25 ಜುಲೈ 2022, 8:29 IST
Last Updated 25 ಜುಲೈ 2022, 8:29 IST
ತ್ರಿವರ್ಣ ಧ್ವಜದೊಂದಿಗೆ ನೀರಜ್ ಚೋಪ್ರಾ  –ಎಪಿ/ಪಿಟಿಐ
ತ್ರಿವರ್ಣ ಧ್ವಜದೊಂದಿಗೆ ನೀರಜ್ ಚೋಪ್ರಾ  –ಎಪಿ/ಪಿಟಿಐ   

ಯೂಜಿನ್, ಅಮೆರಿಕ: ಕ್ರೀಡಾಪ್ರೇಮಿಗಳ ಕಣ್ಮಣಿ ನೀರಜ್ ಚೋಪ್ರಾ ಭಾನುವಾರ ಬೆಳ್ಳಂಬೆಳಿಗ್ಗೆ ಭಾರತೀಯರಿಗೆ ಬೆಳ್ಳಿ ಪದಕದ ಕಾಣಿಕೆ ನೀಡುವುದರೊಂದಿಗೆ ‘ಶುಭ ಮುಂಜಾನೆ’ಯ ಸಂದೇಶ ನೀಡಿದರು.

ಅಮೆರಿಕದ ಯೂಜಿನ್‌ನಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನ ಪುರುಷರ ಜಾವೆಲಿನ್ ಥ್ರೋನಲ್ಲಿ 88.13 ಮೀಟರ್ಸ್ ದೂರ ಎಸೆತದ ಸಾಧನೆ ಮಾಡಿದ ನೀರಜ್ ಬೆಳ್ಳಿ ಗೆದ್ದರು. ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಒಲಿದ ಎರಡನೇ ಮತ್ತು ಪುರುಷರ ವಿಭಾಗದಲ್ಲಿ ಸಂದ ಮೊದಲ ಪದಕ ಇದಾಗಿದೆ.

2003ರಲ್ಲಿ ಪ್ಯಾರಿಸ್‌ನಲ್ಲಿ ನಡೆದಿದ್ದ ವಿಶ್ವ ಅಥ್ಲೆಟಿಕ್ಸ್‌ನ ಮಹಿಳೆಯರ ಲಾಂಗ್‌ಜಂಪ್‌ನಲ್ಲಿ ಅಂಜು ಬಾಬಿ ಜಾರ್ಜ್‌ ಕಂಚಿನ ಪದಕ ಗಳಿಸಿದ್ದರು. ಅದರ ನಂತರ ಮತ್ತೊಂದು ಪದಕ ಭಾರತದ ಮಡಿಲು ಸೇರಲು 19 ವರ್ಷಗಳು ಬೇಕಾದವು.ಇಡೀ ಭಾರತದ ಕ್ರೀಡಾಭಿಮಾನಿಗಳ ನಿರೀಕ್ಷೆಯ ಭಾರ ಹೊತ್ತು ಕಣಕ್ಕಿಳಿದಿದ್ದ ನೀರಜ್ ನಿರಾಶೆಗೊಳಿಸಲಿಲ್ಲ. ಒಲಿಂಪಿಕ್ಸ್‌ ಟ್ರ್ಯಾಕ್‌ ಮತ್ತು ಫೀಲ್ಡ್‌ನಲ್ಲಿ ದೇಶಕ್ಕೆ ಪ್ರಥಮ ಚಿನ್ನದ ಕಾಣಿಕೆ ನೀಡಿದ್ದ ಹರಿಯಾಣ ಹುಡುಗ ವಿಶ್ವ ಅಂಗಳದಲ್ಲಿ ಬೆಳ್ಳಿ ಬೆಡಗು ಮೂಡಿಸಿದರು. ಇಲ್ಲಿಯೂ ಅವರು ಚಿನ್ನ ಗೆಲ್ಲುವ ನಿರೀಕ್ಷೆಯೇ ಹೆಚ್ಚಿತ್ತು. ಟೋಕಿಯೊ ಒಲಿಂಪಿಕ್ಸ್‌ನಲ್ಲಿ (87.58 ಮೀ) ಜಾವೆಲಿನ್ ಎಸೆದಿದ್ದ ದೂರಕ್ಕಿಂತಲೂ ಇಲ್ಲಿ ಸ್ವಲ್ಪ ಹೆಚ್ಚು ದೂರ ಎಸೆದರು. ಆದರೆ, ಗ್ರೆನಾಡದ ಆ್ಯಂಡರ್ಸನ್ ಪೀಟರ್ಸ್ (90.54 ಮೀ) ನೀರಜ್‌ಗಿಂತ ಸುಮಾರು ಒಂದು ಮೀಟರ್‌ನಷ್ಟು ಹೆಚ್ಚು ಅಂತರವನ್ನು ಸಾಧಿಸಿದರು. ಅದರೊಂದಿಗೆ ಚಿನ್ನದ ಪದಕ ಗೆದ್ದರು. ಜೆಕ್ ಗಣರಾಜ್ಯದ ಯಾಕೋಬ್ ವಾದಲೆಹ್ (88.09 ಮೀ) ಕಂಚು ಗಳಿಸಿದರು. ನೀರಜ್‌ಗೆ ಫೈನಲ್‌ ಸುತ್ತಿನಲ್ಲಿ ಕಠಿಣ ಪೈಪೋಟಿ ಇತ್ತು. ಅವರಿಗೆ ಒಲಿಂಪಿಕ್ಸ್‌ನಲ್ಲಿ ನಿಕಟ ಸ್ಪರ್ಧೆಯೊಡ್ಡಿದ್ದಜರ್ಮನಿಯ ಜೂಲಿಯನ್ ವೆಬರ್ ಮತ್ತು ಪಾಕಿಸ್ತಾನದ ಅರ್ಷದ್ ನದೀಂ ಇಲ್ಲಿ ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನ ಪಡೆದರು.ನೀರಜ್ ಈಚೆಗೆ ಪಾವೊ ನರ್ಮಿ ಗೇಮ್ಸ್‌ನಲ್ಲಿ 89.30 ಮೀ ಮತ್ತು ಡೈಮಂಡ್ ಲೀಗ್‌ನಲ್ಲಿ 89.94 ಮೀ ಸಾಧನೆ ಮಾಡಿದ್ದರು. ಅದರಿಂದಾಗಿ ಇಲ್ಲಿ 90 ಮೀಟರ್ಸ್ ಗೆರೆಯನ್ನು ಮೀರಿಸುವ ನಿರೀಕ್ಷೆ ಇತ್ತು. ಆದರೆ, ತೊಡೆಯ ಸ್ನಾಯುವಿನ ಗಾಯ ಅವರನ್ನು ಕಾಡಿತು.

ADVERTISEMENT

‘ಇಲ್ಲಿಯ ಪರಿಸ್ಥಿತಿಯು ಸವಾಲಿನದ್ದಾಗಿತ್ತು. ಎದುರಿನಿಂದ ಗಾಳಿ ಬೀಸುತ್ತಿತ್ತು. ಅಲ್ಲದೇ ಉಳಿದ ಪ್ರತಿಸ್ಪರ್ಧಿಗಳೂ ಉತ್ತಮ ಸಾಮರ್ಥ್ಯವುಳ್ಳವರಾಗಿದ್ದರು. ಆದರೆ ಇಲ್ಲಿ ಉತ್ತಮ ಸಾಧನೆ ಮಾಡುವ ಆತ್ಮವಿಶ್ವಾಸ ನನಗಿತ್ತು. ಮೊದಲ ಮೂರು ಥ್ರೋನಲ್ಲಿ ದೊಡ್ಡ ಅಂತರ ಸಾಧನೆಗೆ ಪ್ರಯತ್ನಿಸುತ್ತಲೇ ಇದ್ದೆ. ಆದರೆ ಆಗಲಿಲ್ಲ. ನಂತರದ ಹಂತದಲ್ಲಿ ಉತ್ತಮ ಥ್ರೋ ಮಾಡಿದೆ’ ಎಂದು ನೀರಜ್ ಸಂತಸ ವ್ಯಕ್ತಪಡಿಸಿದ್ದಾರೆ.

ತಮ್ಮ ಗಾಯದ ಬಗ್ಗೆಯೂ ಹೇಳಿದ ಅವರು, ‘ನಾಲ್ಕನೇ ಥ್ರೋ ಇನ್ನಷ್ಟು ದೂರ ಸಾಗುವ ನಿರೀಕ್ಷೆ ನನಗಿತ್ತು. ಆದರೆ ನನ್ನ ತೊಡೆಯ ಸ್ನಾಯವಿನಲ್ಲಿ ನೋವು ಕಾಡಿತು. ಆದ್ದರಿಂದ ನನ್ನ ಶ್ರೇಷ್ಠ ದಾಖಲೆಯನ್ನೂ ಸರಿಗಟ್ಟಲಾಗಲಿಲ್ಲ’ ಎಂದರು.

‘ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಭಾರತಕ್ಕೆ 19 ವರ್ಷದ ನಂತರ ಪದಕ ಗೆದ್ದುಕೊಟ್ಟಿರುವುದಕ್ಕೆ ಹೆಮ್ಮೆಯಾಗುತ್ತಿದೆ. ಒಲಿಂಪಿಕ್ಸ್‌ಗಿಂತಲೂ ವಿಶ್ವ ಚಾಂಪಿಯನ್‌ಷಿಪ್‌ ಕಠಿಣ. ಇಲ್ಲಿಯ ದಾಖಲೆಗಳು ಒಲಿಂಪಿಕ್‌ ಕೂಟಕ್ಕಿಂತಲೂ ಹೆಚ್ಚಿನದ್ದಾಗಿರುತ್ತವೆ’ ಎಂದು 24 ವರ್ಷದ ನೀರಜ್ ಹೇಳಿದರು.

ಇದೇ ತಿಂಗಳು ಬರ್ಮಿಂಗ್‌ಹ್ಯಾಮ್‌ನಲ್ಲಿ ಆರಂಭವಾಗಲಿರುವ ಕಾಮನ್‌ವೆಲ್ತ್ ಕೂಟದಲ್ಲಿಯೂ ಚೋಪ್ರಾ ಕಣಕ್ಕಿಳಿಯಲಿದ್ದಾರೆ. ಅಲ್ಲಿಯೂ ಅವರಿಗೆ ಕಠಿಣ ಸವಾಲು ಕಾದಿದೆ. 2018ರ ಗೋಲ್ಡ್‌ಕೋಸ್ಟ್‌ ಕೂಟದಲ್ಲಿ ಚಿನ್ನ ಜಯಿಸಿದ್ದರು.

ಇದೇ ಪರಿಸ್ಥಿತಿ ಎದುರಿಸಿದ್ದೆ: ಅಂಜು

‘ಪ್ಯಾರಿಸ್‌ನಲ್ಲಿ 2013ರಲ್ಲಿ ನಾನು ಎದುರಿಸಿದ ಸ್ಥಿತಿಯನ್ನೇ ನೀರಜ್‌ ಯೂಜೀನ್‌ನಲ್ಲಿ ಎದುರಿಸಿದ್ದರು. ಮೂರು ಸುತ್ತುಗಳ ಬಳಿಕ ಅವರು ನಾಲ್ಕನೇ ಸ್ಥಾನದಲ್ಲಿದ್ದರು. ನಾನು ಕೂಡ ಮೂರು ಪ್ರಯತ್ನಗಳ ಬಳಿಕ ನಾಲ್ಕನೇ ಸ್ಥಾನದಲ್ಲಿದ್ದೆ. ಪದಕ ಗೆಲ್ಲಲೇಬೇಕೆಂಬ ದೃಢನಿರ್ಧಾರದಿಂದಾಗಿ ನನಗೆ ಯಶಸ್ಸು ಲಭಿಸಿತು. ನೀರಜ್‌ ಅವರಿಗೂ ಹೀಗೆ ಆಗಿರಬಹುದು’ ಎಂದು ವಿಶ್ವ ಅಥ್ಲೆಟಿಕ್ಸ್ ಕಂಚು ವಿಜೇತೆ ಲಾಂಗ್‌ ಜಂಪ್ ಪಟು ಅಂಜು ಬಾಬಿ ಜಾರ್ಜ್‌ ಹೇಳಿದ್ದಾರೆ.

ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್‌, ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್, ರಾಜಸ್ಥಾನ, ಉತ್ತರ ಪ್ರದೇಶ, ಪಂಜಾಬ್‌ ಮುಖ್ಯಮಂತ್ರಿಗಳು ನೀರಜ್‌ಗೆ ಅಭಿನಂದನೆ ತಿಳಿಸಿದ್ದಾರೆ.

ನೀರಜ್‌ ಅವರು ವಿಜಯಪತಾಕೆಗಳ ಮೂಲಕ ದೇಶ ಹೆಮ್ಮೆಪಡುವಂತೆ ಮಾಡುತ್ತಿದ್ದಾರೆ. ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ ಜಾವೆಲಿನ್‌ ಥ್ರೊನಲ್ಲಿ ಬೆಳ್ಳಿ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿರುವ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ನೀವು ನಿಜವಾದ ಚಾಂಪಿಯನ್‌.
- ರಾಮನಾಥ ಕೋವಿಂದ್‌, ರಾಷ್ಟ್ರಪತಿ

*

ನಮ್ಮ ಶ್ರೇಷ್ಠ ಅಥ್ಲೀಟ್‌ ಅದ್ಭುತ ಸಾಧನೆ ಇದು. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಐತಿಹಾಸಿಕ ಬೆಳ್ಳಿ ಜಯಿಸಿದ ನೀರಜ್ ಅವರಿಗೆ ಅಭಿನಂದನೆಗಳು. ದೇಶದ ಕ್ರೀಡೆಗೆ ಇದೊಂದು ವಿಶೇಷ ಕ್ಷಣ. ನೀರಜ್ ಅವರ ಮುಂಬರುವ ಸ್ಪರ್ಧೆಗಳಿಗೆ ಶುಭ ಹಾರೈಕೆಗಳು.
- ನರೇಂದ್ರ ಮೋದಿ, ಪ್ರಧಾನಮಂತ್ರಿ

ನೀರಜ್ ಚೋಪ್ರಾ ಅವರ ತವರೂರು ಪಾಣಿಪತ್ ಸಮೀಪದ ಗ್ರಾಮದಲ್ಲಿ ಕುಟುಂಬದ ಸದಸ್ಯರು ಮತ್ತು ಗ್ರಾಮಸ್ಥರು ಸಂತಸದಿಂದ ನರ್ತಿಸಿದರು. ಸಿಹಿ ಹಂಚಿ ಸಂಭ್ರಮಿಸಿದರು –ಟ್ವಿಟರ್ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.